ಅಕ್ರಮ ರೆಸಾರ್ಟ್ ನಿರ್ಮಾಣ ಮಾಲೀಕನಿಂದ ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ ಯತ್ನ, ಕರ್ತವ್ಯಕ್ಕೆ ಅಡ್ಡಿ
ಚಾಮರಾಜನಗರ

ಅಕ್ರಮ ರೆಸಾರ್ಟ್ ನಿರ್ಮಾಣ ಮಾಲೀಕನಿಂದ ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ ಯತ್ನ, ಕರ್ತವ್ಯಕ್ಕೆ ಅಡ್ಡಿ

August 6, 2018

ಗುಂಡ್ಲುಪೇಟೆ:  ತಾಲೂಕಿನ ಬಂಡೀಪುರ ಹುಲಿ ಯೋಜನೆಯ ಪರಿಸರ ಸೂಕ್ಷ್ಮ ಪ್ರದೇಶ ದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡುತ್ತಿದ್ದ ಕಟ್ಟಡವನ್ನು ನಿಲ್ಲಿಸುವಂತೆ ನೋಟಿಸ್ ನೀಡಲು ಹೋಗಿದ್ದ ಅರಣ್ಯಾಧಿಕಾರಿ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ರೆಸಾರ್ಟ್ ಮಾಲೀಕನ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನದ ಸೂಕ್ಷ್ಮ ಪ್ರದೇಶದ ಮಗುನಹಳ್ಳಿ ರಸ್ತೆಯಲ್ಲಿ ಸನಂ 218/5 ಹಾಗೂ 218/6ರಲ್ಲಿ ಜಮೀನು ಹೊಂದಿರುವ ರಾಜಸ್ಥಾನ ಮೂಲದ ರೆಸಾರ್ಟ್ ಮಾಲೀಕ ಬಿ.ಸುನಿಲ್ ಬಿನ್ ಶರ್ಮ ಎಂಬುವರು ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಗೋಪಾಲಸ್ವಾಮಿಬೆಟ್ಟ ಅರಣ್ಯವಲಯದ ಸಿಬ್ಬಂದಿಗಳು ಕಟ್ಟಡ ನಿರ್ಮಾಣ ಕಾಮಗಾರಿ ನಿಲ್ಲಿಸುವಂತೆ ನೋಟಿಸ್ ನೀಡಲು ಹೋಗಿದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ನೋಟಿಸ್ ಪಡೆಯದೆ ಕಳುಹಿಸಿದ್ದರು.

ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆರ್‍ಎಫ್‍ಒ ಪುಟ್ಟಸ್ವಾಮಿ ಹಾಗೂ ಸಿಬ್ಬಂದಿಗಳು ಭಾನುವಾರ ತೆರಳಿ ನೋಟಿಸ್ ತೆಗೆದು ಕೊಳ್ಳುವಂತೆ ಹೇಳಿದಾಗ ಸುನಿಲ್ ಹಾಗೂ ಸಹಚರರು ಮತ್ತೊಮ್ಮೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಅಲ್ಲದೆ ಘಟನೆಯ ವೀಡಿಯೋ ಮಾಡುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಮೊಬೈಲ್ ಕಸಿದುಕೊಳ್ಳಲು ಮುಂದಾಗಿದ್ದು ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ಯತ್ನ ಮಾಡಿ ಮತ್ತೊಮ್ಮೆ ಅವರು ಸ್ಥಳಕ್ಕೆ ಬರದಂತೆ ಬೆದರಿಕೆ ಹಾಕಿದ್ದಾರೆ ಎಂದು ಆರ್‍ಎಫ್‍ಒ ಪುಟ್ಟಸ್ವಾಮಿ, ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಬ್ ಇನ್ಸ್‍ಪೆಕ್ಟರ್ ಬಿ.ಎಸ್.ಶಿವರುದ್ರ ಸೆಕ್ಷನ್ 506, 353, 504 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »