ಮನೆ ಕಟ್ಟುವ ಆಸೆ ಮುರಿದು ಬಿತ್ತು: ಗದ್ಗದಿತರಾದ ನಿವೃತ್ತ ಶಿಕ್ಷಕಿ
ಮೈಸೂರು

ಮನೆ ಕಟ್ಟುವ ಆಸೆ ಮುರಿದು ಬಿತ್ತು: ಗದ್ಗದಿತರಾದ ನಿವೃತ್ತ ಶಿಕ್ಷಕಿ

June 15, 2019

ಮೈಸೂರು: ನಾನು ನಿವೃತ್ತಿ ಶಿಕ್ಷಕಿ, ನಿವೇಶನ ತೆಗೆದು ಕೊಂಡಿದ್ದೆ. ಮನೆ ಕಟ್ಟುವ ಉದ್ದೇಶವಿತ್ತು. ಹೀಗಾಗಿ ನನ್ನ ನಿವೃತ್ತಿ ಬಳಿಕ ಬಂದ 22,50,000 ರೂ. ಮೊತ್ತವನ್ನು ಐಎಂಎ ಸಂಸ್ಥೆಯಲ್ಲಿ ಹೂಡಿದೆ. ಮೊದಲಿಗೆ ಸರಿ ಯಾಗಿ ಬಡ್ಡಿ ಬರುತ್ತಿತ್ತು. ಕಳೆದ ಮೂರು ತಿಂಗಳಿಂದೀಚೆಗೆ ಬಡ್ಡಿ ಬರುವುದು ನಿಂತು ಹೋಯಿತು. ಈಗ ನೋಡಿದರೆ ಏಕಾಏಕಿ ಐಎಂಎ ಸಂಸ್ಥೆ ಮುಚ್ಚಿ ಹೋಗಿರುವುದು ನನ್ನನ್ನು ಆತಂಕಕ್ಕೀಡು ಮಾಡಿದೆ. ಮನೆ ಕಟ್ಟುವ ನನ್ನ ಆಸೆ ಭಗ್ನಗೊಂಡಿದೆ ಎಂದು ಮೈಸೂರಿನ ನಿವೃತ್ತ ಶಿಕ್ಷಕಿ ಜಬೀನಾ ಬಾನು ಗದ್ಗದಿತರಾದರು.

ನಾನೊಬ್ಬ ದಿನಗೂಲಿ ಕಾರ್ಮಿಕ. ದಿನ ದುಡಿದದ್ದನ್ನು ಮಗಳ ಮದುವೆಗೆಂದು ತೆಗೆದಿಟ್ಟಿದ್ದೆ. ಯಾರೋ ಹೇಳಿದ ಮಾತು ಕೇಳಿ 8 ತಿಂಗಳ ಹಿಂದೆ ಐಎಂಎ ಕಂಪನಿಗೆ ಹಾಕಿದೆ. ಈಗ ಮಗಳ ಮದುವೆ ಮಾಡು ವುದು ಹೇಗೆ? ಎಂಬ ಚಿಂತೆ ಕಾಡತೊಡಗಿದೆ ಎಂಬುದು ಶಾಂತಿನಗರದ ಮಜಾಹಿದ್ ಅವರ ನೋವಿನ ಮಾತು.

ಇಂತಹದ್ದೇ ಅನೇಕ ಕನಸುಗಳನ್ನು ಹೊತ್ತು ಮೈಸೂರಿನ ಸಾವಿರಾರು ಮಂದಿ ಐಎಂಎನಲ್ಲಿ ಹಣ ಹೂಡಿದ್ದರು. ಹೆಚ್ಚಿನ ಬಡ್ಡಿ ಬರುತ್ತದೆ. ಮದುವೆ, ನಿವೇಶನ ಖರೀದಿ, ಮನೆ ಕಟ್ಟುವ ಚಿಂತನೆ ಹಾಗೂ ಹಣ ದುಪ್ಪಟ್ಟು ಆಗುತ್ತದೆ ಎಂಬಿತ್ಯಾದಿ ಆಶಯದೊಂದಿಗೆ ಹಣ ಹೂಡಿದ್ದರು. ಕಡಿಮೆ ಎಂದರೆ ಒಂದು ಲಕ್ಷ, ಅತೀ ಹೆಚ್ಚು ಎಂದರೆ 55 ಲಕ್ಷ ರೂ.ಗಳನ್ನು ಹೂಡಿದವರೂ ಇವರಲ್ಲಿ ಇದ್ದಾರೆ. 5 ಲಕ್ಷ ರೂ. ಹೂಡಿದ್ದ ಉದಯಗಿರಿಯ ಮುಕ್ತಾರ್ ಅಹಮದ್ ವಿಷಯ ತಿಳಿದ ತಕ್ಷಣ ಬೆಂಗಳೂರಿಗೆ ತೆರಳಿ ದೂರು ಸಲ್ಲಿಸಿದ್ದಾರೆ.

Translate »