ರಾಜ್ಯದಲ್ಲಿ ಭಾರೀ ನೆರೆ ನಷ್ಟ: ತಕ್ಷಣ 3 ಸಾವಿರ ಕೋಟಿ ನೆರವಿಗೆ ಕೇಂದ್ರಕ್ಕೆ ಮನವಿ
ಮೈಸೂರು

ರಾಜ್ಯದಲ್ಲಿ ಭಾರೀ ನೆರೆ ನಷ್ಟ: ತಕ್ಷಣ 3 ಸಾವಿರ ಕೋಟಿ ನೆರವಿಗೆ ಕೇಂದ್ರಕ್ಕೆ ಮನವಿ

August 11, 2019

ಬೆಂಗಳೂರು, ಆ.10(ಕೆಎಂಶಿ)- ರಾಜ್ಯ ದಲ್ಲಿ ತಲೆದೋರಿರುವ ಮಳೆ ಮತ್ತು ನೆರೆ ಪರಿಹಾರಕ್ಕಾಗಿ ತಕ್ಷಣ ಮೂರು ಸಾವಿರ ಕೋಟಿ ರೂ. ನೆರವು ಕೋರಿ ಕೇಂದ್ರಕ್ಕೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ತಿಳಿಸಿದ್ದಾರೆ.
ನೆರೆಯಿಂದ ಸಾವಿರಾರು ಕೋಟಿ ರೂ. ಆಸ್ತಿಪಾಸ್ತಿ ನಷ್ಟವುಂಟಾಗಿದೆ. ಪ್ರಾಥಮಿಕ ಅಂದಾಜಿನಲ್ಲಿ ಆರು ಸಾವಿರ ಕೋಟಿ ರೂ. ಎಂದು ಪರಿಗಣಿಸಿ, ಈ ಪ್ರಮಾಣದ ಹಣ ವನ್ನು ತಕ್ಷಣ ಬಿಡುಗಡೆ ಮಾಡುವಂತೆ ಕೋರುತ್ತೇನೆ. ಕಳೆದ ಮೂರು ದಿನಗಳಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬಿಡಾರ ಹೂಡಿದ್ದ ಮುಖ್ಯಮಂತ್ರಿಯವರು ಇಂದು ನಗರಕ್ಕೆ ಹಿಂತಿರುಗುತ್ತಿದ್ದಂತೆ ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಪ್ರವಾಹದ ಅಂಕಿ-ಅಂಶಗಳ ಮಾಹಿತಿ ನೀಡಿದರು.

ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನೇ ಪ್ರಧಾನಿಯ ವರು ಕಳಿಸಿದ್ದಾರೆ ಎಂದರೆ ಅವರಿಗೆ ಪರಿ ಸ್ಥಿತಿಯ ಗಂಭೀರತೆ ಅರ್ಥವಾಗಿದೆ. ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡುವುದಕ್ಕಿಂತ ಪರಿಹಾರ ಮುಖ್ಯ. ಆ ಕೆಲಸ ಮಾಡಲಾಗುತ್ತಿದೆ. ಮಳೆ ಮತ್ತು ನೆರೆ ನಿಂತ ತಕ್ಷಣವೇ ಆಗಿರುವ ನಷ್ಟವನ್ನು ಮತ್ತೊಮ್ಮೆ ಅಂದಾಜಿಸಿ, ಕೇಂದ್ರಕ್ಕೆ ಪರಿ ಹಾರ ಕೋರಲಾಗುವುದು. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ರಕ್ಷಣಾ,ಹಣಕಾಸು ಹಾಗೂ ಕೃಷಿ ಸಚಿವರೊಟ್ಟಿಗೆ ನಾನು ನಿರಂತರ ಸಂಪರ್ಕದಲ್ಲಿದ್ದು, ಎಲ್ಲಾ ಮಾಹಿತಿಯನ್ನು ಅವರಿಗೆ ನೀಡುತ್ತಿದ್ದೇನೆ ಎಂದರು. ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಧೈರ್ಯ ಗುಂದಬೇಡಿ ಎಂದ ಮುಖ್ಯಮಂತ್ರಿಯವರು ನಿಮ್ಮ ಜೊತೆ ಸರ್ಕಾರವಿದೆ. ಇಡೀ ನಾಡಿನ ಜನತೆ ನಿಮ್ಮ ಬೆನ್ನಿಗಿದ್ದಾರೆ. ನಿಮ್ಮ ಸುರಕ್ಷತೆ ಮತ್ತು ಪುನರ್‍ವಸತಿಗೆ ನಾವು ಎಲ್ಲಾ ಕ್ರಮ ಕೈಗೊಳ್ಳುತ್ತೇವೆ ಎಂಬ ಭರವಸೆ ನೀಡಿದೆ.

ಯಾರೂ ಭರವಸೆ ಕಳೆದುಕೊಳ್ಳಬೇಡಿ, ವದಂತಿಗಳಿಗೆ ಕಿವಿ ಕೊಡಬೇಡಿ, ಸಂಕಷ್ಟ ಎದುರಾಗಿದೆ. ಒಟ್ಟಾಗಿ ಎದುರಿಸೋಣ. ಕಳೆದ ಒಂದು ವಾರದಿಂದ ಮಹಾರಾಷ್ಟ್ರ, ಕೇರಳ ಮತ್ತು ನಮ್ಮ ರಾಜ್ಯದಲ್ಲಿ ಮಳೆಯಾಗುತ್ತಿದ್ದು, ಉತ್ತರ ಕರ್ನಾಟಕ ಕರಾವಳಿ, ಹಾಗೂ ಮಲೆನಾಡು ಭಾಗದಲ್ಲಿ ಪ್ರವಾಹ ಹಾಗೂ ಭೂ ಕುಸಿತದಿಂದಾಗಿ ಜನತೆ ಸಂಕಷ್ಟಕ್ಕೊಳಗಾಗಿದ್ದಾರೆ. ಕಳೆದ 45 ವರ್ಷಗಳಲ್ಲಿ ಇಂತಹ ಭೀಕರ ಪ್ರವಾಹ, ಪರಿಸ್ಥಿತಿ ರಾಜ್ಯ ಕಂಡಿರಲಿಲ್ಲ. ಇದರಿಂದ 16 ಜಿಲ್ಲೆಗಳ 80 ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿಯಿಂದಾಗಿ 24 ಮಂದಿ ಸಾವನ್ನಪ್ಪಿದ್ದಾರೆ. ಸತ್ತವರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ.ಗಳಂತೆ ಪರಿಹಾರ ನೀಡಲಾಗುತ್ತದೆ. ಒಟ್ಟಾರೆ 322448 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಪ್ರವಾಹ ಭೂ ಕುಸಿತದಿಂದ ಹಾನಿ ಸಂಭವಿಸಿದೆ. ಸಾವಿರಾರು ಜನ ಮನೆ ಮಠ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.

ಎಷ್ಟೇ ಖರ್ಚಾದರೂ ಸರಿ, ಸಂಕಷ್ಟಕ್ಕೊಳಗಾದವರಿಗೆ ಶಾಶ್ವತ ಪರಿಹಾರ ಕಲ್ಪಿಸುತ್ತೇನೆ. 1,024 ಗ್ರಾಮಗಳು ಭೀಕರತೆ ಎದುರಿಸುತ್ತಿವೆ, 2,35,105 ಜನರನ್ನು ಸ್ಥಳಾಂತರ ಮಾಡಲಾಗಿದೆ, 222 ಜಾನುವಾರು ಸಾವನ್ನಪ್ಪಿವೆ. 44,013 ಜಾನುವಾರು ಸ್ಥಳಾಂತರ ಮಾಡಲಾಗಿದೆ ಎಂದರು. 624 ಪರಿಹಾರ ಕೇಂದ್ರ ಆರಂಭಿಸಲಾಗಿದ್ದು, ವೈದ್ಯರು ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. 1,57,498 ಜನ ವಿವಿಧೆಡೆ ವ್ಯವಸ್ಥೆ ಮಾಡಿರುವ ರಕ್ಷಣಾ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಲ್ಲಿ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡದಲ್ಲಿ ಕೂಡ ಗಂಭೀರ ಪರಿಸ್ಥಿತಿ ಎದುರಾಗಿದೆ. ಕೊಡಗು, ದಕ್ಷಿಣ ಕನ್ನಡದಲ್ಲಿ ಸಾಕಷ್ಟು ಭೂ ಕುಸಿತ, ಸಾವು ಸಂಭವಿಸಿದೆ.

ಎಲ್ಲಾ ಕಡೆ ನಮ್ಮ ರಕ್ಷಣಾ ಕಾರ್ಯಾಚರಣೆ ಮಾಡುವ ಸಿಬ್ಬಂದಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇವೆ. ನದಿ ತೀರದ ಜನರಿಗೆ ಎಚ್ಚರಿಕೆ ನೀಡಿದ್ದೇವೆ. ಮಲೆನಾಡಿನ ಪ್ರದೇಶದಲ್ಲಿಯೂ ಎಚ್ಚರಿಕೆ ನೀಡುವ ಪ್ರಯತ್ನ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣ ಇದ್ದರೂ ಮತ್ತೆ 100 ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಹಿರಿಯ ಅಧಿಕಾರಿಗಳು ಆಯಾ ಜಿಲ್ಲೆಯಲ್ಲಿದ್ದು, ನಮ್ಮ ಸಂಪರ್ಕದಲ್ಲಿದ್ದಾರೆ. ಅಗತ್ಯ ಬಿದ್ದರೆ ಇನ್ನಷ್ಟು ಸಿಬ್ಬಂದಿ ಹೆಚ್ಚಳ ಮಾಡಲಾಗುತ್ತದೆ.

Translate »