ಹೊಗೇನಕಲ್ ಜಲಪಾತಕ್ಕೆ ಪ್ರವಾಸಿಗರಿಗೆ ನಿಷೇಧ
ಮೈಸೂರು

ಹೊಗೇನಕಲ್ ಜಲಪಾತಕ್ಕೆ ಪ್ರವಾಸಿಗರಿಗೆ ನಿಷೇಧ

August 11, 2019

ಹನೂರು, ಆ.10 (ಸೋಮ)- ಕಬಿನಿ ಹಾಗೂ ಕೆಆರ್‍ಎಸ್ ಜಲಾಶಯಗಳಿಂದ ನದಿಗೆ ಲಕ್ಷಾಂತರ ಕ್ಯೂಸೆಕ್ ನೀರು ಹರಿಸಲಾಗುತ್ತಿದ್ದು, ಕರ್ನಾಟಕ ಗಡಿಯಂಚಿನ ಹೊಗೇನಕಲ್ ಜಲಪಾತದ ಬಳಿ ಕಾವೇರಿ ನದಿ ಭೋರ್ಗರೆಯುತ್ತಿರುವ ಸೊಬಗನ್ನು ಕಣ್ತುಂಬಿಕೊಳ್ಳಲು ಆಗಮಿಸುವ ಪ್ರವಾಸಿಗರ ಪ್ರವೇಶವನ್ನು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ನಿಷೇಧಿಸಿದೆ.

ಕೇರಳದ ವೈನಾಡು ಹಾಗೂ ಮಡಿಕೇರಿ ಸೇರಿದಂತೆ ಕಾವೇರಿ ನದಿ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಕಬಿನಿ, ಕೆಆರ್‍ಎಸ್ ಜಲಾಶಯಗಳಿಗೆ ಲಕ್ಷಾಂತರ ಕ್ಯೂಸೆಕ್ ನೀರು ಹರಿದು ಬರುತ್ತಿ ರುವ ಹಿನ್ನೆಲೆಯಲ್ಲಿ ಹನೂರು ತಾಲೂಕಿನ ಗೋಪಿನಾಥಂ ಬಳಿಯ ಗಡಿಯಂಚಿನ ಹೊಗೇನಕಲ್ ಜಲಪಾತ ಕಾವೇರಿ ನೀರಿನ ಪ್ರವಾಹಕ್ಕೆ ಮುಳುಗಡೆಯಾಗಿದೆ. ಅಲ್ಲದೇ ಪಾಲಿ ಮೇಡ್ ಸೇತುವೆ ಮೇಲೆ ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿದ್ದು, ಸೇತುವೆ ಕೊಚ್ಚಿ ಹೋಗುವ ಭೀತಿ ಎದುರಾ ಗಿದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾಡಳಿತ ಜಲಾಶಯದ ಬಳಿ ಹಾಗೂ ನದಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಿದ್ದು, ಬಂದೋಬಸ್ತ್ ಕಲ್ಪಿಸಿದೆ. ಕೊಕ್ಕರೆಹಳ್ಳದ ಬಳಿ ಚೆಕ್‍ಪೋಸ್ಟ್ ನಿರ್ಮಾಣ ಮಾಡಿ ಅಲ್ಲಿಯೂ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಪ್ರವಾಸಿಗರು ಬರದಂತೆ ಎಚ್ಚರಿಕೆ ವಹಿಸಲಾಗಿದೆ. ಜಿಲ್ಲಾಡಳಿತ ವಿಧಿಸಿರುವ ನಿಷೇಧ ತೆರವು ಗೊಳಿಸುವವರೆಗೆ ಯಾರೂ ಜಲಪಾತ ವೀಕ್ಷಿಸಲು ಬರ ಬಾರದು ಎಂದು ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಮಹೇಶ್ ತಿಳಿಸಿದ್ದಾರೆ.

ಅಲ್ಲದೇ ಹೊಗೇನಕಲ್ ಸಮೀಪದ ನದಿ ಪಾತ್ರದ ಗ್ರಾಮ ಗಳಾದ ಮಾರಿಕೊಟೈ, ಆತೂರು, ಜಮ್ಮಕಪಟ್ಟಿ, ಗೋಪಿ ನಾಥಂ, ಆಲಂಬಾಡಿ ಸೇರಿದಂತೆ ಇನ್ನಿತರ ಗ್ರಾಮಸ್ಥರು ನದಿ ತೀರಕ್ಕೆ ತೆರಳದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

Translate »