ಕೆಆರ್‍ಎಸ್‍ನಿಂದ ಲಕ್ಷ ಕ್ಯೂಸೆಕ್ ನೀರು ಬಿಡುಗಡೆ
ಮೈಸೂರು

ಕೆಆರ್‍ಎಸ್‍ನಿಂದ ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

August 11, 2019

ಶ್ರೀರಂಗಪಟ್ಟಣ, ಆ.10(ವಿನಯ್ ಕಾರೇಕುರ)- ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಕೆಆರ್‍ಎಸ್ ಜಲಾಶಯದ ಒಳ ಹರಿವಿನ ಪ್ರಮಾಣ 1.58ಲಕ್ಷ ಕ್ಯೂಸೆಕ್‍ಗೂ ಅಧಿಕವಾಗಿದ್ದು, ಶನಿವಾರ ರಾತ್ರಿ 9 ಗಂಟೆಯಿಂದ ಜಲಾಶಯದ 34 ಗೇಟ್‍ಗಳಿಂದ 1 ಲಕ್ಷ ಕ್ಯೂಸೆಕ್‍ಗೂ ಅಧಿಕ ನೀರನ್ನು ನದಿಗೆ ಬಿಡಲಾಗುತ್ತಿದೆ.

ಮೂರ್ನಾಲ್ಕು ದಿನಗಳ ಹಿಂದಷ್ಟೇ ತಮಿಳುನಾಡಿಗೆ ಹರಿಯುತ್ತಿದ್ದ ನೀರು ಸ್ಥಗಿತಗೊಳಿ ಸಲಾಗಿತ್ತು. ಜು. 19ರಿಂದ ಇಲ್ಲಿಯವರೆಗೆ ತಮಿಳುನಾಡಿಗೆ 15 ಟಿಎಂಸಿ ಅಡಿ ನೀರು ಹರಿಸಲಾಗಿದೆ. ಪ್ರವಾಹದ ಕಾರಣದಿಂದಾಗಿ ಈಗ ಮತ್ತೆ ನದಿಗೆ ನೀರು ಹರಿಸಲಾಗು ತ್ತಿದೆ. ಹೇಮಾವತಿ ಜಲಾಶಯದಿಂದಲೂ ನೀರು ಬರುತ್ತಿರುವ ಕಾರಣ ಕೆಆರ್‍ಎಸ್ ಜಲಾಶಯದ ಒಳ ಹರಿವು ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಲಾಶಯ ಸಂಪೂರ್ಣ ಭರ್ತಿ (ಗರಿಷ್ಠ 124.80 ಅಡಿ) ಯಾಗುವ ಮೊದಲೇ ನೀರು ಬಿಡಲಾಗುತ್ತಿದೆ. ಶನಿವಾರ ಮಧ್ಯಾಹ್ನ 1 ಗಂಟೆಯ ಸಮಯದಲ್ಲಿ ಜಲಾಶಯಕ್ಕೆ 1,52,499 ಲಕ್ಷ ಕ್ಯೂಸೆಕ್ ಒಳಹರಿವಿದ್ದು, ಆಗ ನದಿಗೆ 42,341 ಕ್ಯೂಸೆಕ್ ಹಾಗೂ ನಾಲೆಗೆ 5 ಸಾವಿರ ಕ್ಯೂಸೆಕ್ ನೀರನ್ನು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಎಂ.ಬಿ.ರಾಜು ಸಮ್ಮುಖದಲ್ಲಿ ಜಲಾಶಯದ 30 ಗೇಟ್‍ಗಳಿಂದ ಬಿಡಲಾಯಿತು.

ಕಳೆದ ವರ್ಷ ಇದೇ ವೇಳೆಗೆ ಭರ್ತಿಯಾಗಿತ್ತು: ಕಳೆದ ವರ್ಷ ಇದೇ ಅವಧಿಯಲ್ಲಿ ಕೆಆರ್‍ಎಸ್ ಜಲಾಶಯ ಭರ್ತಿಯಾಗಿತ್ತು. ಗರಿಷ್ಠ 124.80 ಅಡಿಯ ಜಲಾಶಯದಲ್ಲಿ 124.55 ಅಡಿ ನೀರಿತ್ತು. ಒಳಹರಿವು 29,163 ಕ್ಯೂಸೆಕ್ ಹಾಗೂ ಹೊರ ಹರಿವು 43,809 ಕ್ಯೂಸೆಕ್ ಇತ್ತು. ಇದರಲ್ಲಿ ನಾಲೆಗಳಿಗೆ 2,508 ಕ್ಯೂಸೆಕ್ ಹಾಗೂ ತಮಿಳುನಾಡಿಗೆ 41,301 ಕ್ಯೂಸೆಕ್ ಹರಿಸಲಾಗುತ್ತಿತ್ತು. ಸದ್ಯ ಜಲಾಶಯದ ನೀರಿನ ಮಟ್ಟ 116.40 ಅಡಿ ಇದ್ದು, ಜಲಾಶಯ ಭರ್ತಿಗೆ ಇನ್ನೂ 8 ಅಡಿಗಳು ಬಾಕಿಯಿದೆ. ನಾಳೆ (ಭಾನುವಾರ) ಸಂಜೆಯೊಳಗೆ ಜಲಾಶಯ ಭರ್ತಿಯಾಗುವ ಸಾಧ್ಯತೆಯಿದೆ.

ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ: ಶನಿವಾರ ರಾತ್ರಿ 8 ಗಂಟೆ ಬಳಿಕ ಜಲಾಶಯದ ಒಳ ಹರಿವಿನ ಪ್ರಮಾಣ ಹೆಚ್ಚಳವಾದ ಹಿನ್ನೆಲೆಯಲ್ಲಿ ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದ್ದು, ಒಳ ಹರಿವು ಇನ್ನಷ್ಟು ಹೆಚ್ಚಾದರೆ ಯಾವುದೇ ಕ್ಷಣದಲ್ಲೂ ಜಲಾಶಯದಿಂದ 1.50ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುವುದು. ಈ ಹಿನ್ನೆಲೆಯಲ್ಲಿ ನದಿ ತೀರದ ಗ್ರಾಮಗಳ ಜನರು ಸುರಕ್ಷತಾ ಸ್ಥಳಗಳಿಗೆ ತೆರಳಬೇಕು ಹಾಗೂ ನದಿಗೆ ಯಾರೂ ಇಳಿಯಬಾರದು ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸೇರಿ ಕಾವೇರಿ ನದಿ ಹರಿಯುವ ಎಲ್ಲಾ ತಾಲೂಕುಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಎಂತಹ ಪರಿಸ್ಥಿತಿಯನ್ನು ನಿಭಾಯಿಸುವಂತೆ ಸೂಚನೆ ನೀಡಲಾಗಿದೆ.

ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ಸ್ಥಗಿತ: ಜಲಾಶಯದಿಂದ ನದಿಗೆ ನೀರು ಬಿಡುತ್ತಿರುವುದರಿಂದ ರಂಗನತಿಟ್ಟು ಪಕ್ಷಿಧಾಮ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಬೋಟಿಂಗ್ ಸ್ಥಗಿತಗೊಳಿಸಲಾಗಿದೆ ಎಂದು ರಂಗನತಿಟ್ಟು ಉಪ ವಲಯ ಅರಣ್ಯಾಧಿಕಾರಿ ಎಂ.ಪುಟ್ಟಮಾದೇಗೌಡ ತಿಳಿಸಿದರು.

ನಡುಗಡ್ಡೆಯಲ್ಲಿ ಸಿಲುಕಿದ್ದ ಹತ್ತು ಜನರ ರಕ್ಷಣೆ: ಕೆಆರ್‍ಎಸ್ ಜಲಾಶಯದಿಂದ ನೀರು ಬಿಡುಗಡೆ ವಿಚಾರ ಗೊತ್ತಿಲ್ಲದೇ ನದಿ ದಾಟಿ ನಡುಗಡ್ಡೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ 10 ಜನ ಕೂಲಿ ಕಾರ್ಮಿಕರನ್ನು ತೆಪ್ಪದ ಮೂಲಕ ರಕ್ಷಣೆ ಮಾಡಿದ ಘಟನೆ ತಾಲೂಕಿನ ಎಡಮುರಿಯಲ್ಲಿ ನಡೆದಿದೆ. ಬೆಳಗೊಳ ಗ್ರಾಮದ 30 ಜನರ ಕೂಲಿ ಕಾರ್ಮಿಕರ ತಂಡ ಎಡಮುರಿಯ ಕಾವೇರಿ ನದಿ ಸಮೀಪದ ಜಮೀನಿಗೆ ಎಂದಿನಂತೆ ನದಿ ದಾಟಿ ತೆರಳಿದ್ದರು.

ಈ ವೇಳೆ ನದಿ ಪ್ರವಾಹ ಮುನ್ಸೂಚನೆ ದೊರೆತು 20 ಮಂದಿ ವಾಪಸ್ ಗ್ರಾಮಕ್ಕೆ ಬಂದಿದ್ದಾರೆ. ಆದರೆ, ಕೆಆರ್‍ಎಸ್‍ನಿಂದ ಕಾವೇರಿ ನದಿಗೆ ನೀರು ಬಿಡುಗಡೆ ಮಾಡಲಾಗಿದ್ದ ಹಿನ್ನೆಲೆಯಲ್ಲಿ ನೀರಿನ ಸೆಳೆತ ಹೆಚ್ಚಳವಾಗಿದೆ. ಇದರಿಂದ ಉಳಿದ 10 ಜನರು ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದರು. ವಿಚಾರ ತಿಳಿದ ಗ್ರಾಮಸ್ಥರು ಅವರನ್ನು ರಕ್ಷಣೆ ಮಾಡುವಂತೆ ತಾಲೂಕು ಆಡಳಿತದ ಮೊರೆ ಹೋಗಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಶ್ರೀರಂಗಪಟ್ಟಣ ತಹಶೀಲ್ದಾರ್ ನಾಗೇಶ್, ಕೆಆರ್‍ಎಸ್ ಪಿಎಸ್‍ಐ ನವೀನ್‍ಗೌಡ ಮತ್ತು ತಂಡ ಕಾರ್ಯಪ್ರವೃತ್ತರಾಗಿ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದ ಕೂಲಿ ಕಾರ್ಮಿಕರನ್ನು ತೆಪ್ಪದ ಮೂಲಕ ಕರೆತಂದರು. ಅಧಿಕಾರಿಗಳ ಕಾರ್ಯಕ್ಕೆ ಸ್ಥಳೀಯ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Translate »