ಕಾವೇರಿ ತವರು ತತ್ತರ: ಪ್ರವಾಹ ಭೀತಿಯಲ್ಲಿ ಕಂಗಾಲಾಗಿರುವ ಜನ
ಮೈಸೂರು

ಕಾವೇರಿ ತವರು ತತ್ತರ: ಪ್ರವಾಹ ಭೀತಿಯಲ್ಲಿ ಕಂಗಾಲಾಗಿರುವ ಜನ

August 11, 2019

ಮಡಿಕೇರಿ, ಆ.10- ಕೊಡಗು ಜಿಲ್ಲೆಯಲ್ಲಿ ಭಾರೀ ಪ್ರವಾಹ ಉಂಟಾಗಿದ್ದು, ಸಹಸ್ರ ಸಂಖ್ಯೆಯಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆ.10ರ ಬೆಳಿಗ್ಗೆಯಿಂದ ಜಿಲ್ಲೆಯಲ್ಲಿ ಘೋಷಣೆ ಮಾಡಲಾಗಿದ್ದ “ರೆಡ್ ಅಲರ್ಟ್” ಅನ್ನು ಮುಂದುವರೆಸಿದ್ದು, ಭಾರೀ ಮಳೆಯಿಂದಾಗಿ ಕ್ಷಣದಿಂದ ಕ್ಷಣಕ್ಕೆ ಕಾವೇರಿ ತವರಿನ ಪರಿಸ್ಥಿತಿ ಸಂಪೂರ್ಣ ವಿಷಮಕ್ಕೆ ತಿರುಗುತ್ತಿದ್ದು, ರಕ್ಷಣಾ ಕಾರ್ಯನಿರತ ಸಿಬ್ಬಂದಿಗಳೇ ಕಂಗಾಲಾಗಿದ್ದಾರೆ.

ವಿರಾಜಪೇಟೆ, ಭಾಗಮಂಡಲ, ನಾಪೋಕ್ಲು ಪ್ರದೇಶ ಗಳಲ್ಲಿ ಭಾರೀ ಗಾಳಿ ಮಳೆ ಸಹಿತ ಭೂ ಕುಸಿತದ ಎಲ್ಲಾ ಸಾಧ್ಯತೆಗಳಿದ್ದು ಅಲ್ಲಿನ ನಿವಾಸಿಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಆ.3ರಿಂದ ಆರಂಭವಾದ ಆಶ್ಲೇಷ ಮಳೆ ಆ.17ರ ವರೆಗೂ ಸುರಿಯಲಿದ್ದು, ಕೊಡಗು ಜಿಲ್ಲೆಯ ಮುಂದಿನ ದಿನಗಳ ಸ್ಥಿತಿ ಏನಾಗಬಹು ದೆಂದು ಊಹಿಸಲು ಸಾಧ್ಯವಿಲ್ಲದಂತಾಗಿದೆ. ಕುಶಾಲ ನಗರ-ಕೊಪ್ಪ ಮಾರ್ಗದ ಸೇತುವೆ ಮೇಲೆ ಕಾವೇರಿ ನದಿ ನೀರು ಹರಿಯುತ್ತಿದ್ದು, ಇಂತಹ ಜಲರಾಶಿಯ ಘೋರ ಸನ್ನಿವೇಶ ಶತಮಾನದಲ್ಲೇ ಮೊದಲು ಎನ್ನಲಾಗುತ್ತಿದೆ. ಕುಶಾಲನಗರದ ಹತ್ತು ಹಲವು ಬಡಾ ವಣೆಗಳು ಪ್ರವಾಹದಲ್ಲಿ ಮುಳುಗಿದ್ದು, ಸಂತ್ರಸ್ತರಾದವರ ಸಂಖ್ಯೆಯೂ ಲೆಕ್ಕಕ್ಕೆ ಸಿಗದಂತಾಗಿದೆ. ಕಣಿವೆ, ಶಿರಂಗಾಲ, ಕೊಪ್ಪ ವ್ಯಾಪ್ತಿಯಲ್ಲೂ ಭಾರೀ ಪ್ರವಾಹ ತಲೆದೋರಿದ್ದು, ನೂರಾರು ಎಕರೆ ಕೃಷಿ ಭೂಮಿ ಸಂಪೂರ್ಣ ಜಲಾವೃತವಾಗಿದೆ.

ಕಾವೇರಿ ನದಿ ಪಾತ್ರದಲ್ಲೂ ಮಳೆ ಆರ್ಭಟಿಸುತ್ತಿದ್ದು, ಈ ಸಂದರ್ಭವೇ ಹಾರಂಗಿನಿಂದ ನದಿಗೆ ನೀರು ಹರಿಸಿದ ಕಾರಣ ಕುಶಾಲನಗರ ವ್ಯಾಪ್ತಿಯಲ್ಲಿ ಭಾರೀ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಕೊಡಗು ಜಿಲ್ಲೆಯ 58 ಪ್ರದೇಶಗಳಲ್ಲಿ ಭಾರೀ ಪ್ರವಾಹ ತಲೆದೋರಿದ್ದು, ಸಾವಿರಾರು ಮನೆಗಳಿಗೆ ನೀರು ನುಗ್ಗಿದೆ. ಪ್ರವಾಹದಿಂದ ನೂರಾರು ಮನೆಗಳು ಕುಸಿದು ಬಿದ್ದಿದ್ದು, ಮನೆಯಲ್ಲಿದ್ದ ವಸ್ತುಗಳೆಲ್ಲಾ ನೀರಿನಲ್ಲಿ ಹೋಮವಾಗಿವೆ. ಪ್ರವಾಹ ಸಂತ್ರಸ್ತರನ್ನು ಸಮೀಪದ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಿದರೂ ಕೂಡ ಅಲ್ಲಿ ಸೂಕ್ತ ವ್ಯವಸ್ಥೆ ಮಾಡದಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವಿರುದ್ಧ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ಕೇಂದ್ರಗಳಲ್ಲಿ ಊಟದ ವ್ಯವಸ್ಥೆಯನ್ನೂ ಮಾಡದಿರುವುದರಿಂದ ಜನರು ಸರಕಾರ ಮತ್ತು ಜಿಲ್ಲಾಡಳಿತವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಪ್ರವಾಹದಿಂದ ಸಂತ್ರಸ್ತರಾಗುತ್ತಿರುವವರ ಸಂಖ್ಯೆಯೂ ಗಂಟೆ ಗಂಟೆಗೂ ಏರಿಕೆಯಾಗುತ್ತಿದೆ.

ಮಡಿಕೇರಿ ನಗರ ಪ್ರದೇಶವನ್ನು ಹೊರತುಪಡಿಸಿದರೆ ಇಡೀ ಕೊಡಗು ಜಿಲ್ಲೆಯೇ ಪ್ರವಾಹದಿಂದ ದ್ವೀಪವಾಗಿ ಪರಿವರ್ತನೆಯಾಗಿದೆ. ಮಡಿಕೇರಿ-ಸೋಮವಾರಪೇಟೆ ಮತ್ತು ಮಡಿಕೇರಿ-ಮಂಗಳೂರು ರಸ್ತೆಯನ್ನು ಹೊರತುಪಡಿಸಿದರೆ ಕೊಡಗು ಜಿಲ್ಲೆಯನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳು ನದಿ ಪ್ರವಾಹ ಮತ್ತು ಭೂ ಕುಸಿತಕ್ಕೆ ಒಳಗಾಗಿ ಸಂಪರ್ಕ ವ್ಯವಸ್ಥೆ ಸದÀ್ಯಕ್ಕೆ ಚೇತರಿಸಿಕೊಳ್ಳಲು ಅಸಾಧ್ಯವಾಗಿಲ್ಲ. ಗ್ರಾಮೀಣ ಭಾಗಗಳ ಜನರ ಗೋಳು ಕೇಳುವವರೇ ಇಲ್ಲದಾಗಿದ್ದು, ತಮ್ಮ ನೆರವಿಗೆ ಬಾರದ ಜಿಲ್ಲಾಡಳಿತಕ್ಕೆ ಜನರು ಹಿಡಿ ಶಾಪ ಹಾಕುತ್ತಿದಾರೆ.

ಮಕ್ಕಂದೂರು-ಎಮ್ಮೆತ್ತಾಳು ಸೇತುವೆಗೆ ಭಾರೀ ಪ್ರಮಾಣದ ಮರದ ದಿಮ್ಮಿಗಳು ಅಪ್ಪಳಿಸಿದ ಕಾರಣದಿಂದ ಸೇತುವೆ ಮುರಿದು ಹೋಗಿದ್ದು, ರಸ್ತೆ ಸಂಚಾರ ಬಂದ್ ಆಗಿದೆ.

ಮುಕ್ಕೋಡ್ಲು-ಕಾಲೋಟು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸಿಮೆಂಟ್ ರಸ್ತೆ ಭೂ ಕುಸಿತಕ್ಕೆ ಮಡಿಕೇರಿ-ಮಾದಾಪುರ ರಸ್ತೆಯ ಹಾಲೇರಿ ಎಂಬಲ್ಲಿ ರಸ್ತೆಯ ಒಂದು ಬದಿ ಕುಸಿತವಾಗಿದ್ದು, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‍ಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ವಾಹನ ಸಂಚಾರಕ್ಕೆ ರಸ್ತೆಯನ್ನು ಮುಕ್ತಗೊಳಿಸಿದ್ದಾರೆ. ಮಡಿಕೇರಿಯ ಸುದರ್ಶನ್ ಸರ್ಕಲ್‍ನ ಮುಂದೆ ಪೊಲೀಸರು ಬ್ಯಾರೀಕೇಡ್‍ಗಳನ್ನು ಅಳವಡಿಸಿ ವಾಹನ ಸವಾರರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಒಂದನೇ ಮೊಣ್ಣಂಗೇರಿಯಲ್ಲಿ ಭೂಕುಸಿತವಾಗಿದ್ದು ಯಾವುದೇ ಹಾನಿ ಸಂಭವಿಸಿಲ್ಲ.

ಭಾಗಮಂಡಲ ವ್ಯಾಪ್ತಿಯಲ್ಲಿ ಎಡೆಬಿಡದೆ ಭಾರೀ ಮಳೆ ಸುರಿಯುತ್ತಿದ್ದು, ಕಳೆದ 5 ದಿನಗಳಿಂದ ಮಡಿಕೇರಿ, ತಲಕಾವೇರಿ, ಭಾಗಮಂಡಲ ಐಯ್ಯಂಗೇರಿ ರಸ್ತೆ ಬಂದ್ ಆಗಿದೆ. ಭಾಗಮಂಡಲ, ಐಯ್ಯಂಗೇರಿ ವ್ಯಾಪ್ತಿಯ ಗ್ರಾಮಗಳಲ್ಲಿ 150 ಮಂದಿ ನದಿ ನೀರಿನ ಪ್ರವಾಹದಲ್ಲಿ ಸಿಲುಕಿದ್ದು ಅವರ ರಕ್ಷಣೆಗಾಗಿ ಮಡಿಕೇರಿ ಗ್ರಾಮಾಂತರ ಪೊಲೀಸರು ದುಬಾರೆಯ ರ್ಯಾಫ್ಟ್‍ಗಳನ್ನು ಬಳಸಿಕೊಂಡು ಅತ್ತ ತೆರಳಿದ್ದಾರೆ. ನಾಪೋಕ್ಲು, ಕಕ್ಕಬ್ಬೆ, ಬಲ್ಲಮಾವಟಿ ವ್ಯಾಪ್ತಿಯಲ್ಲಿ ಅಬ್ಬರದಲ್ಲಿ ಮಳೆ ಸುರಿಯುತ್ತಿದೆ. ಕಕ್ಕಬ್ಬೆ ಮರಂದೋಡ ಗ್ರಾಮದಲ್ಲಿ ನದಿ ಪ್ರವಾಹಕ್ಕೆ 13 ಮನೆಗಳು ಕುಸಿದಿರುವ ಮಾಹಿತಿ ದೊರಕಿದ್ದು, ಬಲ್ಲಮಾವಟಿಯ ಮಂಜೇಟ್ ಕಾಲೋನಿಯಲ್ಲಿ 8 ಮನೆಗಳು ಭೂ ಸಮಾಧಿಯಾಗಿವೆ. ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದು, ಹಲವು ಮಂದಿ ಬೀದಿಗೆ ಬಿದ್ದಿದ್ದಾರೆ. ಆದರೆ ಜನರ ರಕ್ಷಣೆಗೆ ಬರಬೇಕಿದ್ದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಚೇರಿಗೆ ಬೀಗ ಜಡಿದುಕೊಂಡು ತೆರಳಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಆಕ್ರೋಶÀ ವ್ಯಕ್ತಪಡಿಸಿದ್ದಾರೆ. ಕೊಂಡಗೇರಿ ಸೇತುವೆ ಮುಳುಗಡೆಯಾಗಲು ಕೇವಲ 2 ಅಡಿ ಮಾತ್ರ ಬಾಕಿಯಿದ್ದು, ಸುತ್ತಲಿನ ಬಹುತೇಕ ಮನೆಗಳೆಲ್ಲವೂ ಭಾಗಶಃ ಮುಳುಗಡೆಯಾಗಿದೆ.

ಭಾರತೀಯ ಸೇನಾ ತುಕಡಿ, ಎನ್‍ಡಿಆರ್‍ಎಫ್, ಅಗ್ನಿಶಾಮಕ ದಳ, ಜಿಲ್ಲಾ ಪೊಲೀಸ್ ಮತ್ತು ದುಬಾರೆ ರ್ಯಾಫ್ಟ್‍ನ ಎಲ್ಲಾ ಸಿಬ್ಬಂದಿಗಳು ಸ್ವಯಂ ಪ್ರೇರಿತರಾಗಿ ನದಿ ಪ್ರವಾಹದಲ್ಲಿ ಸಿಲುಕಿರುವ ಜನರು ಮತ್ತು ಜಾನುವಾರುಗಳ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದು, ಇಂದಿಗೂ ಪ್ರವಾಹಕ್ಕೆ ಸಿಲುಕಿರುವ ಹತ್ತು ಹಲವು ಗ್ರಾಮಗಳ ಜನರನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಮಳೆಯ ಆರ್ಭಟಕ್ಕೆ ಪ್ರತಿ ಕ್ಷಣವೂ ನದಿಗಳಲ್ಲಿ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಪ್ರವಾಹ ಇಳಿಕೆಯಾಗುವ ಲಕ್ಷಣಗಳೇ ಜಿಲ್ಲೆಯಲ್ಲಿ ಕಂಡು ಬರುತ್ತಿಲ್ಲ.

ರಸ್ತೆ ಬಂದ್: ಕೊಡಗು ಜಿಲ್ಲೆಯನ್ನು ಸಂಪರ್ಕಿಸುವ ಬಹುತೇಕ ರಸ್ತೆಗಳೆಲ್ಲವೂ ಪ್ರವಾಹ ಮತ್ತು ಭೂಕುಸಿತದಿಂದ ಬಂದ್ ಆಗಿವೆ. ಮಡಿಕೇರಿ-ಕುಶಾಲನಗರ ಹೆದ್ದಾರಿ ತಾವರೆಕೆರೆ ಬಳಿ ಪ್ರವಾಹದಿಂದ ಬಂದ್ ಆಗಿದ್ದರೆ, ಮೂರ್ನಾಡು-ವಿರಾಜಪೇಟೆ ರಸ್ತೆ ಬೇತ್ರಿ ಸೇತುವೆ ಉಕ್ಕಿ ಹರಿಯುತ್ತಿರುವುದರಿಂದ ಬಂದ್ ಆಗಿದೆ. ಗೋಣಿಕೊಪ್ಪ -ಪೊನ್ನಂಪೇಟೆ, ನಾಪೋಕ್ಲು-ಪಾರಾಣೆ, ಸಿದ್ದಾಪುರ-ಕರಡಿಗೋಡು, ವಿರಾಜಪೇಟೆ-ಮಾಕುಟ್ಟ, ಮೂರ್ನಾಡು-ನಾಪೋಕ್ಲು, ನಿಟ್ಟೂರು-ಬಾಳೆಲೆ, ಪೊನ್ನಂಪೇಟೆ-ಕಾನೂರು, ಪೊನ್ನಂಪೇಟೆ-ಪೊನ್ನಪ್ಪಸಂತೆ, ಪೊನ್ನಂಪೇಟೆ-ಈಚೂರ-ಹಾತೂರು, ಗುಡ್ಡೆಹೊಸೂರು-ಸಿದ್ದಾಪುರ ಈ ರಸ್ತೆಗಳೆಲ್ಲವೂ ಇಂದಿಗೂ ಬಂದ್ ಆಗಿದೆ.

ಕೊಣನೂರು-ವಿರಾಜಪೇಟೆ- ಮಾಕುಟ್ಟ, ಗಾಳಿಬೀಡು-ಸೀತಾರಾಮ್‍ಪಾಟಿ-ಕಾಲೂರು ರಸ್ತೆಯಲ್ಲಿ ಭಾರೀ ಭೂಕುಸಿದು ರಸ್ತೆ ಸಂಚಾರವನ್ನು ನಿಷೇಧಿಸಲಾಗಿದೆ.

ತೋರಾ ಗುಡ್ಡ ಕುಸಿತ: ಹಲವರು ನಾಪತ್ತೆ
ಮಡಿಕೇರಿ, ಆ.10- ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋರಾ ಗ್ರಾಮದಲ್ಲಿ ಭಾರೀ ಗುಡ್ಡ ಮಣಿಕಂಠ ಕುಸಿದು ಅಂದಾಜು 200 ಎಕರೆ ಪ್ರದೇಶ ಮತ್ತು 9 ಮನೆಗಳು ನಾಮಾವಶೇಷವಾಗಿದೆ. ಶುಕ್ರವಾರ ಬೆಳಗಿನ 10.30ರ ಸಮಯದಲ್ಲಿ ಬೈಮನ ನಾಣಯ್ಯ ಎಂಬುವರ ಮನೆ ಸಮೀಪ ಭೂ ಕುಸಿತದಿಂದಾಗಿ ರಸ್ತೆ ಬಂದ್ ಆಗಿತ್ತು. ಸ್ಥಳೀಯರು ರಸ್ತೆಗೆ ಬಿದ್ದ ಮಣ್ಣನ್ನು ತೆರವು ಮಾಡು ತ್ತಿದ್ದ ಸಂದರ್ಭ ಭಾರೀ ಸದ್ದಿನೊಂದಿಗೆ ಮಣಿಕಂಠ ಗುಡ್ಡ ಕುಸಿದು ಬಿದ್ದಿದೆ. ಈ ಕುಸಿತದಲ್ಲಿ ಮಮತ (40) ಮತ್ತು ಅವರ ಪುತ್ರಿ ಲಿಖಿತ(15) ಸ್ಥಳದಲ್ಲೇ ಭೂ ಸಮಾಧಿಯಾಗಿದ್ದು, ಅವರ ದೇಹಗಳನ್ನು ಶುಕ್ರ ವಾರ ಸಂಜೆ ಹೊರ ತೆಗೆಯಲಾಗಿದೆ. ಹರೀಶ್ ಎಂಬು ವರ ಕುಟುಂಬ ಸದಸ್ಯರಾದ ಶಂಕರ, ಅಪ್ಪು(55), ಲೀಲಾ(45) ಹಾಗೂ ತೋರಾ ಗ್ರಾಮದಲ್ಲಿ ಅಂಗಡಿ ನಡೆಸುತ್ತಿರುವ ಪ್ರಭು ಕುಟುಂಬ ಸದಸ್ಯರಾದ ದೇವಕ್ಕಿ(65), ಅನು(35), ಅಮೃತಾ(13) ಹಾಗೂ ಆದಿತ್ಯ(10) ಕಾಣೆಯಾಗಿದ್ದಾರೆ. ಮಾತ್ರವಲ್ಲದೇ ತೋರಾ ಗ್ರಾಮಕ್ಕೆ ವಿವಾಹವಾಗಿದ್ದ ಪಿರಿಯಾಪಟ್ಟಣದ ಗೃಹಿಣಿ ವೀಣಾ ಕೂಡ ಭೂಕುಸಿತದಲ್ಲಿ ನಾಪತ್ತೆಯಾಗಿದ್ದು, ಆಕೆಯ ತಂದೆ-ತಾಯಿ ವಿರಾಜಪೇಟೆಗೆ ಆಗಮಿಸಿ ಮಗಳನ್ನು ಹುಡುಕಿಕೊಡುವಂತೆ ರೋದಿಸುತ್ತಿದ್ದಾರೆ. ತೋರಾ ಕುಪ್ಪಮೊಟ್ಟೆಯಲ್ಲಿ ಒಂದೇ ಕುಟುಂಬದ ಕೃಷ್ಣ, ಕಲ್ಯಾಣಿ, ಕುಮಾರ, ರಾಧಾ ಮತ್ತು ದಿನೇಶ್ ಕೂಡ ಕಳೆದ 2 ದಿನಗಳಿಂದ ನಾಪತ್ತೆಯಾಗಿದ್ದು ಅವರ ಸಂಪರ್ಕ ಸಾಧ್ಯವಾಗಿಲ್ಲ ಎಂದು ಅವರ ಸಂಬಂಧಿಗಳು ತಿಳಿಸಿದ್ದಾರೆ. ಭೂ ಕುಸಿತದಲ್ಲಿ ನಾಪತ್ತೆಯಾದವರ ಶೋಧ ಕಾರ್ಯಕ್ಕೆ ಭಾರತೀಯ ಸೇನಾ ತಂಡ, ಎನ್‍ಡಿಆರ್‍ಎಫ್, ಅಗ್ನಿಶಾಮಕ ದಳ ಮತ್ತು ಜಿಲ್ಲಾ ಪೊಲೀಸರು ಕೂಡ ಕೈ ಜೋಡಿಸಿದ್ದು, ಇನ್ನು ಭಾರೀ ಮಳೆ ಮತ್ತು ಭೂ ಕುಸಿತದ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಶೋಧ ಕಾರ್ಯಕ್ಕೆ ತೀವ್ರ ಅಡ್ಡಿಯಾಗಿದೆ.

ಭೂಕುಸಿತವಾದ ಸ್ಥಳದಲ್ಲಿ ಮನೆಗಳು ಇದ್ದವು ಎಂಬುದಕ್ಕೂ ಇದೀಗ ಯಾವುದೇ ಕುರುಹುಗಳು ಸಿಗುತ್ತಿಲ್ಲ. ಮನೆಗಳೆಲ್ಲ ನೆಲಸಮವಾಗಿದ್ದು, ಮನೆಯೊಳಗಿದ್ದ ವಸ್ತುಗಳೆಲ್ಲವು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿವೆ. ಈ ಆಧಾರದಲ್ಲಿಯೇ ನಾಪತ್ತೆಯಾದವರ ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ. ತೋರ ಭೂ ಕುಸಿತ ಪ್ರದೇಶಕ್ಕೆ ತೆರಳಲು ಕೂಡ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸ್ಥಳಕ್ಕೆ ಮಣ್ಣು ತೆರವು ಮಾಡಲು ಜೆಸಿಬಿ ಯಂತ್ರ ಆಗಮಿಸಲು ತಡವಾದ ಹಿನ್ನೆಲೆಯಲ್ಲಿ ಅಲ್ಲಿನ ಗ್ರಾಮಸ್ಥರು ಜಿಲ್ಲಾಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡ ಭೂ ಕುಸಿತದಿಂದ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಲು ಬಂದಿಲ್ಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಯಾಚರಣೆ ನಡೆಸಲಾಗುತ್ತಿರುವ ಸ್ಥಳಕ್ಕೆ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ಉಪ ವಿಭಾಗಾಧಿಕಾರಿ ಜವರೇಗೌಡ, ಮಡಿಕೇರಿ ಪೊಲೀಸ್ ಉಪ ಅಧೀಕ್ಷಕ ಸುಂದರ್ ರಾಜ್ ಅವರುಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಮಳೆ, ದುರ್ಗಮ ಹಾದಿ, ಭಾರೀ ಕೆಸರು ಕಾರ್ಯಾಚರಣೆಗೆ ಅಡ್ಡಿ ಉಂಟು ಮಾಡುತ್ತಿದ್ದು, ತಡವಾಗಿ ಮಣ್ಣು ತೆರವು ಕಾರ್ಯ ಆರಂಭಿಸಲಾಗಿದೆ. ಘಟನಾ ಸ್ಥಳದಲ್ಲಿ ಭಾರೀ ಪ್ರಮಾಣದ ಕೆಸರಿನ ರಾಶಿಯಿದ್ದು 200 ಎಕರೆ ಪ್ರದೇಶದಲ್ಲಿ ಭೂ ಕುಸಿತವಾಗಿರುವ ಕಾರಣ ಶೋಧ ಕಾರ್ಯವೂ ನಿಧಾನ ಗತಿಯಲ್ಲಿ ಸಾಗಿದೆ.

Translate »