ಕಿಟಕಿ ರಾಡು ಮುರಿದು ಮನೆಗಳ್ಳತನ
ಮೈಸೂರು

ಕಿಟಕಿ ರಾಡು ಮುರಿದು ಮನೆಗಳ್ಳತನ

August 12, 2019

ಮೈಸೂರು,ಆ.11(ಎಸ್‍ಬಿಡಿ)-ಕಿಟಕಿಯ ಕಬ್ಬಿಣದ ರಾಡು ಮುರಿದು ಮನೆ ಯೊಳಗೆ ನುಗ್ಗಿರುವ ಖದೀಮರು, ಚಿನ್ನಾಭರಣ, ನಗದು ಹಾಗೂ ಬೆಲೆ ಬಾಳುವ ವಸ್ತುಗಳನ್ನು ದೋಚಿರುವ ಘಟನೆ ಮೈಸೂರಿನ ದಟ್ಟಗಳ್ಳಿಯಲ್ಲಿ ನಡೆದಿದೆ.

ದಟ್ಟಗಳ್ಳಿ 3ನೇ ಹಂತದ ವೆಂಕಟೇಶ್ ಎಂಬುವರ ಮನೆಗೆ ನುಗ್ಗಿರುವ ಕಳ್ಳರು, ಸುಮಾರು 20ಗ್ರಾಂ ಚಿನ್ನಾಭರಣ, 50 ಸಾವಿರ ನಗದು, ರೇಷ್ಮೆ ಸೀರೆ, ಎಲ್‍ಇಡಿ ಟಿವಿ, ಮೊಬೈಲ್ ಇನ್ನಿ ತರ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಮನೆಯವರೆಲ್ಲಾ ಜೆ.ಪಿ. ನಗರದಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದರು.

ಇಂದು ಮಧ್ಯಾಹ್ನ ಮನೆಗೆ ವಾಪಸ್ಸಾದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಮನೆ ಕಿಟಕಿಯ ಕಬ್ಬಿಣದ ರಾಡುಗಳನ್ನು ಯಾವುದೋ ಆಯುಧದ ಸಹಾಯದಿಂದ ಮುರಿದು ಒಳನುಗ್ಗಿರುವ ಕಳ್ಳರು, ಅಲ್ಮೇರಾ, ಬ್ಯಾಗ್‍ಗಳು, ಅಡುಗೆ ಸಾಮಗ್ರಿಗಳ ಡಬ್ಬಿಗಳು ಸೇರಿದಂತೆ ಮನೆಯನ್ನೆಲ್ಲಾ ಜಾಲಾಡಿದ್ದಾರೆ. ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಸಾಡಿ, ಚಿನ್ನಾಭರಣ, ನಗದು, ಎಲ್‍ಇಡಿ, ಮೊಬೈಲ್, ರೇಷ್ಮೆ ಸೀರೆ ಇನ್ನಿತರ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ವಿಷಯ ತಿಳಿದ ಕುವೆಂಪುನಗರ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »