ಹಲ್ಮಿಡಿ ಗ್ರಾಮದ ಅಭಿವೃದ್ಧಿಗೆ ಒತ್ತಾಯ
ಹಾಸನ

ಹಲ್ಮಿಡಿ ಗ್ರಾಮದ ಅಭಿವೃದ್ಧಿಗೆ ಒತ್ತಾಯ

March 10, 2019

ಬೇಲೂರು: ಕನ್ನಡದ ಪ್ರಥಮ ಶಿಲಾಶಾಸನ ಸಿಕ್ಕಿದಂತಹ ಹಲ್ಮಿಡಿ ಗ್ರಾಮ ವನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ನಿತ್ಯೋತ್ಸವ ಕವಿ ಡಾ.ಕೆ.ಎಸ್.ನಿಸಾರ್ ಅಹ್ಮದ್ ಹೇಳಿದರು.

ಸಮೀಪದ ಹಲ್ಮಿಡಿ ಗ್ರಾಮಕ್ಕೆ ಭೇಟಿ ನೀಡಿ ಶಿಲಾಶಾಸನಕ್ಕೆ ನಮಸ್ಕರಿಸಿ ಮಾತ ನಾಡಿದ ಅವರು, ಹಿಂದಿನ ಕಸಾಪ ಅಧ್ಯಕ್ಷ ಹೆಚ್.ಬಿ.ಮದನ್ ಹಾಗೂ ವಿನ್ಯಾಸಕ, ಖ್ಯಾತ ಸಂಶೋಧನಾ ಸಾಹಿತಿ ಡಾ.ಶ್ರೀವತ್ಸ ಎಸ್.ವಟಿ ಅವರ ಶ್ರಮದಿಂದ ಗ್ರಾಮದಲ್ಲಿ ಹಲ್ಮಿಡಿ ಶಾಸನ ಮಂಟಪ ನಿರ್ಮಾಣ ವಾಗಿದೆ. ಇದು ದೇಶಕ್ಕೆ ಒಂದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆದರೆ, ಪ್ರಸ್ತುತದ ದಿನಗಳಲ್ಲಿ ಈ ಶಿಲಾ ಶಾಸನ ಮಂಟಪವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಕದಂಬ, ಹಂಪಿ, ಚಾಲುಕ್ಯ ಉತ್ಸವಗಳ ಮಾದರಿಯಲ್ಲಿಯೇ ಸರ್ಕಾರ ಹಲ್ಮಿಡಿ ಉತ್ಸವ ನಡೆಸಬೇಕು. ಇದಕ್ಕಾಗಿ ರಾಜ್ಯ ಬಜೆಟ್‍ನಲ್ಲಿ ಅನುದಾನ ಮೀಸಲಿಡಬೇಕು. ಗ್ರಾಮದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.ಸಂಶೋಧಕ ಸಾಹಿತಿ ಡಾ.ಶ್ರೀವತ್ಸ ಎಸ್. ವಟಿ, ಹಲ್ಮಿಡಿ ಗ್ರಾಮ ಹಾಗೂ ದೇವಾ ಲಯದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕಸಾಪ ಹೋಬಳಿ ಅಧ್ಯಕ್ಷ ಚನ್ನೇಗೌಡ, ತಾಲೂಕು ಕಸಾಪ ಗೌರವಾಧ್ಯಕ್ಷ ಆನಂದ್, ಜಿಲ್ಲಾ ಕಸಾಪ ಕಾರ್ಯದರ್ಶಿ ಜಾವಗಲ್ ಪ್ರಸನ್ನ. ಅರಕಲಗೂಡು ವಿಷ್ಣುಕುಮಾರ್ ಹಾಗೂ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಇತರರು ಹಾಜರಿದ್ದರು.

Translate »