ಜಾವಾ ನನ್ನ ಜೀವ
ಮೈಸೂರು

ಜಾವಾ ನನ್ನ ಜೀವ

July 9, 2018
  • ರಸ್ತೆಗಿಳಿದ ನೂರಾರು ರೋಡ್ ಕಿಂಗ್‍ಗಳು
  • ಜಾವಾ ದಿನದ ಹಿನ್ನೆಲೆಯಲ್ಲಿ ಗಮನ ಸೆಳೆದ ರ‍್ಯಾಲಿ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾನುವಾರ ಜಾವಾ ಮತ್ತು ಯೆಜ್ಡಿ ಬೈಕ್‍ಗಳು ಸದ್ದು ಮಾಡಿದವು. ಎಲ್ಲೆಂದರಲ್ಲಿ ರಸ್ತೆ ಸುಂದರಿಯದ್ದೇ ಕಾರುಬಾರಾಗಿತ್ತು. ವಿವಿಧ ರಸ್ತೆಗಳಲ್ಲಿ ಸಾಲು-ಸಾಲಾಗಿ ಸಾಗಿದ ಹಳೆಯ ಬೈಕ್‍ಗಳು ಸಾರ್ವಜನಿಕರ ಗಮನ ಸೆಳೆದವು.

ಜಾವಾ ದಿನದ ಹಿನ್ನೆಲೆಯಲ್ಲಿ ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಜಾವಾ ಬೈಕ್ ಹೊಂದಿರುವ ಸವಾರರು ಭಾನುವಾರ ತಮ್ಮ-ತಮ್ಮ ಜಾವಾ ಮತ್ತು ಯೆಜ್ಡಿ ಬೈಕ್‍ಗಳೊಂದಿಗೆ ರ‍್ಯಾಲಿ ನಡೆಸಿ `ಈ ಜಾವಾ ನನ್ನ ಜೀವ’ ಎಂಬ ಸಂದೇಶ ಸಾರಿದರು. ಮೈಸೂರು ನಗರದಲ್ಲಿ ಎರಡು ಸ್ಥಳಗಳಲ್ಲಿ ಪ್ರತ್ಯೇಕವಾಗಿ ನಡೆದ ಜಾಥಾದಲ್ಲಿ ವಿವಿಧ ಸಾಮಥ್ರ್ಯದ ನೂರಾರು ಬೈಕ್‍ಗಳು ಪಾಲ್ಗೊಂಡು ರಸ್ತೆಯುದ್ದಕ್ಕೂ ಸದ್ದು ಮಾಡಿದವು.

ಮೈಸೂರಿನ ಜಾವಾ-ಯೆಜ್ಡಿ ಕ್ಲಬ್ ವತಿಯಿಂದ ಆಯೋಜಿಸಿದ್ದ ಜಾವಾ ಬೈಕ್‍ಗಳ ರ‍್ಯಾಲಿಗೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಗಾಲ್ಫ್ ಕ್ಲಬ್ ಆವರಣದಲ್ಲಿ ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು. ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಬೈಕ್‍ಗಳನ್ನು ವೀಕ್ಷಿಸಿದ ಅವರು, ಪತ್ರಕರ್ತರೊಂದಿಗೆ ಮಾತನಾಡಿ, ನಮ್ಮ ತಾತ ಚಾಮರಾಜೇಂದ್ರ ಒಡೆಯರ್ ಅವರ ಕಾಲದಲ್ಲಿ ಮೈಸೂರಿನಲ್ಲಿ ಯೆಜ್ಡಿ, ಜಾವಾ ಕಾರ್ಖಾನೆ ಆರಂಭವಾಗಿದ್ದು, ಉತ್ತಮ ರೀತಿಯಲ್ಲಿ ಸಾಗುತ್ತಿದ್ದ ಜಾವಾ ಕಾರ್ಖಾನೆ ಮಾರುಕಟ್ಟೆಗೆ ತಂದ ಬೈಕ್‍ಗಳು ಇಂದಿಗೂ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಅಲ್ಲದೇ ಬಹು ಬೇಡಿಕೆ ಇದೆ. ಕಾರಣಾಂತರಗಳಿಂದ ಈ ಕಾರ್ಖಾನೆ ಮುಚ್ಚಲ್ಪಟ್ಟಿದೆ. ಆದರೆ ಜಾವಾ ಬೈಕ್‍ಗಳನ್ನು ಹೊಂದಿರುವವರು ಪ್ರತೀ ವರ್ಷ ಜಾವಾ ದಿನವನ್ನು ಆಚರಿಸಿ ಹೆರಿಟೇಜ್ ಬೈಕ್‍ಗಳನ್ನು ಪ್ರದರ್ಶಿಸುವ ಮೂಲಕ ಅವುಗಳ ಅಸ್ತಿತ್ವದ ಉಳಿವಿಗೆ ಪ್ರಯತ್ನಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಈ ರ‍್ಯಾಲಿಯಲ್ಲಿ ಪಾಲ್ಗೊಂಡಿರುವುದು ಸಂತೋಷ ಉಂಟು ಮಾಡಿದೆ ಎಂದು ಶುಭ ಕೋರಿದರು.

ಗಾಲ್ಫ್ ಕ್ಲಬ್‍ನಿಂದ ಆರಂಭವಾದ ರ‍್ಯಾಲಿ ಮಹಾರಾಣಾ ಪ್ರತಾಪ ವೃತ್ತ, ಕಾರಂಜಿ ಕೆರೆ ರಸ್ತೆ, ನಜರ್‍ಬಾದ್, ಹಾರ್ಡಿಂಜ್ ವೃತ್ತ, ಚಾಮರಾಜ ಜೋಡಿ ರಸ್ತೆ, ಸರಸ್ವತಿಪುರಂ, ಹುಣಸೂರು ರಸ್ತೆ ಮೂಲಕ ಯಾದವಗಿರಿಯಲ್ಲಿರುವ ಜಾವಾ ಕಾರ್ಖಾನೆಗೆ ತೆರಳಿ ಕೊನೆಗೊಂಡಿತು.

ಮತ್ತೊಂದು ರ‍್ಯಾಲಿ: ಅಂತರ ರಾಷ್ಟ್ರೀಯ ಜಾವಾ ದಿನದ ಹಿನ್ನೆಲೆಯಲ್ಲಿ ಮತ್ತೊಂದು ತಂಡ ಮೈಸೂರಿನಿಂದ ನಂಜನಗೂಡು-ಗುಂಡ್ಲುಪೇಟೆ ಮಾರ್ಗವಾಗಿ ಬಂಡಿಪುರಕ್ಕೆ ಜಾಥಾ ಕೈಗೊಂಡಿತ್ತು. ನಜರ್‍ಬಾದ್‍ನಲ್ಲಿರುವ ಜಾವಾ ಕಾರ್ಖಾನೆಯ ಮಾಲೀಕ ಎಫ್.ಕೆ.ಇರಾನಿ ಅವರ ನಿವಾಸದ ಮುಂಭಾಗದಿಂದ ಹೊರಟ ರ‍್ಯಾಲಿಯು ಬಂಡಿಪುರ ಅರಣ್ಯದ ಅಂಚಿನ ಮೆಲುಕಾಮನಹಳ್ಳಿಯವರೆಗೆ ತೆರಳಿತು. ಆನಂತರ ಅಲ್ಲಿಂದ ಮತ್ತೆ ಮೈಸೂರಿಗೆ ಜಾವಾ ರ‍್ಯಾಲಿ ಆಗಮಿಸಿತು.

ರ‍್ಯಾಲಿಯಲ್ಲಿ: ಜಾವಾ ರ‍್ಯಾಲಿಯಲ್ಲಿ 1960, 80, 90ರ ದಶಕದಲ್ಲಿ ತಯಾರಿಸಿರುವ ಜಾವಾ ಬೈಕ್‍ಗಳು ಪಾಲ್ಗೊಂಡಿದ್ದವು. 60 ಸಿಸಿ ಯಿಂದ 350 ಸಿಸಿವರೆಗೆ ಜಾವಾ, ಯೆಜ್ಡಿ, ರೋಡ್ ಕಿಂಗ್, ಕ್ಲಾಸಿಕ್, ಮೊನಾರ್ಕ್ ಸೇರಿದಂತೆ ಇನ್ನಿತರ ಮಾಡೆಲ್‍ಗಳ ಬೈಕ್‍ಗಳು ಪಾಲ್ಗೊಂಡಿದ್ದವು.

Translate »