ಚಾಮುಂಡಿಬೆಟ್ಟದ ಹಿಟ್ ಅಂಡ್ ರನ್ ಪ್ರಕರಣ: ಇಬ್ಬರ ಸಾವಿಗೆ ಕಾರಣವಾದ ಕಾರು ಪತ್ತೆಗೆ ಪೊಲೀಸರ ಕಾರ್ಯಾಚರಣೆ
ಮೈಸೂರು

ಚಾಮುಂಡಿಬೆಟ್ಟದ ಹಿಟ್ ಅಂಡ್ ರನ್ ಪ್ರಕರಣ: ಇಬ್ಬರ ಸಾವಿಗೆ ಕಾರಣವಾದ ಕಾರು ಪತ್ತೆಗೆ ಪೊಲೀಸರ ಕಾರ್ಯಾಚರಣೆ

July 9, 2018

ಮೈಸೂರು: ಚಾಮುಂಡಿಬೆಟ್ಟದ ಐ-ವಾಚ್ ಟವರ್ ಬಳಿ ಕಳೆದ ನಾಲ್ಕು ದಿನದ ಹಿಂದೆ ಬುಲೆಟ್‍ಗೆ ಡಿಕ್ಕಿ ಹೊಡೆದು ವಿದ್ಯಾರ್ಥಿಗಳಿಬ್ಬರನ್ನು ಬಲಿ ಪಡೆದು ಪರಾರಿಯಾಗಿರುವ ಕಾರಿನ ಸುಳಿವು ಪೊಲೀಸರಿಗೆ ದೊರೆತಿದ್ದು, ಪರಾರಿಯಾಗಿರುವ ಕಾರಿನ ಪತ್ತೆಗೆ ಜಿಲ್ಲೆಯಾದ್ಯಂತ ಮೈಸೂರು ಪೊಲೀಸರು ಹುಡುಕತೊಡಗಿದ್ದಾರೆ.

ಧಾರ್ಮಿಕ ಹಾಗೂ ಪ್ರವಾಸಿ ತಾಣವೂ ಆಗಿರುವ ಚಾಮುಂಡಿಬೆಟ್ಟಕ್ಕೆ ಗುರುವಾರ(ಜು.5) ಸಂಜೆ ಮೈಸೂರು-ಊಟಿ ರಸ್ತೆಯಲ್ಲಿರುವ ಜೆಎಸ್‍ಎಸ್ ಕಾಲೇ ಜಿನ ವಿದ್ಯಾರ್ಥಿಗಳಾದ ಅರವಿಂದರಾವ್ (22) ಹಾಗೂ ಎಂ.ಸಿ.ನಮನ (21) ಬುಲೆಟ್(ಕೆಎ-09, ಹೆಚ್‍ಎಲ್ -7829)ನಲ್ಲಿ ತೆರಳಿದ್ದರು. ಬೆಟ್ಟದಿಂದ ವಾಪಸ್ಸಾಗುತ್ತಿದ್ದಾಗ ಮಾರ್ಗ ಮದ್ಯೆ ವಾಚ್ ಟವರ್ ಬಳಿ ಎದುರಿನಿಂದ ವೇಗವಾಗಿ ಬಂದ ಕಾರೊಂದು ಮುಖಾಮುಖಿ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಇದರಿಂದ ಸವಾರ ಅರವಿಂದರಾವ್ ಎಂಬಾತ ಸ್ಥಳದಲ್ಲಿಯೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಹಿಂಬದಿಯಲ್ಲಿ ಸವಾರಿ ಮಾಡುತ್ತಿದ್ದ ನಮನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೆದುಳು ನಿಷ್ಕ್ರಿಯಗೊಂಡು ಇಹಲೋಕ ತ್ಯಜಿಸಿದ್ದರು.

ಸಾವಿಗೂ ಮುನ್ನ ಹೃದಯ ಕವಾಟ, ಕಿಡ್ನಿ, ಶ್ವಾಸಕೋಶವನ್ನು ದಾನ ಮಾಡುವ ಮೂಲಕ ಆಕೆ ಸಹೋದರ ನವೀನ್ ನೋವಿನಲ್ಲೂ ಮಾನವೀಯತೆ ಪ್ರದರ್ಶಿಸಿದ್ದರು. ಹಿಟ್ ಅಂಡ್ ರನ್ ಪ್ರಕರಣದಲ್ಲಿ ಇಬ್ಬರು ಸವಾರರು ಸಾವೀಡಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣೇಶ್ವರ ರಾವ್ ಅವರು ಡಿಸಿಪಿ ಡಾ.ವಿಷ್ಣುವರ್ಧನ್ ಅವರ ಮಾರ್ಗದರ್ಶನದಲ್ಲಿ ಸಿದ್ದಾರ್ಥ ನಗರ ಸಂಚಾರ ಠಾಣೆಯ ಇನ್ಸ್‍ಪೆಕ್ಟರ್ ಎನ್.ಮುನಿ ಯಪ್ಪ ಅವರ ನೇತೃತ್ವದಲ್ಲಿ ಪರಾರಿಯಾಗಿರುವ ಕಾರನ್ನು ಪತ್ತೆ ಮಾಡಲು 4 ತಂಡಗಳನ್ನು ರಚಿಸಿ ತನಿಖೆ ಚುರುಕು ಗೊಳಿಸುವಂತೆ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿರುವ ಸಿದ್ದಾರ್ಥ ನಗರ ಸಂಚಾರ ಠಾಣೆಯ ಪೊಲೀಸರು ದಿನವಿಡಿ ಕಾರು ಪತ್ತೆಗೆ ಶ್ರಮಿಸುತ್ತಿದ್ದಾರೆ.

ಸ್ಥಳದಲ್ಲಿ ದೊರೆತ ಸುಳಿವು

ಅಪಘಾತ ನಡೆದ ಸ್ಥಳದಲ್ಲಿ ಕಾರಿನ ಸೈಡ್ ಮಿರರ್ ಹಾಗೂ ಬಾನೆಟ್‍ನ ಪೀಸೊಂದು ಹೊರತುಪಡಿಸಿದ್ದರೆ ಬೇರಾವ ಸುಳಿವು ಸಿಕ್ಕಿರಲಿಲ್ಲ. ಡಿಕ್ಕಿ ಹೊಡೆದ ಕಾರನ್ನು ಯಾರೂ ನೋಡಿರಲಿಲ್ಲ. ಇದರಿಂದ ಘಟನಾ ಸ್ಥಳದಲ್ಲಿ ಸಿಕ್ಕಿದ ಕನ್ನಡಿ ಮತ್ತು ಬಾನೆಟ್‍ನ ಚೂರನ್ನು ವಶಕ್ಕೆ ಪಡೆದ ಪೊಲೀಸರು ವಿವಿಧ ಶೋ ರೂಮ್‍ಗಳ ಸಿಬ್ಬಂದಿಗಳಿಗೆ ಅದನ್ನು ತೋರಿಸಿ ಅಭಿಪ್ರಾಯ ಕೇಳಿದಾಗ ಆ ಕಾರು `ಹುಂಡೈ ಕ್ರೆಟಾ’ ಕಾರಿನ ಕನ್ನಡಿಯದ್ದಾಗಿದೆ ಎಂಬ ಅಂಶ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹುಂಡೈ ಕ್ರೆಟಾ ಕಾರು ಖರೀದಿಸಿರುವವರ ವಿಳಾಸದ ಪಟ್ಟಿಯನ್ನು ಕಲೆಹಾಕಿದ್ದಾರೆ. ಅಲ್ಲದೆ ಅಪಘಾತ ನಡೆಸಿ ಪರಾರಿ ಯಾಗಿರುವ ಕಾರನ್ನು ಪತ್ತೆ ಮಾಡಲು ನಾಲ್ಕು ತಂಡಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಈ ಪೊಲೀಸರು ಕ್ರೆಟಾ ಕಾರು ಹೊಂದಿರುವವರ ಮನೆಯ ಬಾಗಿಲು ಬಡಿಯತೊಡಗಿದ್ದಾರೆ.

ಎಲ್ಲೆಲ್ಲಿ: ಅಪಘಾತ ನಡೆದ ಸಮಯವನ್ನು ಅವ ಲೋಕಿಸಿದರೆ ಅಪಘಾತವೆಸಗಿದ ಕಾರು ಮೈಸೂರು ನಗರ ಅಥವಾ ಜಿಲ್ಲೆಯ ನಿವಾಸಿಗಳದ್ದೇ ಎಂದು ನಿರ್ಧಾ ರಕ್ಕೆ ಬಂದಿರುವ ಪೊಲೀಸರು ಮೊದಲ ಹಂತದಲ್ಲಿ ಈ ಭಾಗದಲ್ಲಿರುವ ಕ್ರೆಟಾ ಕಾರಿನ ಶೋಧ ಕಾರ್ಯ ಮುಂದುವರೆಸಿದ್ದಾರೆ. ಅಪಾರ್ಟ್‍ಮೆಂಟ್, ಹೊರವಲಯದ ಮನೆಗಳು, ತಾಲೂಕುಗಳಲ್ಲಿ, ಗ್ರಾಮಗಳಲ್ಲಿ ಈಗಾ ಗಲೇ ಸುಮಾರು 30ಕ್ಕೂ ಹೆಚ್ಚು ಕ್ರೆಟಾ ಕಾರನ್ನು ಪರಿಶೀ ಲಿಸಿದ್ದಾರೆ. ಆದರೆ ಇದುವರೆಗೂ ಅಪಘಾತ ನಡೆಸಿ ರುವ ಕಾರಿನ ಸುಳಿವು ದೊರೆತಿಲ್ಲ. ಛಲಬಿಡದ ವಿಕ್ರಮ ನಂತೆ ಕ್ರೆಟಾ ಕಾರಿನ ಹಿಂದೆ ಬಿದ್ದಿದ್ದಾರೆ.

ಮಾಹಿತಿ ರವಾನೆ: ಅಪಘಾತ ನಡೆಸಿದ ಕಾರನ್ನು ದುರಸ್ಥಿ ಮಾಡಿಸುವುದಕ್ಕೆ ಬಂದರೆ ಮಾಹಿತಿ ನೀಡು ವಂತೆ ಸರ್ವೀಸ್ ಸೆಂಟರ್‍ಗಳು ಮೆಕ್ಯಾನಿಕ್‍ಗಳಿಗೆ ಸೂಚಿಸಿದ್ದಾರೆ. ಅಲ್ಲದೆ ಮುರಿದಿರುವ ಕನ್ನಡಿ ಹಾಗೂ ಬಾನೆಟ್ ಶೋ ರೂಮ್‍ಗಳಲ್ಲಿಯೇ ಖರೀದಿಸಬೇಕಾಗಿರುವುದರಿಂದ ಶೋ ರೂಮ್‍ಗಳ ಮೇಲೂ ಕಣ್ಣಿಟ್ಟಿದ್ದಾರೆ. ಅಲ್ಲದೆ ಎಲ್ಲಾ ಶೂ ರೂಮ್‍ಗಳಿಗೂ ಪತ್ರ ಬರೆದು ಮಾಹಿತಿ ನೀಡುವಂತೆ ಕೋರಿದ್ದಾರೆ.

ಸಿಸಿ ಕ್ಯಾಮರಾ ಪರಿಶೀಲನೆ: ಅಪಘಾತ ನಡೆಸಿರುವ ಕ್ರೆಟಾ ಕಾರನ್ನು ಪತ್ತೆ ಮಾಡುವುದಕ್ಕಾಗಿ ಸಿದ್ದಾರ್ಥನಗರ ಸಂಚಾರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಎನ್.ಮುನಿಯಪ್ಪ ನೇತೃತ್ವದಲ್ಲಿ ಕುರುಬಾರಹಳ್ಳಿ ವೃತ್ತದಲ್ಲಿರುವ ಸಿಸಿ ಕ್ಯಾಮರಾ, ಕಾವೇರಿ ಎಂಪೋರಿಯಂನಲ್ಲಿರುವ ಸಿಸಿ ಕ್ಯಾಮರಾ ಸೇರಿದಂತೆ ಹಲವು ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ್ದಾರೆ. ಅಂದು ಸಂಜೆ 7.47ಕ್ಕೆ ಚಾಮುಂಡಿಬೆಟ್ಟದತ್ತ ಕ್ರೆಟಾ ಕಾರು ಹೋಗುತ್ತಿರುವುದು ಕಂಡು ಬಂದಿದೆ. ಆದರೆ ಅದರ ನಂಬರ್ ಸರಿಯಾಗಿ ಕಾಣದೆ ಇರುವುದು ಪೊಲೀಸರಿಗೆ ತಲೆ ನೋವಾಗಿ ಪರಿಣಿಮಿಸಿದೆ. ತಾವರೆಕಟ್ಟೆ ಬಳಿ ಗ್ರಾ.ಪಂ ವತಿಯಿಂದ ಅಳವಡಿಸಿರುವ ಸಿಸಿ ಕ್ಯಾಮರಾವೊಂದು ಇದ್ದು, ಅದರ ದೃಶ್ಯ ಪರಿಶೀಲಿಸಲು ನಿರ್ಧರಿಸಿದ್ದಾರೆ.

ಸ್ಥಳೀಯರೇ ಆಗಿದ್ದಾರೆ: ಬೆಟ್ಟಕ್ಕೆ ತೆರಳುವ ವೇಳೆ ಬುಲೆಟ್‍ಗೆ ಡಿಕ್ಕಿ ಹೊಡೆದ ಕಾರು, ಸವಾರನನ್ನು 180 ಅಡಿ ದೂರದವರೆಗೂ ಎಳೆದುಕೊಂಡು ಹೋಗಿದೆ. ನಂತರ ಕಾರಿನಿಂದ ಚಾಲಕ ಕೆಳಗಿಳಿದು ಸವಾರನ್ನು ಕಾರಿನಿಂದ ಬಿಡಿಸಿ ನಂದಿ ಮಾರ್ಗದಿಂದ ಪರಾರಿಯಾಗಿದ್ದಾನೆ. ಇದರಿಂದ ಅಪಘಾತ ನಡೆಸಿರುವ ವ್ಯಕ್ತಿ ಸ್ಥಳೀಯ ವ್ಯಕ್ತಿಯೇ ಆಗಿದ್ದು, ಯಾವ ಮಾರ್ಗದಲ್ಲಿ ಹೋದರೆ ತಪ್ಪಿಸಿಕೊಂಡು ಹೋಗಬಹುದು ಎಂದು ತಿಳಿದಿರುವುದರಿಂದ ಆತ ಸ್ಥಳೀಯನೆ ಆಗಿದ್ದಾನೆ ಎಂಬ ಅಭಿಪ್ರಾಯ ಪೊಲೀಸರದ್ದಾಗಿದೆ.

ಮೈಮರೆತ ಸಾರಿಗೆ ಬಸ್ ಚಾಲಕ: ಅಪಘಾತ ಸಂಭವಿಸುವ ಮುನ್ನ ಅದೇ ಕ್ರೆಟಾ ಕಾರು ಚಾಲಕ ಚಾಮುಂಡಿಬೆಟ್ಟಕ್ಕೆ ಹೋಗುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‍ವೊಂದನ್ನು ಹಿಂದಿಕ್ಕಿದ್ದಾನೆ. ತಿರುವಿನಲ್ಲಿ ಹಿಂದಿಕ್ಕಿ ಮುನ್ನಡೆದಾಗ ಎದುರಿನಿಂದ ಬಂದ ಬುಲೆಟ್‍ಗೆ ಡಿಕ್ಕಿ ಹೊಡೆದಿದೆ. ಇದರಿಂದ ಹಿಂದೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ನಿಲ್ಲಿಸಿದ್ದಾರೆ. ಆದರೆ ಚಾಲಕ ಹಾಗೂ ನಿರ್ವಾಹಕರು ಮಾತ್ರ ಕಾರಿನ ನಂಬರ್ ಬರೆದುಕೊಂಡಿಲ್ಲ. ಆ ಬಸ್‍ನ ನಿರ್ವಾಹಕಿ ಕಾರ್‍ನ ನಂಬರ್ ಗುರುತಿಸಲು ಪ್ರಯತ್ನಿಸಿದ್ದಾರಾದರೂ ನಿಖರವಾಗಿ ಹೇಳುತ್ತಿಲ್ಲ. ಇದರಿಂದ ಇನ್ಸ್‍ಪೆಕ್ಟರ್ ಮುನಿಯಪ್ಪ ಅವರು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಯಲು ನಿರ್ಧರಿಸಿದ್ದಾರೆ.

ವಿಡಿಯೋ ಮಾಡಿದ್ದರೆ ಮಾಹಿತಿ ಕೊಡಿ: ಅಪಘಾತ ಸಂಬವಿಸಿದ ಕಾರ್‍ನ ಹಿಂದೆ ಬರುತ್ತಿದ್ದ ಸಾರಿಗೆ ಬಸ್‍ನಲ್ಲಿ ವ್ಯಕ್ತಿಯೊಬ್ಬರು ಮೊಬೈಲ್‍ನಲ್ಲಿ ವಿಡಿಯೋ ಮಾಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಆದರೆ ಆ ವ್ಯಕ್ತಿ ಯಾರು ಎಂದು ತಿಳಿದಿಲ್ಲ. ಈ ಹಿನ್ನೆಲೆಯಲ್ಲಿ ಕಾರಿನ ನಂಬರ್ ತಿಳಿದಿರುವವರು ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲದೆ ಮಾಹಿತಿದಾರರ ಹೆಸರನ್ನು ಗೌಪ್ಯವಾಗಿರಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

Translate »