ಕಾಂಗ್ರೆಸ್‍ನಲ್ಲಿ ಮಹಿಳೆಯರಿಗೆ ಗೌರವವಿಲ್ಲ
ಮೈಸೂರು

ಕಾಂಗ್ರೆಸ್‍ನಲ್ಲಿ ಮಹಿಳೆಯರಿಗೆ ಗೌರವವಿಲ್ಲ

July 9, 2018

ಬೆಂಗಳೂರು: ಕಾಂಗ್ರೆಸ್‍ನಲ್ಲಿ ಮಹಿಳೆಯರಿಗೆ ಗೌರವವಿಲ್ಲ. ಸ್ಥಾನಮಾನ ಕೇಳಿದರೆ ಗ್ರಾಮರಸ್ ಆಗಿ ಇಲ್ಲ ಎನ್ನುತ್ತಾರೆ ಎಂದು ಮಹಿಳಾ ಕಾರ್ಯಕರ್ತೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದಾಗ ಮಾಜಿ ಸಚಿವೆ ಮೋಟಮ್ಮ ತಬ್ಬಿಬ್ಬಾದ ಘಟನೆ ಧಾರವಾಡದಲ್ಲಿ ಇಂದು ನಡೆಯಿತು.

ಧಾರವಾಡದ ವಿದ್ಯಾವರ್ಧಕ ಸಂಘ ಭವನದಲ್ಲಿ ಕಾಂಗ್ರೆಸ್‍ನಿಂದ `ಚುನಾವಣೆ: ಒಳ-ಹೊರಗೆ’ ಕಾರ್ಯಕ್ರಮ ಮಾಜಿ ಸಚಿವೆ ಮೋಟಮ್ಮ ನೇತೃತ್ವದಲ್ಲಿ ನಡೆಯುತ್ತಿತ್ತು. ಈ ವೇಳೆ ಅನಿತಾ ಗುಂಜಾರಾ ಎಂಬ ಕಾರ್ಯಕರ್ತೆ ಕಾಂಗ್ರೆಸ್ ಮುಖಂಡರ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಮೋಟಮ್ಮನವರು ತಬ್ಬಿಬ್ಬಾದರು.

ಅನಿತಾ ಅವರು ಮಾತನಾಡುತ್ತಾ, ಕಾಂಗ್ರೆಸ್‍ನಲ್ಲಿ ಮಹಿಳೆಯರಿಗೆ ಕಿಂಚಿತ್ತೂ ಗೌರವವಿಲ್ಲ. ಗ್ರಾಮರ್ ಆಗಿ ಇರುವವರಿಗೆ ಮಾತ್ರ ಸ್ಥಾನಮಾನ ನೀಡಲಾಗುತ್ತಿದೆ ಎಂದು ಆರೋಪಿಸಿದರು. ನಾವು ನಿಷ್ಠಾವಂತ ಕಾರ್ಯಕರ್ತರಾಗಿದ್ದು, ಪಕ್ಷದ ನಾಯಕರ ಪರವಾಗಿ ಕೆಲಸ ಮಾಡುವಾಗ ಕೆಲ ನಾಯಕರು ನಮ್ಮನ್ನು ಕೀಳಾಗಿ ನೋಡುತ್ತಾರೆ. ಸ್ಥಾನಮಾನ ಕೇಳಿದರೆ ನೀನು ಗ್ರಾಮರ್ ಆಗಿ ಇಲ್ಲ ಎಂದು ಹೇಳುತ್ತಾರೆ. ಅವರ ಈ ಮಾತುಗಳನ್ನು ಕೇಳುವಾಗ ಅಸಹ್ಯ ಉಂಟಾಗುತ್ತದೆ. ಗ್ಲಾಮರ್ ಆಗಿ ಇದ್ದರೆ ಮಾತ್ರ ಸ್ಥಾನಮಾನ ಎನ್ನುತ್ತಾರಲ್ಲಾ, ಇಂದಿರಾ ಗಾಂಧಿಯವರು ಗ್ಲಾಮರ್ ಆಗಿ ಇದ್ದಾರಾ ಮೇಡಂ, ಗ್ಲಾಮರ್ ಎಂಬುದು ಉಡುಪಿನಲ್ಲಿ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್ ಮುಖಂಡರಿಗೆ ಮಹಿಳಾ ಕಾರ್ಯಕರ್ತೆಯರು ನೆನಪಾಗುತ್ತಾರೆ. ಪಕ್ಷಕ್ಕಾಗಿ ನಾವು ಹಗಲಿರುಳು ದುಡಿಯುತ್ತೇವೆ. ಕೆಲವೊಮ್ಮೆ ರಾತ್ರಿ ವೇಳೆ ಪ್ರಚಾರಕ್ಕೆ ತೆರಳಿದಾಗ ಬಹಳ ಕಷ್ಟವಾಗುತ್ತದೆ. ಒಮ್ಮೆ ಮುಖಂಡನೊಬ್ಬ ನನ್ನ ಮೈ ಮುಟ್ಟಿದ್ದ. ನಾನು ಅವನನ್ನು ತಳ್ಳಿ ಪ್ರತಿರೋಧ ತೋರಿದ್ದೆ ಎಂದ ಅವರು, ನಾವು ಮನೆ ಕೆಲಸವನ್ನೂ ಮಾಡಿಕೊಂಡು ಪಕ್ಷಕ್ಕಾಗಿಯೂ ದುಡಿಯುತ್ತಿದ್ದೇವೆ. ಚುನಾವಣಾ ಪ್ರಚಾರದಲ್ಲಿ ತೊಡಗಿದ ಮಹಿಳೆಯರಿಗೆ ಸರಿಯಾಗಿ ಹಣವನ್ನೂ ಕೊಡುವುದಿಲ್ಲ. ಇದನ್ನೆಲ್ಲಾ ನೀವು ಸರಿಪಡಿಸಬೇಕು ಎಂದು ಏರು ಧನಿಯಲ್ಲೇ ಮೋಟಮ್ಮ ಅವರಿಗೆ ಮನವಿ ಮಾಡಿದರು. ನಂತರ ಮಾತನಾಡಿದ ಮೋಟಮ್ಮ, ಮಹಿಳೆಯರು ಎಲ್ಲಾ ವಿಚಾರಗಳನ್ನೂ ಸ್ವತಂತ್ರವಾಗಿ ತೀರ್ಮಾನ ಕೈಗೊಳ್ಳಬೇಕು.

ನಿಮಗಾದಂತಹ ಕಸಿವಿಸಿ ನನಗೂ ಆಗಿದೆ. ಸ್ಪರ್ಧೆ ವಿಚಾರದಲ್ಲಾಗಲೀ, ಪ್ರಚಾರದ ವಿಚಾರದಲ್ಲಾಗಲೀ ನಮ್ಮದೇ ಆದ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು. ನಮ್ಮ ಸಂಘಟನೆಯಲ್ಲಿ ಒಗ್ಗಟ್ಟಿದ್ದರೆ ಇಂತಹ ಸವಾಲುಗಳನ್ನು ಎದುರಿಸುವುದು ಕಷ್ಟವೇನಾಗುವುದಿಲ್ಲ. ಅಂತಹ ಪರಿಸ್ಥಿತಿಗಳು ಬಂದಾಗ ಪ್ರಚಾರಕ್ಕೇ ಹೋಗಬಾರದು. ಚುನಾವಣೆ ವೇಳೆಯಲ್ಲಿ ಪ್ರಚಾರಕ್ಕೆ ಹೋದ ಗಂಡಸರಿಗೆ ಕುಡಿಸಿ, ತಿನ್ನಿಸಿ ಕಳುಹಿಸುತ್ತಾರೆ. ಮಹಿಳೆಯರಿಗೆ ಹಣವನ್ನೂ ಸರಿಯಾಗಿ ಕೊಡುವುದಿಲ್ಲ ಎಂದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ನೀವು ನನಗೆ ತಿಳಿಸಿರುವ ಎಲ್ಲಾ ವಿಚಾರಗಳ ಬಗ್ಗೆ ಪಕ್ಷದ ಹಿರಿಯ ಮುಖಂಡರ ಜೊತೆ ಮಾತನಾಡಿ ಪರಿಹಾರ ಒದಗಿಸುತ್ತೇನೆ ಎಂದು ಭರವಸೆ ನೀಡಿದರು.

Translate »