ಮೈಸೂರಲ್ಲಿ 2 ದಿನಗಳ ಗೆಡ್ಡೆ ಗೆಣಸು ಮೇಳ ಆರಂಭ
ಮೈಸೂರು

ಮೈಸೂರಲ್ಲಿ 2 ದಿನಗಳ ಗೆಡ್ಡೆ ಗೆಣಸು ಮೇಳ ಆರಂಭ

February 7, 2021

ಮೈಸೂರು,ಫೆ.6(ಆರ್‍ಕೆ)-ಬೆಂಗಳೂರಿನ ಸಾವಯವ ಕೃಷಿಕರ ಬಳಗದ ಸಹಜ ಸಮೃದ್ಧ ಸಂಸ್ಥೆಯು ರೋಟರಿ ಕ್ಲಬ್ ಆಫ್ ಮೈಸೂರು ಪಶ್ಚಿಮ ಸಂಸ್ಥೆಯ ಸಹಯೋಗ ದೊಂದಿಗೆ ಮೈಸೂರಿನ ನಂಜರಾಜ ಬಹದ್ದೂರ್ ಛತ್ರ ದಲ್ಲಿ ಶನಿವಾರದಿಂದ ಆರಂಭವಾದ ಎರಡು ದಿನಗಳ ಗೆಡ್ಡೆ-ಗೆಣಸು ಮೇಳವನ್ನು ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ನಮ್ಮ ಪೂರ್ವಜರು ಕಾಡಿನಲ್ಲಿ ಬೆಳೆದ ನಿಸರ್ಗದತ್ತವಾದ ಗೆಡ್ಡೆ-ಗೆಣಸು, ಸಾವ ಯವ ಕೃಷಿ ಉತ್ಪನ್ನಗಳನ್ನು ಬಳಸುತ್ತಿದ್ದರಿಂದ ಆರೋಗ್ಯ ದಿಂದ ಸುದೀರ್ಘ ಕಾಲದವರೆಗೆ ಬದುಕುತ್ತಿದ್ದರು. ಅಂತಹ ಪೌಷ್ಟಿಕಾಂಶಯುಕ್ತ ನಿಸರ್ಗದತ್ತ ಆಹಾರ ಪದಾರ್ಥ ಗಳನ್ನು ಇಂದಿನ ಆಧುನಿಕ ಕಾಲದಲ್ಲಿ ಸೇವಿಸುವುದು ಅತ್ಯಗತ್ಯ ಹಾಗೂ ಅನಿವಾರ್ಯವಾಗಿದೆ ಎಂದರು.

ನಮ್ಮ ಸಂಸ್ಕøತಿಯ ಪ್ರತೀಕವಾದ ಗೆಡ್ಡೆ-ಗೆಣಸಿನ ಸಂಪತ್ತನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೂ ಪರಿಚಯಿಸ ಬೇಕು. ಅದರಿಂದ ರೋಗ-ರುಜಿನಗಳನ್ನು ಎದುರಿಸುವ ಶಕ್ತಿ ಹೆಚ್ಚಾಗಲಿದೆ. ಮನುಷ್ಯ ಕೃಷಿ ಮಾಡುವ ಮುನ್ನ ಭೂಮಿಯಲ್ಲಿ ಸಿಗುವ ಗೆಡ್ಡೆ-ಗೆಣಸುಗಳೇ ಆಹಾರವಾಗಿ ದ್ದವು. ಇಂತಹವುಗಳು ನಮ್ಮ ಕೃಷಿ ಸಾಗುವಳಿಯ ಭಾಗವಾಗಬೇಕು. ಪ್ರಕೃತಿಯ ಕೊಡುಗೆಯಾದ ಈ ಆದಿ ಕಾಲದ ಆಹಾರಗಳನ್ನು ಜನರಿಗೆ ಪರಿಚಯಿಸಿ ಸೇವಿಸಲು ಪ್ರೇರೇಪಿಸುವ ಈ ಮೇಳಕ್ಕೆ ಜನರು ಬಂದು ಖರೀದಿಸಿ ಬಳಸುವ ಮೂಲಕ ಮುಂದೆ ಸಾವಯವ ಕೃಷಿಗೆ ಉತ್ತೇಜನ ನೀಡಬೇಕು ಎಂದು ಯದುವೀರ ನುಡಿದರು.

`ಮರೆತು ಹೋದ ಆಹಾರ’ (Forgotten Foods) ಎಂಬ ಸಂಕಲ್ಪದೊಂದಿಗೆ ಸಿದ್ಧಪಡಿಸಿರುವ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ನವದೆಹಲಿಯ `ಅಗ್ರಿ ಕಲ್ಚರಲ್ ವಲ್ರ್ಡ್-ಕೃಷಿ ಜಾಗರಣೆ’ ಸಂಪಾದಕಿ ಡಾ. ಲಕ್ಷ್ಮಿ ಉನ್ನಿತಾನ್ ಅವರು, ಮಳೆಯ ಏರು-ಪೇರು ರೈತರನ್ನು ಕಂಗೆಡಿಸಿದ್ದು, ಉಂಟಾಗಿರುವ ಆಹಾರ ಸಮಸ್ಯೆಗೆ ಗೆಡ್ಡೆ-ಗೆಣಸು ಪರಿಹಾರವಾಗಲಿದೆ ಎಂದರು.

ಕೇವಲ ಮಳೆಯನ್ನೇ ಅವಲಂಬಿಸಿ ಬೆಳೆಯುವ ಸುವರ್ಣ ಗೆಡ್ಡೆ, ಕಸುವಿನ ಗೆಡ್ಡೆ, ಕಾಡು ಗೆಣಸು, ಸಿಹಿ ಗೆಣಸಿನಂತಹ ವೈವಿಧ್ಯಮಯಗಳು ನಮ್ಮಲ್ಲಿವೆ. ಅವುಗಳ ಸಂರಕ್ಷಣೆಗೆ ರೈತರು, ಗ್ರಾಹಕರು ಮುಂದಾಗಬೇಕು ಎಂದ ಅವರು, ಆಹಾರವನ್ನಾಗಿ ಬಳಸುವಂತೆ ಜನರಿಗೆ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.

ಕೇರಳದ ವಯನಾಡಿನ ಗೆಡ್ಡೆ-ಗೆಣಸು ತಳಿ ಸಂರಕ್ಷಕ ಎನ್.ಎಂ.ಶಾಜಿ, ಧಾರವಾಡದ ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಪ್ರಧಾನ ಸಂಶೋಧಕ ಡಾ.ಅರುಣ್‍ಕುಮಾರ್ ಬಾವಿದೊಡ್ಡಿ, ಇಮಾಮ್ ಸಾಹೇಬ ಜತ್ತಿ, ರೋಟರಿ ಕ್ಲಬ್ ಆಫ್ ಮೈಸೂರು ಪಶ್ಚಿಮ ಅಧ್ಯಕ್ಷ ಡಾ.ಎಂ.ಡಿ.ರಾಘವೇಂದ್ರ ಪ್ರಸಾದ್, ಸಹಜ ಸಮೃದ್ಧ ಸಂಸ್ಥೆ ನಿರ್ದೇಶಕ ಜಿ. ಕೃಷ್ಣಪ್ರಸಾದ್ ಹಾಗೂ ಇತರರು ಭಾಗವಹಿಸಿದ್ದರು.

Translate »