ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯುವುದರೊಂದಿಗೆ ಅರಮನೆಯಲ್ಲಿ ಖಾಸಗಿ ದರ್ಬಾರ್ ಸಹ ಬುಧವಾರದಿಂದ ಆರಂಭವಾಯಿತು. ನವರಾತ್ರಿಯ ಮೊದಲ ದಿನವಾದ ಇಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರತ್ನ ಖಚಿತ ಸಿಂಹಾಸನಾರೂಢರಾಗಿ ಸಂಪ್ರದಾಯದಂತೆ ಕೆಲ ವಿಧಿ-ವಿಧಾನಗಳನ್ನು ಪೂರೈಸಿ, ಗಮನ ಸೆಳೆದರು.
ಅರಮನೆಯ ದರ್ಬಾರ್ ಹಾಲ್‍ನಲ್ಲಿ ಇಂದು ಬೆಳಗಿನಿಂದ ಮಧ್ಯಾಹ್ನ ದವರೆಗೆ ವಿವಿಧ ಪೂಜಾ ಕೈಂಕರ್ಯ ಗಳಲ್ಲಿ ರಾಜ ವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾಕುಮಾರಿ ಒಡೆಯರ್ ಪಾಲ್ಗೊಂಡು, ಖಾಸಗಿ ದರ್ಬಾರ್‌ಗೆ ಚಾಲನೆ ನೀಡಿದರು. ಸಿಂಹಾಸನಕ್ಕೆ ಇಂದು ಬೆಳಿಗ್ಗೆ 5.30ರಿಂದ 6 ಗಂಟೆಯೊಳಗೆ ಸಿಂಹವನ್ನು ಜೋಡಣೆ ಮಾಡಲಾಯಿತು.
ಬಳಿಕ ಅರಮನೆಯ ಚಾಮುಂಡಿತೊಟ್ಟಿಯಲ್ಲಿ ಬೆಳಿಗ್ಗೆ 7.02ರಿಂದ 7.45ರೊಳಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಕಂಕಣ ಧಾರಣೆ ನೆರವೇರಿಸಲಾಯಿತು.
ಅರಮನೆಯ ಪುರೋಹಿತರಾದ ಶ್ಯಾಮ್ ಜೋಯಿಸ್, ನರಸಿಂಹ, ಶ್ರೀಹರಿ, ರಾಜಪುರೋಹಿತರಾದ ಕುಮಾರ್ ಇನ್ನಿತರರ ನೇತೃತ್ವದಲ್ಲಿ ಕೆಲ ಪೂಜಾ ಕಾರ್ಯ ಜರುಗಿದ ನಂತರ ಬೆಳಿಗ್ಗೆ 10ರಿಂದ 10.45ರೊಳಗೆ ಪಟ್ಟದ ಆನೆ ವಿಕ್ರಮ, ನಿಶಾನೆ ಆನೆ ಗೋಪಿಯೊಂದಿಗೆ ಪಟ್ಟದ ಕುದುರೆ, ಪಟ್ಟದ ಹಸು, ಒಂಟೆ, ಅರಮನೆ ಆನೆಗಳಾದ ಪ್ರೀತಿ, ಸೀತಾ, ರೂಬಿ ಹಾಗೂ ಚಂಚಲ ಆನೆಯನ್ನು ಸವಾರಿ ತೊಟ್ಟಿ ಬಳಿ ಕರೆತರಲಾಯಿತು.
ಅರಮನೆಯ ಆವರಣದಲ್ಲಿರುವ ಶ್ರೀ ಕೋಡಿ ಸೋಮೇಶ್ವರ ದೇವಾಲಯ ಕಳಸದೊಂದಿಗೆ ದೇವರನ್ನು ತರಲಾಯಿತು. ಪಟ್ಟದ ಆನೆ, ಕುದುರೆ, ಹಸು ಸೇರಿದಂತೆ ಅರಮನೆಯ ಪುರೋಹಿತರು ಕಂಕಣ ಧರಿಸಿದ್ದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಹರಸಿದರು.
ಬೆಳಿಗ್ಗೆ 10.45ರ ನಂತರ ಸವಾರಿ ತೊಟ್ಟಿಯಿಂದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ದರ್ಬಾರ್ ಹಾಲ್‍ಗೆ ಕಟ್ಟಿಗೆಯವರು, ಜೋಪಾದರು, ದೀವಟಿಗೆಯವರು ಸಕಲ ಬಿರುದು ಬಾವಲಿಯೊಂದಿಗೆ ಬಹುಪರಾಕ್ ಮೂಲಕ ದರ್ಬಾರ್ ಹಾಲ್‍ಗೆ ಕರೆತಂದರು. ನಂತರ ಬೆಳಿಗ್ಗೆ 10.55 ರಿಂದ 11.15ರವರೆಗೆ ಸಿಂಹಾಸನಾರೋಹಣಕ್ಕೂ ಮುನ್ನ ಕಳಸ ಪೂಜೆ ನಡೆಯಿತು.
ಸಿಂಹಾಸನದ ಸಮೀಪವೇ ನಡೆದ ಕಳಸ ಪೂಜೆಯಲ್ಲಿ ಯುದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪಾಲ್ಗೊಂಡು, ವಿಧಿ-ವಿಧಾನದಂತೆ ಪೂಜೆ ನೆರವೇರಿಸಿದರು. ನಂತರ ಸಿಂಹಾಸನಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದರು. ಸಿಂಹಾಸನಕ್ಕೆ ಇಂದು ಬೆಳಿಗ್ಗೆಯಷ್ಟೇ ಜೋಡಿಸಲಾಗಿದ್ದ ಸಿಂಹಕ್ಕೆ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿದರು. ನಂತರ ಮಧ್ಯಾಹ್ನ 11.45ರಿಂದ 12.02ರ ನಡುವೆ ಸಂದ ಶುಭ ಘಳಿಗೆಯಲ್ಲಿ ರತ್ನಖಚಿತ ಸಿಂಹಾಸನದಲ್ಲಿ ವೀರಾಜಮಾನರಾಗಿ ಕಂಗೊಳಿಸಿದರು.
ಈ ವೇಳೆ ಅವರಿಗೆ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯ, ಪರಕಾಲ ಮಠದ ಪ್ರಸಾದ, ಶ್ರೀರಂಗಪಟ್ಟಣದ ಶ್ರೀರಂಗನಾಥೇಶ್ವರ ದೇವಾಲಯ, ಮೇಲುಕೋಟೆಯ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯ, ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ದೇವಾಲಯ, ಉತ್ತನಹಳ್ಳಿಯ ತ್ರಿಪುರಸುಂದರಿ ಜ್ವಾಲಾಮುಖಿ ದೇವಾಲಯದ, ಅರಮನೆಯ ಆವರಣದಲ್ಲಿರುವ ಎಲ್ಲಾ ದೇವಾಲಯಗಳು ಸೇರಿದಂತೆ ಸುಮಾರು 23 ದೇವಾಲಯಗಳಿಂದ ತಂದಿದ್ದ ಪ್ರಸಾದವನ್ನು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ನೀಡಿ, ತೀರ್ಥವನ್ನು ಪ್ರೋಕ್ಷಣೆ ಮಾಡಿ ಶುಭ ಕೋರಿದರು.
ಎಲ್ಲಾ ದೇವಾಲಯಗಳ ಅರ್ಚಕರಿಂದ ಪ್ರಸಾದ ವಿನಿಯೋಗವಾದ ಬಳಿಕ ಸಿಂಹಾಸನದ ಮುಂದೆ ಪರದೆ ಬಿಟ್ಟು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ದೃಷ್ಟಿ ತೆಗೆಯಲಾಯಿತು. ನಂತರ ಯದುವೀರ್ ಅವರು ಸಿಂಹಾಸನದ ಮೇಲೆ ಎದ್ದುನಿಂತು ಪೊಲೀಸ್ ಬ್ಯಾಂಡ್ ವಾದಕರು ನುಡಿಸಿದ ಮೈಸೂರು ಸಂಸ್ಥಾನದ ಗೀತೆ `ಕಾಯೌ ಶ್ರೀ ಗೌರಿ’ ಗೀತೆಗೆ ವಂದನೆ ಸಲ್ಲಿಸಿ, ಹೊಗಳುಭಟ್ಟರು ಹಾಗೂ ದೀವಿಟಿಗೆಕಾರರಿಂದ ಗೌರವ ಹಾಗೂ ಬಹುಪರಾಕ್ ಸ್ವೀಕರಿಸಿ, ಸವಾರಿ ತೊಟ್ಟಿಯತ್ತ ತೆರಳಿದರು. ಸವಾರ್ ತೊಟ್ಟಿಗೆ ಆಗಮಿಸಿದ ಯದುವೀರ್ ಅವರಿಗೆ ತ್ರಿಷಿಕಾ ಕುಮಾರಿ ಪಾದ ಪೂಜೆ ಮಾಡಿದರು. ಈ ವೇಳೆ ಪ್ರಮೋದಾದೇವಿ ಒಡೆಯರ್ ಉಪಸ್ಥಿತರಿದ್ದು, ಮಗನ ಖಾಸಗಿ ದರ್ಬಾರ್ ಕಣ್ತುಂಬಿಕೊಂಡರು.
ಗಣ್ಯರು ಹಾಜರು: ಈ ಬಾರಿಯ ದಸರಾ ಉದ್ಘಾಟಕರೂ ಆದ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಹಾಗೂ ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ಅವರು ಕುಟುಂಬ ಸದಸ್ಯರೊಂದಿಗೆ ಅರಮನೆಗೆ ಆಗಮಿಸಿ, ಖಾಸಗಿ ದರ್ಬಾರ್ ವೀಕ್ಷಿಸಿದರು. ಯದುವೀರ್ ಸಂಸ್ಕಾರಯುತ ಪೂಜೆ-ಪುನಸ್ಕಾರ ಹಾಗೂ ಚಿನ್ನದ ಸಿಂಹಾಸನವನ್ನು ಕಣ್ತುಂಬಿಕೊಂಡರು. ಕಲ್ಯಾಣಮಂಟಪ ಹಾಗೂ ಸವಾರಿ ತೊಟ್ಟಿಯ ಬಳಿ ಯದುವೀರ್ ಅವರಿಗೆ ತ್ರಿಷಿಕಾ ಕುಮಾರಿ ಕೈಗೊಂಡ ಪಾದಪೂಜೆ ಕಾರ್ಯಕ್ರಮದಲ್ಲಿಯೂ ಪಾಲ್ಗೊಂಡರು. ಬಳಿಕ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರಿಗೆ ಗೌರವ ಸಮರ್ಪಿಸಿದರು.
ಪೊಲೀಸ್ ಬ್ಯಾಂಡ್ ವಾದನ: ಖಾಸಗಿ ದರ್ಬಾರ್‌ಗೆ ಎಂದಿನಂತೆ ಪೊಲೀಸ್ ಬ್ಯಾಂಡ್ ವಾದನದ ಸದಸ್ಯರು ನುಡಿಸಿದ ಸಂಗೀತ ಖಾಸಗಿ ದರ್ಬಾರ್‍ನ ಕಳೆ ಹೆಚ್ಚಿಸಿತ್ತು. ಚಾಮರಾಜೇಂದ್ರ ಒಡೆಯರ್ ವಿರಚಿತ ಗೀತೆಗಳನ್ನು ಈ ವೇಳೆ ನುಡಿಸಿದರು.
ಬಿಗಿ ಬಂದೋಬಸ್ತ್: ಹೆಚ್ಚಿನ ಜನರಿಗೆ ಖಾಸಗಿ ದರ್ಬಾರ್ ವೀಕ್ಷಣೆಗೆ ಅವಕಾಶ ನೀಡಿರಲಿಲ್ಲ. ಆದರೆ ಪೊಲೀಸರು ತಮ್ಮ ತಮ್ಮ ಕುಟುಂಬ ಸದಸ್ಯರಿಗೆ ದರ್ಬಾರ್ ಹಾಲ್‍ಗೆ ತೆರಳಲು ಅವಕಾಶ ಮಾಡಿಕೊಟ್ಟಿದ್ದರಿಂದ ಅಲ್ಲಿ ಜನಜಂಗುಳಿ ಹೆಚ್ಚಾಗಿತ್ತು. ಕೆಲವೊಮ್ಮೆ ರಾಜವಂಶಸ್ಥರಿಗೆ ಆತ್ಮೀಯರಾದವರು ಬಂದರೂ ಗೇಟ್‍ನಲ್ಲಿದ್ದ ಪೊಲೀಸರು ದರ್ಬಾರ್ ಹಾಲ್‍ಗೆ ಬಿಡಲು ನಿರಾಕರಿಸಿದರು. ಅರಮನೆಯ ಸಿಬ್ಬಂದಿ ಹೇಳಿದ ರಾಜವಂಶ್ಥರ ಆಪ್ತರನ್ನು ಮಾತ್ರ ಒಳಗೆ ಬಿಡಲಾಯಿತು.
ಮೊಮ್ಮಗನೊಂದಿಗೆ…: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಸೊಸೆ ತ್ರಿಷಿಕಾ ಕುಮಾರಿ ಒಡೆಯರ್, ಮೊಮ್ಮಗ ಆದ್ಯವೀರ್ ಒಡೆಯರ್ ಅವರೊಂದಿಗೆ ಕುಳಿತು ಸಾಂಪ್ರದಾಯಿಕ ಆಚರಣೆಯನ್ನು ವೀಕ್ಷಿಸಿದರು. ಕೆಲವೊಮ್ಮೆ ತ್ರಿಷಿಕಾ ಕುಮಾರಿ ಅವರು ಮಗನನ್ನು ತಮ್ಮ ಬಳಿ ಕೂರಿಸಿಕೊಂಡರೆ, ಮತ್ತೆ ಕೆಲವೊಮ್ಮೆ ಪ್ರಮೋದಾದೇವಿ ಒಡೆಯರ್ ಅವರು ಮೊಮ್ಮಗನನ್ನು ತೊಡೆಯ ಮೇಲೆ ಕೂರಿಸಿಕೊಂಡು ಮುದ್ದಿಸಿದರು.