ಕೊಡಗು ನೆರೆ ಸಂತ್ರಸ್ತರಿಗೆ ಡಾ. ಸುಧಾಮೂರ್ತಿ 25 ಕೋಟಿ ರೂ. ನೆರವು ಘೋಷಣೆ
ಮೈಸೂರು

ಕೊಡಗು ನೆರೆ ಸಂತ್ರಸ್ತರಿಗೆ ಡಾ. ಸುಧಾಮೂರ್ತಿ 25 ಕೋಟಿ ರೂ. ನೆರವು ಘೋಷಣೆ

October 11, 2018

ಮೈಸೂರು: ಪ್ರಕೃತಿ ವಿಕೋಪದಿಂದ ನಿರಾಶ್ರಿತರಾಗಿರುವ ಕೊಡಗಿನವರಿಗೆ ಮನೆ ನಿರ್ಮಿಸಿಕೊಡಲು ತಾವು 25 ಕೋಟಿ ರೂ. ನೆರವು ನೀಡು ವುದಾಗಿ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಡಾ. ಸುಧಾಮೂರ್ತಿ ಅವರು ಇಂದಿಲ್ಲಿ ಪ್ರಕಟಿಸಿದ್ದಾರೆ.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವ ಉದ್ಘಾ ಟಿಸಿ, ಮಾತನಾಡುತ್ತಿದ್ದ ಅವರು, ನೆರೆ ಪೀಡಿತ ಕೊಡಗಿನ ಜನರು ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡು ತೊಂದರೆಗೆ ಸಿಲುಕಿದ್ದಾರೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಸರ್ಕಾರ ಅಲ್ಲಿನ ಜನರಿಗೆ ಪುನರ್ವಸತಿ ಕಲ್ಪಿಸುತ್ತಿದೆ. ಆ ಕಾರ್ಯಕ್ಕೆ ನಮ್ಮ ಸಂಸ್ಥೆಯೂ ಕೈಜೋಡಿಸುವುದು ನಮ್ಮ ಕರ್ತವ್ಯ ಎಂದರು.

ಕೊಡಗಿನ ಪುನರ್ ನಿರ್ಮಾಣಕ್ಕೆ ಪ್ರತಿಷ್ಠಾನ ದಿಂದ 25 ಕೋಟಿ ರೂ. ನೆರವು ನೀಡುತ್ತೇವೆ. ಅಥವಾ ಸರ್ಕಾರ ಭೂಮಿ ಗುರ್ತಿಸಿ ವಿದ್ಯುತ್, ನೀರು ಇನ್ನಿತರ ಸೌಲಭ್ಯ ಕಲ್ಪಿಸಿಕೊಟ್ಟರೆ ನಾವೇ 25 ಕೋಟಿ ರೂ. ವೆಚ್ಚದಲ್ಲಿ ಕೊಡಗಿನ ಜನರಿಗೆ ಮನೆಗಳನ್ನು ನಿರ್ಮಿಸಿಕೊಡುತ್ತೇವೆ ಎಂದು ಡಾ. ಸುಧಾಮೂರ್ತಿ ತಿಳಿಸಿದರು.

ಈಗಾಗಲೇ ಮೈಸೂರಿನ ಹೆಬ್ಬಾಳು ಕೆರೆಯನ್ನು ಅಭಿವೃದ್ಧಿಗೊಳಿಸಿ ಮೇಲ್ದರ್ಜೆ ಗೇರಿಸುವ ಕೆಲಸವನ್ನು ಇನ್‍ಫೋಸಿಸ್ ಪ್ರತಿಷ್ಠಾನದಿಂದ 38 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಿದ್ದೇವೆ. ಇನ್ನೂ 15 ಕೋಟಿ ರೂ. ಖರ್ಚು ಮಾಡಲು ಸಿದ್ಧರಿದ್ದೇವೆ ಎಂದ ಅವರು, ಜನರಿಂದ ಬಂದ ಹಣವನ್ನು ಜನರ ಕಲ್ಯಾಣಕ್ಕಾಗಿಯೇ ಬಳಸುತ್ತಿರುವ ನಮ್ಮ ಸಂಸ್ಥೆಯು ಸಮಾಜದ ಏಳಿಗೆಗೆ ಕಿರು ಕೊಡುಗೆ ನೀಡುತ್ತದೆ ಎಂಬ ಉದಾರ ಮನೋಭಾವನೆಯನ್ನು ಇದೇ ವೇಳೆ ವ್ಯಕ್ತಪಡಿಸಿದರು.

Translate »