ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮೈಸೂರು ವಿಶ್ವವಿದ್ಯಾನಿಲಯಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ನಾಮಕರಣ ಮಾಡುವ ಸಂಬಂಧ ಸದ್ಯದಲ್ಲೇ ತೀರ್ಮಾನಿಸುವುದಾಗಿ ತಿಳಿಸಿದರು.
ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದ್ದ ಅಂಬಾವಿಲಾಸ ಅರಮನೆ ಮುಂಭಾಗದ ಭವ್ಯ ವೇದಿಕೆಯಲ್ಲಿ ಮೊಳಗಿದ ವಿಜಯದ ಸಂಕೇತವಾದ ಕಹಳೆ ಸದ್ದಿನ ನಡುವೆ, ದೀಪ ಬೆಳಗಿಸಿ, ನಗಾರಿ ಬಾರಿಸುವ ಮೂಲಕ ನವರಾತ್ರಿ ಸಾಂಸ್ಕೃತಿಕ ಕಾರ್ಯ ಕ್ರಮಗಳಿಗೆ ವಿದ್ಯುಕ್ತವಾಗಿ ಚಾಲನೆ ನೀಡಿ ಅವರು ಮಾತನಾಡಿದರು.
ಮೈಸೂರು ರಾಜಮಹಾರಾಜರು ನಾಡಿಗೆ ನೀಡಿರುವ ಕೊಡುಗೆ ಅವಿಸ್ಮರಣೀಯ. ನಾಗರಿಕತೆ ಕಲಿಸಿದ ಮಹಾರಾಜರು, ಶಿಕ್ಷಣ, ಆರೋಗ್ಯ, ಕೃಷಿ, ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿ ಕ್ಷೇತ್ರವನ್ನು ಪೋಷಿಸಿದ್ದಾರೆ. ಮೀಸಲಾತಿಯ ಅವಶ್ಯತೆ ಅರಿತು ಮೊದಲಿಗೆ ಅನುಷ್ಠಾನಕ್ಕೆ ತಂದಿದ್ದೂ ಇವರೇ. ನವಾಬರ ಆಳ್ವಿಕೆಯಿದ್ದ ಉತ್ತರ ಕರ್ನಾಟಕ ಭಾಗಕ್ಕೆ ಹೋಲಿಸಿದರೆ ಯದುವಂಶದ ರಾಜರಾಳಿದ ಮೈಸೂರು ಸಂಸ್ಥಾನದ ವೈಭವ ಮರೆಯುವಂತಿಲ್ಲ. ಹಳ್ಳಿ ಹಳ್ಳಿಗೂ ಮೂಲಭೂತ ಸೌಕರ್ಯ ಕಲ್ಪಿಸಿಕೊಟ್ಟಿದ್ದರು ಎಂದು ಸ್ಮರಿಸಿಕೊಂಡ ಸಿಎಂ ಕುಮಾರಸ್ವಾಮಿ, ರಾಜಮಹಾರಾಜರ ಕೊಡುಗೆಯನ್ನು ಸ್ಮರಿಸಿಕೊಳ್ಳುವ ನಿಟ್ಟಿನಲ್ಲಿ ಮೈಸೂರು ವಿವಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಮಹಾರಾಣಿ ಪ್ರಮೋದಾದೇವಿ ಒಡೆಯರ್ ಅವರು ಉನ್ನತ ಶಿಕ್ಷಣ ಹಾಗೂ ಪ್ರೌಢಶಿಕ್ಷಣ ಸಚಿವದ್ವಯರ ಸಮ್ಮುಖದಲ್ಲೇ ತಿಳಿಸಿದ್ದಾರೆ. ವಿವಿ ಸ್ಥಾಪನೆಯೊಂದಿಗೆ ಬಡಮಕ್ಕಳ ವಿದ್ಯಾಬ್ಯಾಸಕ್ಕಾಗಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ ಮಹಾರಾಜರ ಗೌರವಾರ್ಥವಾಗಿ ವಿವಿಗೆ ಅವರ ಹೆಸರನ್ನು ನಾಮಕರಣ ಮಾಡುವ ಬಗ್ಗೆ ಸದ್ಯದಲ್ಲೇ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದರು.
ಜಯಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವವನ್ನು ಅರ್ಥಪೂರ್ಣ, ಸಾರ್ಥಕ ರೀತಿಯಲ್ಲಿ ಸರ್ಕಾರ ಆಚರಿಸಬೇಕೆಂದು ಶಾಸಕ ಎಸ್.ಎ.ರಾಮದಾಸ್ ಆಗ್ರಹಿಸಿದ್ದನ್ನು ಪ್ರಸ್ತಾಪಿಸಿದ ಸಿಎಂ ಕುಮಾರಸ್ವಾಮಿ, ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮೋತ್ಸವದ ಜೊತೆಗೆ ಜಯಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವ ಅರ್ಥಪೂರ್ಣ ಆಚರಣೆಗೆ ನನ್ನ ಸಹಮತವಿದೆ ಎಂದು ಹೇಳಿದರು. ಇಂದಿನ ಕಾರ್ಯಕ್ರಮಗಳೇ ಮೈನವಿರೇಳಿಸುವಂತಿವೆ. ಇನ್ನು ಮಹಾರಾಜರ ಕಾಲದ ವೈಭವವನ್ನು ಮರೆಯಲು ಸಾಧ್ಯವೇ ಇಲ್ಲ. ನಾನು ಚಿಕ್ಕವನಾಗಿದ್ದಾಗ ಜನಸಂದಣಿಯ ನಡುವೆ ನಿಂತು ಜಯಚಾಮರಾಜ ಒಡೆಯರ್ ಅಂಬಾರಿಯಲ್ಲಿ ಸಾಗಿದ್ದನ್ನು ಕಣ್ತುಂಬಿಕೊಂಡಿದ್ದೆ ಎಂದು ಇದೇ ವೇಳೆ ಸ್ಮರಿಸಿಕೊಂಡರು.
ಮೈಸೂರಿನ ವಿಶ್ವವಿಖ್ಯಾತಿಯನ್ನು ಪ್ರವಾಸೋದ್ಯಮ ಅಭಿವೃದ್ಧಿಯ ಮೂಲಕ ಮತ್ತಷ್ಟು ಪಸರಿಸುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ರೂಪಿಸಿಕೊಂಡಿದ್ದೇವೆ. ಮೈಸೂರು ಹಾಗೂ ಕೊಡಗು ಜಿಲ್ಲೆಗೆ ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸಲು ಕಾರ್ಯಕ್ರಮ ರೂಪಿಸಲು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‍ಗೆ ಸಾಕಷ್ಟು ಸಲಹೆ ನೀಡಿದ್ದೇನೆ. ಆಕರ್ಷಣೆ ಕಳೆದುಕೊಳ್ಳುತ್ತಿರುವ ಕೆಆರ್‍ಎಸ್‍ನ ಬೃಂದಾವನವನ್ನು ವಿಶಿಷ್ಟ ರೀತಿಯಲ್ಲಿ ಪರಿವರ್ತಿಸುವ ಚಿಂತನೆಯೂ ಇದೆ. ಮುಂದಿನ ದಿನಗಳಲ್ಲಿ ಬದಲಾವಣೆಯನ್ನು ಕಾಣಲಿದ್ದೀರಿ ಎಂದು ಭರವಸೆ ನೀಡಿದ ಅವರು, ಇನ್ನು ಹತ್ತು ದಿನಗಳ ಕಾಲ ವಿಭಿನ್ನ ಕಾರ್ಯಕ್ರಮಗಳು ನಡೆಯಲಿದ್ದು, ಎಲ್ಲಾ ನಾಗರಿಕರು ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಬಲರಾಮ ಆನೆಯನ್ನು ಕುರಿತ ಡಿ.ಕೆ.ಭಾಸ್ಕರ್ ಅವರ ಆಂಗ್ಲ ಪುಸ್ತಕವನ್ನು ಸಿ.ಆರ್.ನವೀನ್ ಕನ್ನಡಕ್ಕೆ ಅನುವಾದಿಸಿರುವ `ಆನೆ ಬಂತೊಂದ್ ಆನೆ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ದಸರಾ ಅಂಗವಾಗಿ ಅಂಚೆ ಇಲಾಖೆಯಿಂದ ಬಿಡುಗಡೆ ಮಾಡಿರುವ ವಿಶಿಷ್ಟ ಅಂಚೆ ಲಕೋಟೆಯನ್ನು ಪೋಸ್ಟ್ ಮಾಸ್ಟರ್ ಜನರಲ್ ಚಾಲ್ರ್ಸ್ ಲೋಬೋ, ಸಿಎಂ ಕುಮಾರಸ್ವಾಮಿ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ನಮ್ಮನ್ನು ಅಗಲಿರುವ ಬಲರಾಮನ ಕುರಿತ ಪುಸ್ತಕ ಎಂದು ಹೇಳಿ ಯಡವಟ್ಟು ಮಾಡಿದ ನಿರೂಪಕಿ, ನಂತರ ಎಚ್ಚೆತ್ತುಕೊಂಡು ನಮ್ಮೊಡನಿರುವ ಬಲರಾಮ ಎಂದು ತಿದ್ದಿಕೊಂಡರು.
ಕೃಷ್ಣರಾಜ ಕ್ಷೇತ್ರದ ಶಾಸಕ, ಮಾಜಿ ಸಚಿವ ಎಸ್.ಎ.ರಾಮದಾಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ದಸರಾ ಉದ್ಘಾಟಿಸಿದ ಇನ್ಫೋಸಿಸ್ ಪೌಂಡೇಷನ್‍ನ ಮುಖ್ಯಸ್ಥೆ ಸುಧಾಮೂರ್ತಿ, ಉನ್ನತ ಶಿಕ್ಷಣ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್, ಶಾಸಕರಾದ ಅಡಗೂರು ಹೆಚ್.ವಿಶ್ವನಾಥ್, ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ, ಕೆ.ಮಹದೇವ್, ಬಿ.ಹರ್ಷವರ್ಧನ್, ಅಶ್ವಿನ್‍ಕುಮಾರ್, ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ, ಸಿಇಓ ಕೆ.ಜ್ಯೋತಿ, ತಾಪಂ ಉಪಾಧ್ಯಕ್ಷ ಎನ್.ಬಿ.ಮಂಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಸವರಾಜು, ಮೈಸೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಲ್ಪನಾ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಪರಿಸರವಾದಿ ಯಲ್ಲಪ್ಪರೆಡ್ಡಿ, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.