ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರಿಂದ ದಸರಾ ಮಹೋತ್ಸವಕ್ಕೆ ಚಾಲನೆ
ಮೈಸೂರು, ಮೈಸೂರು ದಸರಾ

ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರಿಂದ ದಸರಾ ಮಹೋತ್ಸವಕ್ಕೆ ಚಾಲನೆ

October 11, 2018

ಮೈಸೊರು: ವಿಶ್ವೆ ಖ್ಯಾತಿಯ ಮೈಸೊರು ದಸರಾ ಮಹೋತ್ಸವಕ್ಕೆ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥರೂ ಆದ ಹಸೆರಾಂತ ಲೇಖಕಿ ಡಾ.ಸುಧಾಮೂರ್ತಿ ಅವರು ಇಂದು ವಿಧ್ಯುಕ್ತ ಚಾಲನೆ ನೀಡಿದರು. ಚಾಮುಂಡೀಶ್ವೆರಿ ಸನ್ನಿಧಿಯಲ್ಲಿ ಅಲಂಕೃತ ಬೆಳ್ಳಿ ರಥದಲ್ಲಿ ವಸ್ತ್ರಾಭರಣಗಳಿಂದ ಅಲಂಕೃತಳಾಗಿದ್ದ ನಾಡಿನ ಅಧಿದೇವತೆ ತಾಯಿ ಶ್ರೀ ಚಾಮುಂಡೀಶ್ವೆರಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಶುಭ ತುಲಾ ಲಗ್ನದಲ್ಲಿಇಂದು ಬೆಳಿಗ್ಗೆ 7.30 ಗಂಟೆಗೆ ಶ್ರೀಮತಿ ಸುಧಾಮೂರ್ತಿ ಅವರು 2018ರ ನವರಾತ್ರಿ ಉತ್ಸವವನ್ನು ಉದ್ಘಾಟಿಸಿದರು

ಆ ಮೂಲಕ 408 ವರ್ಷಗಳ ಇತಿಹಾಸ ಹೊಂದಿರುವ ಈ ಸಾಲಿನ ಮೈಸೂರು ದಸರಾ ಮಹೋತ್ಸವ ಆರಂಭವಾದಂತಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಲೆ, ಸಂಸ್ಕೃತಿ, ಕ್ರೀಡೆ, ಸಂಗೀತ, ನೃತ್ಯ, ನಾಟಕ ಸೇರಿದಂತೆ ಹಲವು ಚಟುವಟಿಕೆ ಗಳು ಗರಿಗೆದರಿಕೊಂಡವು.

ಚಾಮುಂಡಿಬೆಟ್ಟ ನಿಸರ್ಗದ ಮಡಿಲಲ್ಲಿ ಕವಿದಿದ್ದ ಮಂಜಿನ ಮಧ್ಯೆ ಡಾ.ಸುಧಾಮೂರ್ತಿ, ಪತಿ ನಾರಾಯಣಮೂರ್ತಿ ಅವರನ್ನು ಜಿಲ್ಲಾಡಳಿತವು ಮಹಿಷಾಸುರ ಪ್ರತಿಮೆ ಬಳಿ ಯಿಂದ ಪುಷ್ಪಗುಚ್ಛ ನೀಡಿ, ಪೂರ್ಣಕುಂಭ ಸ್ವಾಗತದೊಂದಿಗೆ ಜಾನಪದ ಕಲಾತಂಡ ಹಾಗೂ ಮಂಗಳವಾದ್ಯದೊಂದಿಗೆ ದೇವ ಸ್ಥಾನಕ್ಕೆ ಕರೆದೊಯ್ದು ಚಾಮುಂಡೇಶ್ವರಿ ದರ್ಶನ ಮಾಡಿಸಿದರು.

ನಂತರ ಬೆಳಿಗ್ಗೆ 7.10 ಗಂಟೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಇತರ ಸಚಿವರು ಆಗಮಿಸಿದಾಗ ಮತ್ತೆ ಡಾ. ಸುಧಾಮೂರ್ತಿರನ್ನು ಮಹಿಷಾಸುರ ಪ್ರತಿಮೆ ಬಳಿಗೆ ಕರೆದೊಯ್ದು ಭವ್ಯ ಮೆರವಣಿಗೆ ಯಲ್ಲಿ ನಂದಿಧ್ವಜದೊಂದಿಗೆ ಕರೆತಂದು ಅಧಿದೇವತೆಗೆ ವಿಶೇಷ ಪೂಜೆ ಸಮರ್ಪಿ ಸಿದ ಬಳಿಕ ವೇದಿಕೆಗೆ ಕರೆತರಲಾಯಿತು.

ವೇದಿಕೆಯ ಎಡಭಾಗದ ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಿದ್ದ ಯದುಕುಲದ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸುಧಾಮೂರ್ತಿ ಅವರು ನವರಾತ್ರಿ ಉತ್ಸವವನ್ನು ಉದ್ಘಾಟಿಸಿದರು.


ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ದಸರಾ ಉದ್ಘಾಟಿಸಿದ ಸುಧಾಮೂರ್ತಿ ಅವರನ್ನು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ಪರವಾಗಿ ಸನ್ಮಾನಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಸಚಿವರಾದ ಸಾ.ರಾ.ಮಹೇಶ್, ಜಯಮಾಲ, ರಾಜಶೇಖರ್, ಬಸವರಾಜ್ ಪಾಟೀಲ್, ಸಂಸದ ಪ್ರತಾಪ್‍ಸಿಂಹ, ಶಾಸಕರಾದ ಎಲ್.ನಾಗೇಂದ್ರ, ಹರ್ಷವರ್ಧನ್, ಅಶ್ವಿನ್‍ಕುಮಾರ್, ಎ.ಹೆಚ್.ವಿಶ್ವನಾಥ್, ಎಸ್.ಎ.ರಾಮದಾಸ್, ನಿರಂಜನ್‍ಕುಮಾರ್, ವಿಧಾನಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ನಯೀಮಾ ಸುಲ್ತಾನ್, ಉಪಾಧ್ಯಕ್ಷ ನಟರಾಜ್, ತಾಲೂಕು ಪಂಚಾಯ್ತಿ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಚಾಮುಂಡಿಬೆಟ್ಟ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ನರೇಂದ್ರ ನಾಯಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದೇ ವೇಳೆ ಮುಖ್ಯಮಂತ್ರಿಗಳು, ದಸರಾ ಕ್ರೀಡಾ ಜ್ಯೋತಿಯನ್ನು ರಾಷ್ಟ್ರೀಯ ಕ್ರೀಡಾಪಟು ಬಸವರಾಜು ಒಳಗೊಂಡ ತಂಡಕ್ಕೆ ಹಸ್ತಾಂತರಿಸುವ ಮೂಲಕ ರಾಜ್ಯಮಟ್ಟದ ದಸರಾ ಕ್ರೀಡಾಕೂಟಕ್ಕೆ ಹಸಿರು ನಿಶಾನೆ ತೋರಿದರು. ಕಾರ್ಯಕ್ರಮ ಮುಗಿದ ನಂತರ ಕುಮಾರಸ್ವಾಮಿ ಅವರು ಚಾಮುಂಡಿಬೆಟ್ಟದಲ್ಲಿ ಸ್ಥಾಪಿಸಿರುವ ಪೊಲೀಸ್ ಸಹಾಯವಾಣಿ ಕೇಂದ್ರವನ್ನೂ ಉದ್ಘಾಟಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಬಸವರಾಜು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಜಿ.ಕಲ್ಪನಾ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಅಡಿಷನಲ್ ಡಿಸಿ ಟಿ.ಯೋಗೇಶ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜ್ಯೋತಿ, ನಗರ ಪಾಲಿಕೆ ಕಮೀಷ್ನರ್ ಕೆ.ಹೆಚ್.ಜಗದೀಶ್, ಮುಡಾ ಕಮೀಷ್ನರ್ ಪಿ.ಎಸ್.ಕಾಂತರಾಜು ಸೇರಿದಂತೆ ಇತರ ಅಧಿಕಾರಿಗಳು ಸಮಾರಂಭದಲ್ಲಿ ಹಾಜರಿದ್ದರು.

ಐಜಿಪಿ ಶರತ್‍ಚಂದ್ರ, ನಗರ ಪೊಲೀಸ್ ಕಮೀಷ್ನರ್ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್, ಎಸ್ಪಿ ಅಮಿತ್‍ಸಿಂಗ್, ಡಿಸಿಪಿಗಳಾದ ಡಾ.ವಿಕ್ರಂ ವಿ.ಅಮಟೆ ನೇತೃತ್ವದಲ್ಲಿ ದಸರಾ ಉದ್ಘಾಟನಾ ಸಮಾರಂಭಕ್ಕೆ ಭಾರೀ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದಲ್ಲಿ ತಳಿರು ತೋರಣ, ವಿದ್ಯುದೀಪಾಲಂಕಾರ, ಬಣ್ಣ ಬಣ್ಣದ ರಂಗೋಲಿಯಿಂದ ಶೃಂಗರಿಸಲಾಗಿತ್ತು. ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಪೂಜಾ ಕೈಂಕರ್ಯವನ್ನು ನೆರವೇರಿಸಲಾಯಿತು.

ದಸರಾ ಉದ್ಘಾಟನೆ ಅವಕಾಶ ಸಿಕ್ಕಿದ್ದು ನನ್ನ ಪೂರ್ವ ಜನ್ಮದ ಪುಣ್ಯ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋ ತ್ಸವ ಉದ್ಘಾಟಿಸಲು ಅವಕಾಶ ಸಿಕ್ಕಿರುವುದು ನನ್ನ ಪೂರ್ವಜನ್ಮದ ಪುಣ್ಯ ಎಂದು ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಡಾ. ಸುಧಾ ನಾರಾಯಣ ಮೂರ್ತಿ ಧನ್ಯತೆ ಮೆರೆದರು.

ಚಾಮುಂಡಿಬೆಟ್ಟದಲ್ಲಿ 2018ರ ದಸರಾ ಮಹೋತ್ಸವ ಉದ್ಘಾಟಿಸಿ ಮಾತ ನಾಡುತ್ತಿದ್ದ ಅವರು, ಕನ್ನಡ ಜನತೆ ಹಾಗೂ ದಸರಾ ಉದ್ಘಾಟನೆಗೆ ಅವ ಕಾಶ ನೀಡಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಕನ್ನಡ ನಾಡಿನಲ್ಲೇ ಮತ್ತೆ ಮತ್ತೆ ಹುಟ್ಟಬೇಕೆಂಬ ಆಸೆ ಇದೆ. ಕನ್ನಡ ಭಾಷೆ ಸುಲಿದ ಬಾಳೆಹಣ್ಣಿನ ಹಾಗೆ ಎಂಬ ಪಂಪ ಕವಿಯ ಕವನದ ಸಾಲು ಗಳನ್ನು ನೆನಪಿಸಿಕೊಂಡ ಅವರು, ಇದು ಹೆಮ್ಮೆಯ ಪ್ರತೀಕ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸುವ
ಅವಕಾಶ ಸಿಕ್ಕಿದ್ದು ನನ್ನ ಪೂರ್ವಜನ್ಮದ ಪುಣ್ಯ ಎಂದು ಪುನರುಚ್ಛರಿಸಿದರು. ಈ ಸತ್ಕಾರ್ಯಕ್ಕೆ ಅವಿರೋಧವಾಗಿ ನಾನು ಆಯ್ಕೆಯಾದೆ ಎಂದು ತಿಳಿದಾಗ ಸಂತೋಷವಾಯಿತು. ಕನ್ನಡ ಜನರು ನನ್ನ ಮೇಲಿಟ್ಟಿರುವ ಪ್ರೀತಿಗೆ ನಾನು ಚಿರಋಣಿ.

ಅದಕ್ಕಾಗಿ ನಾವು ಕನ್ನಡ ನಾಡು, ಜನರಿಗೆ ಕೃತಜ್ಞತೆ ಸಲ್ಲಿಸಬೇಕಾಗಿದೆ ಎಂದು ಸುಧಾಮೂರ್ತಿ ನುಡಿದರು. ಮೈಸೂರು ಅರಸರು ನಾಡಿಗೆ ನೀಡಿದ ಕೊಡುಗೆ ಅಪಾರ. ಅವರಿಲ್ಲದಿದ್ದರೆ ಕರ್ನಾಟಕ ಹರಿದು ಹಂಚಿ ಹೋಗುತ್ತಿತ್ತು. ನವರಾತ್ರಿ ಉತ್ಸವವನ್ನು ಆಚರಿಸಿಕೊಂಡು ಬಂದು ಕಲೆ, ಸಂಸ್ಕೃತಿ, ಪರಂಪರೆಯನ್ನು ಉಳಿಸಿದ್ದಾರೆ ಎಂದ ಅವರು, ಈಗಲೂ ತಿರುಪತಿಯಲ್ಲಿ ದೇವರಿಗೆ ಹಚ್ಚುವ ದೀಪಕ್ಕೆ ಕರ್ನಾಟಕದಿಂದ ತುಪ್ಪ ನೀಡಲಾಗುತ್ತಿದೆ. ಮೊದಲ ಪೂಜೆ ಮೈಸೂರು ಅರಸರ ಹೆಸರಲ್ಲೇ ಮಾಡಲಾಗುತ್ತಿದೆ ಎಂದರೆ, ಯದುವಂಶದ ದಾನ-ಧರ್ಮ, ಕೊಡುಗೆ ಎಷ್ಟು ಪ್ರಮುಖವಾದುದು ಎಂಬುದು ತಿಳಿಯುತ್ತದೆ ಎಂದು ತಿಳಿಸಿದರು.

Translate »