ಬೆಳೆ ನಷ್ಟ ಪರಿಹಾರ ನೀಡಿ: ಡಿಸಿ ಸೂಚನೆ
ಮಂಡ್ಯ

ಬೆಳೆ ನಷ್ಟ ಪರಿಹಾರ ನೀಡಿ: ಡಿಸಿ ಸೂಚನೆ

June 1, 2018

ಮಂಡ್ಯ:  ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ನಷ್ಟ ಪರಿಹಾರಕ್ಕೆ ಅರ್ಜಿ ಸಲ್ಲಿಸಿರುವ ರೈತರಿಗೆ ಶೀಘ್ರವಾಗಿ ವಿಮಾ ಹಣ ನೀಡಲು ವಿಮಾ ಸಂಸ್ಥೆ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ತಿಳಿಸಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಬೆಳೆ ವಿಮಾ ಯೋಜನೆ ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಬೆಳೆ ವಿಮಾ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಯುನೈಟೆಡ್ ಇಂಡಿಯಾ ಕಂಪನಿಯು 2016ನೇ ಸಾಲಿನಲ್ಲಿ ರಬಿ ಬೆಳೆ ಬೆಳೆದ 43,575 ರೈತರಿಗೆ ಹಾಗೂ 2017ನೇ ಸಾಲಿ ನಲ್ಲಿ ಖಾರೀಫ್ ಬೆಳೆ ಮತ್ತು ರಬಿ ಬೆಳೆ ಬೆಳೆದ 22,469 ರೈತರಿಗೆ ಬೆಳೆ ವಿಮೆ ಹಣ ನೀಡಬೇಕಾಗಿದೆ ಎಂದರು.

2018ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆ ಯಲ್ಲಿ 12 ಆಹಾರ ಧಾನ್ಯ, ಎಣ್ಣೆಕಾಳು ಬೆಳೆಗಳು ಮತ್ತು 2 ತೋಟಗಾರಿಕಾ ಬೆಳೆಗಳನ್ನು ಅಧಿಸೂಚಿಸಲಾಗಿದ್ದು, ಭತ್ತ (ನೀರಾವರಿ) ಬೆಳೆಗೆ ಮಂಡ್ಯ, ಮದ್ದೂರು, ಮಳವಳ್ಳಿ, ಕೆ.ಆರ್.ಪೇಟೆ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ಅಧಿಸೂಚಿತ ಗ್ರಾಪಂಗಳಲ್ಲಿ, ರಾಗಿ (ಮಳೆ ಆಶ್ರಿತ) ಬೆಳೆಗೆ ನಾಗಮಂಗಲ ಮತ್ತು ಪಾಂಡವಪುರ ತಾಲೂಕುಗಳ ಅಧಿಸೂಚಿತ ಗ್ರಾಪಂಗಳಲ್ಲಿ, ಮುಸುಕಿನಜೋಳ (ಮಳೆ ಆಶ್ರಿತ) ಬೆಳೆಗೆ ಮಳವಳ್ಳಿ ತಾಲೂಕಿನ ಅಧಿಸೂಚಿತ ಗ್ರಾಪಂಗಳಲ್ಲಿ ರೈತರು ವಿಮೆಗೆ ನೋಂದಾಯಿಸಿಕೊಳ್ಳ ಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಭತ್ತ (ನೀರಾವರಿ), ಭತ್ತ (ಮಳೆ ಆಶ್ರಿತ), ರಾಗಿ (ನೀರಾವರಿ), ರಾಗಿ (ಮಳೆ ಆಶ್ರಿತ), ಮುಸುಕಿನ ಜೋಳ (ನೀರಾವರಿ), ಜೋಳ (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ಎಳ್ಳು (ಮಳೆ ಆಶ್ರಿತ), ನೆಲಗಡಲೆ (ಮಳೆ ಆಶ್ರಿತ), ಅಲಸಂದೆ (ಮಳೆ ಆಶ್ರಿತ), ಟಮೋಟೊ, ಎಲೆ ಕೋಸು ಬೆಳೆಗಳಿಗೆ ಅಧಿಸೂಚಿತ ಹೋಬಳಿಗಳಲ್ಲಿ ರೈತರು ವಿಮೆಗೆ ನೋಂದಾಯಿಸಬಹುದು ಎಂದು ತಿಳಿಸಿದರು.

ಬೆಳೆ ಸಾಲ ಪಡೆಯದ ರೈತರಿಗೆ ಬೆಳೆ ವಿಮೆ ಕಡ್ಡಾಯ ವಾಗಿದ್ದು, ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ ಬೆಳೆ ಸಾಲ ಪಡೆಯದ ರೈತರು ಈ ಯೋಜನೆ ಯಡಿ ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣ , ಖಾತೆ, ಪಾಸ್ ಪುಸ್ತಕ ಹಾಗೂ ಕಂದಾಯ ರಶೀದಿ ನೀಡಬೇಕು ಎಂದರು.

ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನಾ ಮಾತನಾಡಿ, ಬೆಳೆ ವಿಮೆ ಬಗ್ಗೆ ರೈತರಿಗೆ ಅರಿವು ಮೂಡಿಸಲು ತಾಲೂಕು ವ್ಯಾಪ್ತಿಯ ಎಲ್ಲಾ ಬ್ಯಾಂಕುಗಳು, ಗ್ರಾಪಂಗಳು, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಸೇರಿದಂತೆ ಇತರೆ ಕೃಷಿಗೆ ಸಂಬಂಧಿಸಿದ ಇಲಾಖೆಗಳಿಗೆ ಹಸ್ತ ಪ್ರತಿಗಳನ್ನು ವಿತರಿಸಿ ವ್ಯಾಪಕ ಪ್ರಚಾರ ನೀಡಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಕೃಷ್ಣಪ್ಪ, ತೋಟ ಗಾರಿಕೆ ಉಪ ನಿರ್ದೇಶಕ ರಾಜು, ಸಹಕಾರ ಇಲಾಖೆ ಉಪ ನಿಬಂಧಕ ಕುಮಾರ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಪದ್ಮಶೇಖರ್ ಪಾಂಡೆ ಹಾಗೂ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.

Translate »