ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿ ಹಲವರ ವಿರುದ್ಧ ದೂರು ನೀಡಿದ ಐಟಿ
ಮೈಸೂರು

ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿ ಹಲವರ ವಿರುದ್ಧ ದೂರು ನೀಡಿದ ಐಟಿ

April 10, 2019

ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಆಪ್ತರ ಮನೆ ಮೇಲೆ ನಡೆಸಿದ್ದ ದಾಳಿ ಖಂಡಿಸಿ ಪ್ರತಿಭಟನೆ ನಡೆಸಿದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ, ಸಚಿವರು ಸೇರಿದಂತೆ ಉಭಯ ಪಕ್ಷಗಳ ನಾಯಕರ ವಿರುದ್ಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಸಾ.ರಾ.ಮಹೇಶ್, ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಮತ್ತಿತರರ ವಿರುದ್ಧ ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತ ಬಿ.ಆರ್.ಬಾಲಕೃಷ್ಣ ಲಿಖಿತವಾಗಿ ಮುಖ್ಯ ಚುನಾ ವಣಾ ಆಯುಕ್ತ ಸಂಜೀವ್ ಕುಮಾರ್ ಅವರಿಗೆ ದೂರು ನೀಡಿದೆ. ಖಚಿತ ಮಾಹಿತಿ ಮೇರೆಗೆ ಇಲಾಖೆಯ ಅಧಿಕಾರಿಗಳು ಹಾಸನ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಕೆಲವು ಗುತ್ತಿಗೆದಾರರು ಮತ್ತು ಇಂಜಿ ನಿಯರ್‍ಗಳ ಕಚೇರಿ ಮತ್ತು ನಿವಾಸಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ದಾಖಲೆ ರಹಿತ 2.11 ಕೋಟಿ ರೂ. ನಗದು ಮತ್ತು 1.69 ಕೋಟಿ ರೂ.ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿತ್ತು.

ಸರ್ಕಾರದ ಖಜಾನೆಯಿಂದ ಬೃಹತ್ ಮೊತ್ತದ ಹಣ ಪಡೆದಿರುವ ದಾಖಲೆಗಳು ಸಿಕ್ಕಿದ್ದವು. ದಾಳಿಯ ಬಗ್ಗೆ ಮೊದಲೇ ಮಾಹಿತಿ ಸಿಕ್ಕಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅದನ್ನು ಬಹಿರಂಗ ಪಡಿಸಿದ್ದರು. ಈ ಮೂಲಕ ಅವರು ತಮ್ಮ ಗೌಪ್ಯ ಪ್ರಮಾಣವನ್ನು ಉಲ್ಲಂಘಿಸಿ, ತೆರಿಗೆ ವಂಚಕರಿಗೆ ನೆರವಾಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಮಾರ್ಚ್ 28ರಂದು ಮಧ್ಯಾಹ್ನ 2 ಗಂಟೆ ಯಿಂದ ಸಂಜೆ 5.30ರವರೆಗೆ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು, ಬೆಂಬಲಿಗರು ಸಿ.ಆರ್. ಕಟ್ಟಡದ ಎದುರು ಜಮಾಯಿಸಿ ಆದಾಯ ತೆರಿಗೆ ಇಲಾಖೆಯ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆಯ ನೇತೃತ್ವವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಹಿಸಿದ್ದು, ಅಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್, ಸಾ.ರಾ.ಮಹೇಶ್, ರಾಮಲಿಂಗಾ ರೆಡ್ಡಿ ಮತ್ತಿತರರು ಹಾಜರಿದ್ದರು.. ಪ್ರತಿಭಟನೆಯ ವೇಳೆ ಕಾರ್ಯ ಕರ್ತರು ಬ್ಯಾರಿಕೇಡ್‍ಗಳನ್ನು ಹಾರಿ ಕಚೇರಿಯ ಒಳಗೆ ಬರಲು ಪ್ರಯತ್ನಿಸಿದರು. ಈ ಸಂಬಂಧದ ವೀಡಿಯೋ ಕೂಡ ಅಂತರ್ಜಾಲ ದಲ್ಲಿ ಲಭ್ಯವಿವೆ ಎಂದು ದೂರಿನಲ್ಲಿ ಬಾಲಕೃಷ್ಣ ತಿಳಿಸಿದ್ದಾರೆ. ಹಾಲಿ ಮುಖ್ಯಮಂತ್ರಿ ಮತ್ತು ಸಚಿವರ ಇಂತಹ ಪ್ರತಿಭಟನೆ ಮತ್ತು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ನೇರ ಬೆದರಿಕೆ ಹಾಕಿರುವುದು ಅಧಿಕಾರಿಗಳ ಕರ್ತವ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಅಧಿಕಾರಿಗಳಿಗೆ ಚುನಾವಣಾ ಆಯೋಗಕ್ಕೆ ಸೂಚಿಸಬೇಕು. ಇದನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮಕೈಗೊಳ್ಳ ಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.

Translate »