ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ವರ್ಗಾವಣೆ
ಮಂಡ್ಯ, ಮೈಸೂರು

ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ವರ್ಗಾವಣೆ

April 10, 2019

ಮಂಡ್ಯ: ಬಿಸಿಲ ತಾಪಕ್ಕಿಂತಲೂ ತುಸು ಹೆಚ್ಚೇ ಕಾವೇರಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ದಿನಕ್ಕೊಂದು ಹೊಸ ತಿರುವು, ಅಚ್ಚರಿಯ ಬೆಳವಣಿಗೆ ವರದಿಯಾಗುತ್ತಲೇ ಇವೆ. `ಏಕಪಕ್ಷೀಯ’ ನಡೆಯ ಆರೋಪಕ್ಕೆ ಒಳಗಾಗಿದ್ದ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರು ವರ್ಗಾವಣೆಗೊಂಡಿದ್ದು, ಅವರ ಜಾಗಕ್ಕೆ ಡಾ.ಪಿ.ಸಿ.ಜಾಫರ್ ಅವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಮಂಗಳವಾರ ಆದೇಶ ಹೊರಡಿಸಿದೆ.

ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಿಂಧುತ್ವದ ವಿಚಾರವಾಗಿ ವಿವಾದ ಉಂಟಾಗಿದ್ದ ಹಿನ್ನೆಲೆಯಲ್ಲಿ ಹಲವು ದೂರುಗಳು ದಾಖಲಾಗಿದ್ದ ರಿಂದ ಮಂಜುಶ್ರೀ ಅವರನ್ನು ಚುನಾವಣಾ ಆಯೋ ಗದ ನಿರ್ದೇಶನದ ಮೇರೆಗೆ ರಾಜ್ಯ ಸರಕಾರ ವರ್ಗಾವಣೆ ಮಾಡಿದೆ. ಐಎಎಸ್ ಅಧಿಕಾರಿ ಡಾ.ಪಿ.ಸಿ. ಜಾಫರ್ ಅವರನ್ನು ಮಂಡ್ಯ ಜಿಲ್ಲಾಧಿಕಾರಿಯಾಗಿ ನಿಯೋಜಿಸಿ ರಾಜ್ಯ ಸರಕಾರದ ಜಂಟಿ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಜಾಫರ್ ಅವರು ಈ ಹಿಂದೆಯೂ ಮಂಡ್ಯ ಜಿಲ್ಲಾಧಿಕಾರಿಯಾಗಿ 2010ರ ಏ.12ರಿಂದ 2012 ಜೂ.15ರವರೆಗೆ ಕರ್ತವ್ಯ ನಿರ್ವಹಿಸಿದ್ದರು.

ಹಿನ್ನೆಲೆ: ಜಿಲ್ಲಾ ಚುನಾವಣಾಧಿಕಾರಿಯೂ ಆಗಿದ್ದ ಜಿಲ್ಲಾಧಿಕಾರಿ ಮಂಜುಶ್ರೀ ಏಕಪಕ್ಷೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿಖಿಲ್ ನಾಮಪತ್ರ ಕ್ರಮಬದ್ಧವಿರ ಲಿಲ್ಲ. ಅದರ ಜತೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಕೆಲವು ಕಾಲಂ ಖಾಲಿ ಬಿಡಲಾಗಿತ್ತು. ಆದಾಗ್ಯೂ ನಾಮಪತ್ರ ಅಂಗೀಕರಿಸಲಾಗಿದೆ. ಅವಧಿ ಮುಗಿದ ಮೇಲೆ ಇನ್ನೊಂದು ಪ್ರಮಾಣಪತ್ರ ಸೇರ್ಪಡೆಗೊಳಿಸಲಾಗಿದೆ. ನಾಮಪತ್ರ ಪರಿಶೀಲನೆ ವೇಳೆ ಸರಿಯಾಗಿ ವಿಡಿಯೋ ಚಿತ್ರೀಕರಣ ಮಾಡಿಲ್ಲ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಕೆಲವು ಅಧಿಕಾರಿಗಳು ಮುಖ್ಯಮಂತ್ರಿ ಹಿಡಿತಕ್ಕೆ ಸಿಲುಕಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಚುನಾವಣಾ ಏಜೆಂಟ್ ಮದನ್ ಕುಮಾರ್ ಆರೋಪಿಸಿ ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಇದನ್ನು ಅಭ್ಯರ್ಥಿ ಸುಮಲತಾ ಅವರೂ ಸಮರ್ಥಿಸಿದ್ದರು. ಈ ಪ್ರಕರಣದಲ್ಲಿ ವಿಡಿಯೋಗ್ರಾಫರ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿತ್ತು.

ಬಳಿಕ ರಾಜ್ಯ ಚುನಾವಣಾಕಾರಿ ಸಂಜೀವ್ ಕುಮಾರ್, ಮೈಸೂರು ಪ್ರಾದೇಶಿಕ ಆಯುಕ್ತ ಟಿ.ಕೆ.ಅನಿಲ್ ಕುಮಾರ್ ಮಂಡ್ಯಕ್ಕೆ ಭೇಟಿ ನೀಡಿ ದೂರುದಾರ ಮದನ್ ಕುಮಾರ್ ಅವರಿಂದ ಮಾಹಿತಿ ಪಡೆದಿದ್ದರು. ಡಿಸಿ ಮಂಜುಶ್ರೀ, ಇಬ್ಬರು ಸಾಮಾನ್ಯ ಚುನಾವಣಾ ವೀಕ್ಷಕರಿಂದಲೂ ಮಾಹಿತಿ ಸಂಗ್ರಹಿಸಿದ್ದರು. ನಿಖಿಲ್ ನಾಮಪತ್ರ ಅಂಗೀಕಾರ ಆಗಿರುವುದರಿಂದ ಈಗ ಅಸಿಂಧುಗೊಳಿಸಲಾಗದು. ನಾಮಪತ್ರದ ಸಿಂಧುತ್ವದ ಪ್ರಶ್ನೆಯು ಮುಗಿದ ಅಧ್ಯಾಯ. ಅಫಿಡವಿಟ್‍ನಲ್ಲಿನ ಲೋಪಗಳ ಬಗ್ಗೆ ಅನುಮಾನವಿದ್ದವರು ನ್ಯಾಯಾಲಯಕ್ಕೆ ಹೋಗಬಹುದು ಎಂದು ಸಂಜೀವ್‍ಕುಮಾರ್ ಹೇಳಿದ್ದರು.

ಈ ಮಧ್ಯೆ, ಮೇಲುಕೋಟೆ, ನಾಗಮಂಗಲ, ಕೆ.ಆರ್.ಪೇಟೆ, ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಗಳ ಸಾಮಾನ್ಯ ವೀಕ್ಷಕ ಐಎಎಸ್ ಅಧಿಕಾರಿ ರಂಜಿತ್‍ಕುಮಾರ್ ಅವರನ್ನು 2 ದಿನಗಳ ಹಿಂದೆ ಬದಲಿಸಿ, ತಮಿಳುನಾಡಿನ ಐಎಎಸ್ ಅಧಿಕಾರಿ ಪಿ.ಅಣ್ಣಾಮಲೈ ಅವರನ್ನು ಆಯೋಗ ನೇಮಿಸಿದೆ.

Translate »