ಮೈಸೂರು ಗುತ್ತಿಗೆದಾರನ ಮನೆ ಮೇಲೆ ಐಟಿ ದಾಳಿ: 6.76 ಕೋಟಿ ನಗದು ವಶ
ಮೈಸೂರು

ಮೈಸೂರು ಗುತ್ತಿಗೆದಾರನ ಮನೆ ಮೇಲೆ ಐಟಿ ದಾಳಿ: 6.76 ಕೋಟಿ ನಗದು ವಶ

April 27, 2018

ಮೈಸೂರು: ಇತ್ತೀಚಿನ ದಿನಗಳಲ್ಲಿ ಎಟಿಎಂಗಳಲ್ಲಿ ಹಣದ ಅಭಾವದ ಹಿನ್ನೆಲೆ ಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿ ಗಳು ರಾಜ್ಯಾದ್ಯಂತ ಕಾರ್ಯಾಚರಣೆ ಆರಂಭಿಸಿದ್ದು, ಈ ಮಧ್ಯೆ ಮೈಸೂರಿನ ಗುತ್ತಿಗೆದಾರನ ಮನೆಯ ಮೇಲೂ ದಾಳಿ ನಡೆಸಿ 6.76 ಕೋಟಿ ರೂ. ವಶಪಡಿಸಿ ಕೊಂಡಿದ್ದಾರೆ. ಮೈಸೂರಿನ ಗುತ್ತಿಗೆದಾರ ಮರಿಸ್ವಾಮಿ ಎಂಬುವರು ತನ್ನ ಮನೆಯಲ್ಲಿ ಮಲಗುವ ಮಂಚದ ಕೆಳಗೆ ಭಾರೀ ಮೊತ್ತದ ನಗದನ್ನು ಬಚ್ಚಿಟ್ಟು, ಸಿಕ್ಕಿಬಿದ್ದಿದ್ದು, ಯಾವ ಉದ್ದೇಶಕ್ಕಾಗಿ ಈ ಹಣವನ್ನು ಮನೆಯಲ್ಲೇ ಸಂಗ್ರಹಿಸಿಡಲಾಗಿತ್ತು ಎಂಬುದು ವಿಚಾರಣೆಯ ನಂತರ ತಿಳಿಯಬೇಕಾಗಿದೆ.

ಈ ಸಂಬಂಧ ಆದಾಯ ತೆರಿಗೆ ಇಲಾ ಖೆಯು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಮೈಸೂರಿನ ಗುತ್ತಿಗೆದಾರ ಮರಿಸ್ವಾಮಿ ಎಂದು ಮಾತ್ರ ತಿಳಿಸಲಾಗಿದೆ. ಈತ ಯಾವ ಗುತ್ತಿಗೆದಾರ? ಮೈಸೂರಲ್ಲಿ ಈತನ ಮನೆ ಎಲ್ಲಿದೆ? ಎಂಬುದರ ಬಗ್ಗೆ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ.

ಇತ್ತೀಚೆಗೆ ರಾಜ್ಯದೆಲ್ಲೆಡೆ ಎಟಿಎಂಗಳಲ್ಲಿ ಹಣದ ಅಭಾವ ಉಂಟಾಗಿದ್ದು, ಜನ ಸಾಮಾನ್ಯರು ಎಟಿಎಂಗಳಲ್ಲಿ ಹಣ ದೊರೆ ಯದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಎಟಿಎಂಗಳಿಗೆ ಹಣ ತುಂಬಿದ ಕೆಲವೇ ಗಂಟೆಗಳಲ್ಲಿ ಖಾಲಿಯಾ ಗುತ್ತಿತ್ತು. ಚುನಾವಣೆಯಲ್ಲಿ ಮತದಾರರಿಗೆ ಹಂಚುವುದಕ್ಕಾಗಿ ರಾಜಕಾರಣ ಗಳು ತಮ್ಮ ಆಪ್ತರ ಮೂಲಕ ಎಟಿಎಂಗಳಿಂದ ಹಣ ಡ್ರಾ ಮಾಡಿ ಸಂಗ್ರಹಿಸುತ್ತಿದ್ದಾರೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿತ್ತು.

ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ಸಂಗ್ರಹ ವಾಗಿರುವ ಹಣ ಪತ್ತೆ ಮಾಡಲು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ರಾಜ್ಯದ ಹಲವೆಡೆ ದಾಳಿ ನಡೆಸಿ, ಭಾರೀ ಮೊತ್ತದ ನಗದನ್ನು ವಶ ಪಡಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಮೈಸೂರಿ ನಲ್ಲಿಯೂ ಸಹ ಗುತ್ತಿಗೆದಾರ ಮರಿಸ್ವಾಮಿ ಎಂಬಾತನ ಮನೆ ಮೇಲೆ ದಾಳಿ ನಡೆಸಿದಾಗ 2 ಸಾವಿರ ಮತ್ತು 500 ರೂ. ಮುಖ ಬೆಲೆಯ 6.76 ಕೋಟಿ ರೂ. ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

Translate »