ಮೇ 15ರಂದು ಎರಡೂ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯ ಮುಕ್ತ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಭವಿಷ್ಯ
ಮೈಸೂರು

ಮೇ 15ರಂದು ಎರಡೂ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯ ಮುಕ್ತ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಭವಿಷ್ಯ

April 27, 2018

ಮೈಸೂರು:  ಚುನಾವಣಾ ಫಲಿತಾಂಶ ದಿನವಾದ ಮೇ 15ರಂದು, ಎರಡೂ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯ ಮುಕ್ತವಾಗುತ್ತದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಭವಿಷ್ಯ ನುಡಿದಿದ್ದಾರೆ.

ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲ ಲ್ಲಿರುವ ಸುತ್ತೂರು ಮಠಕ್ಕೆ ಗುರುವಾರ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದು, ಕೆಲ ಕಾಲ ಮಾತುಕತೆ ನಡೆಸಿದ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಈ ಬಾರಿ ಚುನಾವಣೆಯಲ್ಲಿ 113ರಿಂದ 120 ಸ್ಥಾನಗಳಲ್ಲಿ ಗೆದ್ದು, ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಈ ಬಗ್ಗೆ ದೇವೇಗೌಡರು, ಕುಮಾರಸ್ವಾಮಿ, ನಾನು ಸೇರಿದಂತೆ ರಾಜ್ಯದ ಜನರಲ್ಲೂ ಸಂಪೂರ್ಣ ವಿಶ್ವಾಸವಿದೆ. ಜೆಡಿಎಸ್ ಯಾವ ಪಕ್ಷ ಗಳೊಂದಿಗೆ ಹೊರ ಒಪ್ಪಂದವಾಗಲೀ, ಒಳ ಒಪ್ಪಂದವಾಗಲಿ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಈವರೆಗೆ ರಾಜ್ಯದ ಜನ ಕಾಂಗ್ರೆಸ್, ಬಿಜೆಪಿ ಈ ಎರಡೂ ರಾಷ್ಟ್ರೀಯ ಪಕ್ಷಗಳ ಆಡಳಿತ ವನ್ನೂ ನೋಡಿದ್ದಾರೆ. ಹೆಚ್.ಡಿ.ದೇವೇ ಗೌಡರು ಹಾಗೂ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಕ್ಕೆ ನೀಡಿದ ತಮ್ಮದೇ ಆದ ಕೊಡುಗೆಗಳು ಜನರ ಮನಸ್ಸಿನಲ್ಲಿವೆ. ನಾಲ್ಕು ವರ್ಷಗಳ ಕಾಲ ಬರದಿಂದ ರೈತರು ಸಂಕಷ್ಟಕ್ಕೀಡಾಗಿ ದ್ದಾರೆ. ಹಾಸನ ಜಿಲ್ಲೆಯ 7 ತಾಲೂಕು ಗಳಲ್ಲೂ ಬರ ಆವರಿಸಿದೆ. ನೀರಾವರಿ ಅಣೆಕಟ್ಟೆಗಳಿದ್ದರೂ ಒಂದು ಹಿಡಿ ಭತ್ತ ಬೆಳೆಯಲು ಸಾಧ್ಯವಾಗಿಲ್ಲ. ಕುಡಿಯುವ ನೀರಿಗೂ ಭಿಕ್ಷೆ ಬೇಡುವ ದುಸ್ಥಿತಿ ನಿರ್ಮಾಣ ವಾಗಿದೆ. ಅರಸಿಕೆರೆ ಹಾಗೂ ಚನ್ನರಾಯ ಪಟ್ಟಣದಲ್ಲಿ ಸುಮಾರು 25 ಲಕ್ಷ ತೆಂಗಿನ ಮರಗಳು ನಾಶವಾಗಿವೆ. ಇದರಿಂದ ಸುಮಾರು 1,200 ಕೋಟಿ ರೂ. ನಷ್ಟವಾ ಗಿದೆ. ನಾವೇನು ಹೇಳಬೇಕಿಲ್ಲ ಜನರೇ ಕಾಂಗ್ರೆಸ್ ಮುಕ್ತ ಮಾಡಬೇಕೆಂಬ ಭಾವನೆ ಯಲ್ಲಿದ್ದಾರೆ ಎಂದು ಟೀಕಿಸಿದರು.

ಮೋದಿ ಸಹಕಾರ ನಮಗೇಕೆ?: ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಬಂದು ಭಾಷಣ ಮಾಡಿದ ನಂತರದಲ್ಲಿ ರಾಜಕೀಯದಲ್ಲಿ ಬದಲಾವಣೆಯಾಗುತ್ತದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿ ರುವ ಬಗ್ಗೆ ಪ್ರತಿಕ್ರಿಯಿಸಿದ ರೇವಣ್ಣ, 2 ರಾಷ್ಟ್ರೀಯ ಪಕ್ಷಗಳು ಜೆಡಿಎಸ್‍ನ್ನು ಟೀಕಿ ಸುತ್ತವೆ. ಎರಡೂ ಪಕ್ಷದ ನಾಯಕರೂ, ಕುಮಾರಸ್ವಾಮಿ ಅವರ ಬಗ್ಗೆಯೇ ಭಜನೆ ಮಾಡುತ್ತಿವೆ. ಹೀಗೆ 2 ಪಕ್ಷಗಳ ಟೀಕಾ ಪ್ರಹಾರದ ನಡುವೆ ಜೆಡಿಎಸ್‍ಗೆ ಅನುಕೂಲ ವಾಗುತ್ತದೆ. ಮೋದಿ ಬರುವುದರಿಂದ ಈ ರೀತಿಯ ಬದಲಾವಣೆಯಾಗುತ್ತದೆ ಅಷ್ಟೆ. ನಾವೇನು ಮೋದಿ ಅವರ ಸಹಕಾರದಿಂದ ರಾಜ್ಯದಲ್ಲಿ ಸರ್ಕಾರ ಕಟ್ಟಬೇಕಿಲ್ಲ ಎಂದರು.

ಮಂಜೇಗೌಡರ ವಿರುದ್ಧ ಗುಡುಗು: ಹೊಳೆನರಸೀಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇಗೌಡ, ಹಾಲಿನ ವಾಹನ ಗಳಲ್ಲಿ ಮದ್ಯ ಸಾಗಿಸಲಾಗುತ್ತಿದೆ ಎಂದು ಆರೋಪಿಸಿರುವ ಬಗ್ಗೆ ತಿರುಗೇಟು ನೀಡಿದ ರೇವಣ್ಣ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾ ರವೇ ಇದೆ. ಸರ್ಕಾರಕ್ಕೆ ಸಾರಿಗೆ ಇಲಾಖೆ ಯಿಂದ ಮಾಮೂಲಿ ನೀಡುತ್ತಿದ್ದ ವ್ಯಕ್ತಿಯೇ ಅಭ್ಯರ್ಥಿ. ಅಲ್ಲದೆ ಅವರು ದಿ ಗ್ರೇಟ್ ಸಿಎಂ ಅವರ ರೈಟ್ ಹ್ಯಾಂಡ್ ಆಗಿದ್ದಾರೆ. ಇಷ್ಟಿದ್ದ ಮೇಲೆ ಹಾಲಿನ ವಾಹನಗಳಲ್ಲಿ ಮದ್ಯ ಸಾಗಿಸಿದರೆ ದಾಳಿ ಮಾಡಿಸಿ, ಹಿಡಿ ಯಲಿ. ಅವರ
ಆರೋಪದಲ್ಲೇ ರಾಜ್ಯದಲ್ಲಿ ಆಡಳಿತ, ಪೊಲೀಸ್ ಇಲಾಖೆ ಸಾಮಥ್ರ್ಯ ಕುಸಿದಿದೆ ಎಂಬುದು ತಿಳಿಯುತ್ತದೆ ಎಂದು ವ್ಯಂಗ್ಯವಾಡಿದರು. ಒಬ್ಬ ಭ್ರಷ್ಟನನ್ನು ಅಭ್ಯರ್ಥಿ ಮಾಡುವ ದುಸ್ಥಿತಿಗೆ ಕಾಂಗ್ರೆಸ್ ತಲುಪಿದೆ. ಅವರ ವಿರುದ್ಧ ಗಣ ಲೂಟಿ ಆರೋಪವಿದೆ. ಗಣ ಭ್ರಷ್ಟಾಚಾರ ಪ್ರಕರಣವಿರುವ ಬಗ್ಗೆ ಹಾಗೂ ಅವರ ಆಸ್ತಿ ಹೆಚ್ಚಿರುವ ಬಗ್ಗೆ ಕಾನೂನು ಕಾರ್ಯದರ್ಶಿಗಳೇ ತಿಳಿಸಿದ್ದಾರೆ. ಆಸ್ತಿ ಹೆಚ್ಚಾಗಿರುವುದರಿಂದ ಸಮಸ್ಯೆ ಎದುರಾಗಬಾರದು ಎಂಬ ಕಾರಣಕ್ಕೆ ಪತ್ನಿಗೇ ವಿಚ್ಛೇದನ ನೀಡಲು ಮುಂದಾದ ಗಿರಾಕಿ ಆತ. ಅಂತಹ ವ್ಯಕ್ತಿ ಬಗ್ಗೆ ಯಾವ ನೈತಿಕತೆ ಇಟ್ಟುಕೊಂಡು ಮುಖ್ಯಮಂತ್ರಿಗಳು ಮಾತನಾಡುತ್ತಾರೆ. ಅವರ ಅಭ್ಯರ್ಥಿ ಸಾರಿಗೆ ಇಲಾಖೆಯಲ್ಲಿದ್ದಾಗ ತಿಂಗಳಿಗೆ ಎಷ್ಟು ಹಣ ಲೂಟಿಯಾಗಿದೆ. ಇಲಾಖೆಯ ಸಿಬ್ಬಂದಿ ಯಾವ ರೀತಿ ನೊಂದಿದ್ದಾರೆ? ಎಂಬುದರ ಬಗ್ಗೆ ತನಿಖೆಯನ್ನು ಸಿಬಿಐಗೆ ವಹಿಸಲು ಅವರಿಗೆ ಸಾಧ್ಯವೇ? ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.

Translate »