ಕ್ವಿಟ್ ಇಂಡಿಯಾ ನೆನಪಿನಲ್ಲಿ ‘ಜೈಲ್ ಭರೋ’ ಚಳವಳಿ
ಹಾಸನ

ಕ್ವಿಟ್ ಇಂಡಿಯಾ ನೆನಪಿನಲ್ಲಿ ‘ಜೈಲ್ ಭರೋ’ ಚಳವಳಿ

August 10, 2018

ಹಾಸನ: ಕ್ವಿಟ್ ಇಂಡಿಯಾ ಚಳವಳಿಯ ಸ್ಮರಣಾರ್ಥವಾಗಿ ನಗರದಲ್ಲಿ ಗುರುವಾರ ವಿವಿಧ ಬೇಡಿಕೆ ಈಡೇರಿಸು ವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಹೇಮಾವತಿ ಪ್ರತಿಮೆಯ ಮುಂಭಾಗ ಸಮಾವೇಶಗೊಂಡ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ಆರ್ಥಿಕ ನೀತಿಯನ್ನು ವಿರೋಧಿಸಿ ಹಾಗೂ ರೈತರು, ಕೂಲಿ ಕಾರ್ಮಿಕರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕ್ವಿಟ್ ಇಂಡಿಯಾ ಚಳುವಳಿಯ ನೆನಪಿನಲ್ಲಿ ‘ಜೈಲ್ ಭರೋ’ ಚಳುವಳಿ ಹಮ್ಮಿಕೊಳ್ಳಲಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರಲ್ಲಿ ಮಹಿಳೆಯರು ಸೇರಿ ನೂರಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದರು.

ಡಾ.ಎಂ.ಎಸ್.ಸ್ವಾಮಿನಾಥನ್ ಕೃಷಿ ಆಯೋಗದ ಸಲಹೆಯಂತೆ ಎಲ್ಲಾ ಕೃಷಿ ಉತ್ಪನ್ನ ಗಳಿಗೆ ಒಟ್ಟು ಉತ್ಪಾದನಾ ವೆಚ್ಚಕ್ಕೆ ಶೇ. 50ರಷ್ಟು ಲಾಭಾಂಶ ಸೇರಿದಂತೆ ನಿಗದಿಸುವ ಬೆಂಬಲ ಬೆಲೆಯನ್ನು ಕಾಯ್ದೆಯನ್ನಾಗಿಸಬೇಕು. ತಕ್ಷಣವೇ ರೈತರು ಹಾಗೂ ಕೂಲಿ ಕಾರ್ಮಿಕರ ಸಾಲ ಮನ್ನಾ ಮಾಡಬೇಕು. ಕೇರಳದ ಮಾದರಿಯಲ್ಲಿ ಋಣ ಮುಕ್ತ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಎಲ್ಲಾ ಬಡವರಿಗೆ ಹಿತ್ತಲು ಸಹಿತ ಉಚಿತ ಮನೆಯನ್ನು ಕಟ್ಟಿಕೊಡಬೇಕು. ವ್ಯವಸಾಯದಲ್ಲಿ ತೊಡಗಲು ಇಚ್ಛಿಸುವ ಎಲ್ಲಾ ಬಡವರಿಗೆ ತಲಾ 5 ಎಕರೆ ಭೂಮಿಯನ್ನು ಒದಗಿಸಬೇಕು. ಉದ್ಯೋಗ ಖಾತ್ರಿ ಕೆಲಸವನ್ನು 100 ದಿನಗಳ ಕಾಲ ಕಡ್ಡಾಯವಾಗಿ ಒದಗಿಸಬೇಕು. ಬೆಳೆ ವಿಮೆ ಯೋಜನೆಯನ್ನು ರೈತ ಸ್ನೇಹಿಯಾಗಿ ಬದಲಾಯಿಸಬೇಕು. ರೈತರು- ಕೂಲಿಕಾರರಿಗೆ ತಲಾ 5,000 ರೂ ಮಾಸಿಕ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷ ನವೀನ್‍ಕುಮಾರ್, ಮುಖಂಡರಾದ ಧರ್ಮೇಶ್, ಡಿ.ಎಲ್. ರಾಘವೇಂದ್ರ, ವಸಂತಕುಮಾರ್, ಪೃಥ್ವಿ, ಅರವಿಂದ ಹಾಜರಿದ್ದರು.

Translate »