ವಿವಿಧ ಬೇಡಿಕೆಗಾಗಿ ಜಿಲ್ಲೆಯಲ್ಲಿ ಪ್ರತ್ಯೇಕ ಪ್ರತಿಭಟನೆ
ಹಾಸನ

ವಿವಿಧ ಬೇಡಿಕೆಗಾಗಿ ಜಿಲ್ಲೆಯಲ್ಲಿ ಪ್ರತ್ಯೇಕ ಪ್ರತಿಭಟನೆ

August 10, 2018

ಹಾಸನ:  ದಲಿತರಿಗೆ ಸಾಮಾಜಿಕ ನ್ಯಾಯ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಗರದಲ್ಲಿ ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಮಾವೇಶ ಗೊಂಡ ಪ್ರತಿಭಟನಾಕಾರರು ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು. ಬಳಿಕ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಬಡ್ತಿ ಮೀಸಲಾತಿಯನ್ನುರದ್ದು ಪಡಿಸುವಂತೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಇದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಅಭದ್ರತೆ ಹಾಗೂ ಆತಂಕ ಉಂಟಾಗಿದೆ. ಈ ಸಂಬಂಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ರಾಜ್ಯ ಸರ್ಕಾರ ನೌಕರರ ಮೀಸಲಾತಿ ಆಧಾರದ ಮೇಲೆ ಬಡ್ತಿ ನೀಡಿ ತತ್ಪರಿಣಾಮದ ಜೇಷ್ಠತೆಯನ್ನು ವಿಸ್ತರಿಸಿ ಕಾಯ್ದೆಯನ್ನು ವಿಧಾನಸಭೆಯಲ್ಲಿ ಅನುಮೋದಿಸಲಾಗಿತ್ತು. ಇದಕ್ಕೆ ರಾಷ್ಟ್ರಪತಿ ಅವರ ಅಂಕಿತವಾಗಿ ಜಾರಿ ಯಾಗಿದೆ. ಆದರೆ, ಈ ಕಾಯ್ದೆಯನ್ನು ಅನುಷ್ಠಾನಗೊಳಿ ಸಲು ಸಿಎಂ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಮೀನಾ ಮೇಷ ಎಣಿಸುತ್ತಿದೆ ಎಂದು ದೂರಿದರು.

ಎಸ್‍ಸಿ, ಎಸ್‍ಟಿ ದೌರ್ಜನ್ಯ ನಿಯಂತ್ರಣ ತಡೆ ಕಾಯ್ದೆ-1989 ಅನ್ನು ದುರ್ಬಲಗೊಳಿಸುವಂತಹ ತೀರ್ಪನ್ನು ಸುಪ್ರೀಂ ಕೋಟ್ 2018, ಮಾ. 20ರಂದು ನೀಡಿತ್ತು. ಈ ತೀರ್ಪಿನಿಂದಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದಲ್ಲಿ ಅಭದ್ರತೆ ಮತ್ತು ಆತಂಕದ ವಾತಾವರಣ ಸೃಷ್ಟಿಯಾಗಿದೆ ಎಂದು ಆರೋಪಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಅನುಕೂಲವಾಗುವಂತೆ ಮುಂಬಡ್ತಿ ಕಾಯ್ದೆಯನ್ನು ಜಾರಿಗೊಳಿಸಬೇಕು. ಕೇಂದ್ರ ಸರ್ಕಾರದ ಅಧೀನ ದಲ್ಲಿರುವ ಇಲಾಖೆಗಳಲ್ಲಿ ಖಾಲಿ ಇರುವ ಬ್ಯಾಕ್‍ಲಾಗ್ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬಿ.ಕೆ. ಪವಿತ್ರ ಪ್ರಕರಣದ ತೀರ್ಪಿನ ಹಿನ್ನೆಲೆಯಲ್ಲಿ ಹಿಂಬಡ್ತಿ ಹೊಂದಿರುವ ಎಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರ ಹಿಂಬಡ್ತಿ ಆದೇಶಗಳನ್ನು ರದ್ದು ಪಡಿಸಿ ಹಿಂಬಡ್ತಿ ಹೊಂದುವ ಪೂರ್ವದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹುದ್ದೆ ಮತ್ತು ಸ್ಥಳದಲ್ಲಿಯೇ ನಿಯುಕ್ತಿಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೃಷ್ಣದಾಸ್, ರಾಜ್ಯ ಸಂಘ ಟನಾ ಸಂಚಾಲಕ ಕೆ.ಈರಪ್ಪ, ಕದಸಂಸ (ಭೀಮ ವಾದ) ರಾಜ್ಯ ಸಂಚಾಲಕ ನಾಗರಾಜ್ ಹೆತ್ತೂರು, ಮುಖಂಡರಾದ ಹೆಚ್.ಕೆ.ಸಂದೇಶ್, ಶಂಕರ್, ಕ್ರಾಂತಿಪ್ರಸಾದ್ ತ್ಯಾಗಿ, ಕೆ.ಪ್ರಕಾಶ್, ನಿಂಗರಾಜು ಅರೇ ಹಳ್ಳಿ, ರಂಗಸ್ವಾಮಿ, ಕೃಷ್ಣ, ರಾಜು ಪಾಲ್ಗೊಂಡಿದ್ದರು.

Translate »