ಜಯಚಾಮರಾಜ ಒಡೆಯರ್ ವೃತ್ತದ ಕಟ್ಟೆಯ ಮಾರ್ಬಲ್‍ಗೆ ಧಕ್ಕೆ
ಮೈಸೂರು

ಜಯಚಾಮರಾಜ ಒಡೆಯರ್ ವೃತ್ತದ ಕಟ್ಟೆಯ ಮಾರ್ಬಲ್‍ಗೆ ಧಕ್ಕೆ

June 27, 2018

ಮೈಸೂರು: ಮೈಸೂರಿನ ಜಯ ಚಾಮರಾಜ ಒಡೆಯರ್ ವೃತ್ತದ ಸುತ್ತಲೂ ರಸ್ತೆಗಿಂತ ಅರ್ಧ ಅಡಿಗೂ ಕಡಿಮೆ ಎತ್ತರಕ್ಕೆ ಕಟ್ಟೆ ನಿರ್ಮಿಸಿದ್ದು, ವಾಹನಗಳ ಟೈರ್ ಹರಿದು, ಒಂದು ಭಾಗದಲ್ಲಿ ಜಖಂಗೊಂಡಿದೆ.

ಪ್ರತಿಮೆಯ ಎಡಭಾಗಕ್ಕಿರುವ ಕಟ್ಟೆಯ ಮೇಲೆ ವಾಹನಗಳು ಚಾಲಿಸಿರುವುದರಿಂದ ಅನೇಕ ಮಾರ್ಬಲ್‍ಗಳು ಒಡೆದು, ಪುಡಿಯಾಗಿವೆ. ಕೂಡಲೇ ಇದನ್ನು ದುರಸ್ತಿ ಮಾಡಬೇಕಿದೆ. ಇಲ್ಲವಾದರೆ ಗನ್‍ಹೌಸ್ ಕಡೆಯಿಂದ ಹಾಗೂ ಲೋಕರಂಜನ್ ರಸ್ತೆ ಹಾಗೂ ನಜರ್‍ಬಾದ್ ಕಡೆಯಿಂದ ಬರುವ ವಾಹನಗಳು ವೃತ್ತವನ್ನು ಸುತ್ತುವಾಗ ಜಖಂ ಅಗಿರುವ ಭಾಗಕ್ಕೆ ಟೈರ್ ತಗುಲಿ, ಮತ್ತಷ್ಟು ಮಾರ್ಬಲ್‍ಗಳು ಹಾಳಾಗಲಿವೆ. ದುರಸ್ತಿ ಜೊತೆಗೆ ಈ ವೃತ್ತದಲ್ಲಿ ಅಡ್ಡಾದಿಡ್ಡಿಯಾಗಿ, ಅತೀ ವೇಗವಾಗಿ ವಾಹನ ಚಾಲನೆ ಮಾಡದಂತೆ ಪೊಲೀಸರು ಕ್ರಮ ಕೈಗೊಳ್ಳಬೇಕಿದೆ.

ಹಿಂದಿನ ಹಾರ್ಡಿಂಜ್ ಸರ್ಕಲ್‍ನಲ್ಲಿ ಜಯ ಚಾಮರಾಜ ಒಡೆಯರ್ ಅವರ ಪ್ರತಿಮೆ ಸ್ಥಾಪಿಸಿದ ಬಳಿಕ ವೃತ್ತದ ವಾತಾವರಣವೇ ಬದಲಾಗಿದೆ. ಪಾರಂಪರಿಕ ಮಾದರಿ ಗೋಪುರದಡಿ ಪ್ರತಿಷ್ಠಾಪಿಸಿರುವ ಒಡೆಯರ್ ಅವರ ಆಕರ್ಷಕ ಪ್ರತಿಮೆ ನೋಡಲು ಸೊಗಸಾಗಿದೆ. ಇದರೊಂದಿಗೆ ಒಂದು ಭಾಗದಲ್ಲಿ ನಾಗರಿಕರ ವಿಶ್ರಾಂತಿಗಾಗಿ ವಿಶೇಷವಾದ ಸ್ಥಳ ರೂಪಿಸಲಾಗಿದೆ. ಕೆಲಹೊತ್ತು ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಕಾಲ ಕಳೆದರೆ ಮನಸ್ಸಿಗೆ ನೆಮ್ಮದಿ. ಆದರೆ ಕೆಲವರ ಅಜಾಗರೂಕತೆಯಿಂದ ಇಂತಹ ವಿಘ್ನಗಳಾಗುತ್ತಿರುತ್ತವೆ. ವೃತ್ತಗಳ ಸಂರಕ್ಷಣೆಗೆ ನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ನಿಗಾ ವಹಿಸಬೇಕಿದೆ.

ಜಯಚಾಮರಾಜ ಒಡೆಯರ್ ವೃತ್ತದ ಕಟ್ಟೆ ಜಖಂ ಆಗಿರುವುದನ್ನು ಗಮನಿಸಿದ ಬನ್ನೂರು ಸೋಮೇಶ್ವರ ಸಿನಿಮಾ ಮಂದಿರದ ಮಾಲೀಕ ಅನಿಲ್ ಕುಮಾರ್ ಅವರು `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿ, ಅನಾಗರಿಕರ ಕೃತ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಲ್ಲದೆ, ಕೃಷ್ಣರಾಜ, ಚಾಮರಾಜ ಹಾಗೂ ಜಯಚಾಮರಾಜ ಒಡೆಯರ್ ವೃತ್ತಗಳಲ್ಲಿ ಪ್ರತಿಮೆಗಳ ಸುತ್ತ ಗ್ಲಾಸ್ ಅಳವಡಿಸಿ, ಒಳಭಾಗದಲ್ಲಿ ವಿಶೇಷವಾದ ಲೈಟ್ ಅಳವಡಿಸಿದರೆ, ರಾತ್ರಿ ವೇಳೆ ನೋಡಲು ಮತ್ತಷ್ಟು ಸುಂದರವಾಗಿ ಕಾಣುತ್ತದೆ. ಪ್ರತಿಮೆಗಳ ಸಂರಕ್ಷಣೆಗೂ ಸಹಕಾರಿಯಾಗುತ್ತದೆ. ವಾಹನಗಳ ಹೊಗೆ, ಧೂಳು, ಪಕ್ಷಿಗಳ ಮಲಮೂತ್ರಗಳಿಂದ ಪ್ರತಿಮೆಗಳು ಹಾಳಾಗುವುದನ್ನು ತಪ್ಪಿಸಿ, ನೂರಾರು ವರ್ಷಗಳ ಕಾಲ ಮೂಲರೂಪವನ್ನು ಕಾಯ್ದುಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.

Translate »