ಮೈಸೂರಲ್ಲಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣದಲ್ಲಿ ಕಡಿತ
ಮೈಸೂರು

ಮೈಸೂರಲ್ಲಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣದಲ್ಲಿ ಕಡಿತ

June 27, 2018

ಮೈಸೂರು: ಮೈಸೂರಿನಲ್ಲಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ತಿಳಿಸಿದ್ದಾರೆ.

ದ್ವಿಚಕ್ರ ವಾಹನಗಳ ಕಳ್ಳತನ ಹೆಚ್ಚಾಗಿದ್ದು, ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆಂದು ಕೆಲ ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಸ್ಪಷ್ಟೀಕರಣ ನೀಡಿರುವ ಇವರು, ಹಿಂದಿನ ವರ್ಷಗಳಿಗೆ ಹೋಲಿಸಿದರೆ 2017-18ನೇ ದ್ವಿಚಕ್ರ ವಾಹನಗಳ ಕಳ್ಳತನ ಕಡಿಮೆಯಾಗಿದೆ. 2013ರಲ್ಲಿ 378, 2014ರಲ್ಲಿ 334, 2015ರಲ್ಲಿ 340, 2016ರಲ್ಲಿ 414, 2017ರಲ್ಲಿ 305 ಪ್ರಕರಣಗಳು ದಾಖಲಾಗಿದ್ದರೆ, ಪ್ರಸಕ್ತ ವರ್ಷದ ಜನವರಿಯಲ್ಲಿ 17, ಫೆಬ್ರವರಿಯಲ್ಲಿ 14, ಮಾರ್ಚ್‍ನಲ್ಲಿ 17, ಏಪ್ರಿಲ್‍ನಲ್ಲಿ 18, ಮೇನಲ್ಲಿ 29 ಹಾಗೂ ಜೂನ್ ತಿಂಗಳ ಇಂದಿನವರೆಗೆ 23 ಸೇರಿದಂತೆ ಒಟ್ಟು 118 ದ್ವಿಚಕ್ರ ವಾಹನಗಳ ಕಳ್ಳತನವಾಗಿದೆ ಎಂದು ವಿವರಿಸಿದ್ದಾರೆ.
ಹೊಸ ಕಳ್ಳರ ಕೈವಾಡದ ಶಂಕೆ: ಪ್ರಸಕ್ತ ವರ್ಷದ ಮೇ ಹಾಗೂ ಜೂನ್ ತಿಂಗಳಲ್ಲಿ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಇದರ ಹಿಂದೆ ಯಾವುದೋ ನೂತನ ಕಳ್ಳರ ಗುಂಪಿನ ಕೈವಾಡವಿರುವ ಶಂಕೆಯಿದ್ದು, ಪತ್ತೆ ಹಚ್ಚಲು ವಿಶೇಷ ಕ್ರಮಗಳೊಂದಿಗೆ ಸಕ್ರಿಯರಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ನಿಯಂತ್ರಣಕ್ಕೆ ವಿಶೇಷ ಕ್ರಮ: ದ್ವಿಚಕ್ರ ವಾಹನ ಕಳ್ಳತನವನ್ನು ನಿಯಂತ್ರಿಸುವ ನಿಟ್ಟಿನಲ್ಲಿ `ಆಪರೇಷನ್ ಚೀತಾ’ ಕಾರ್ಯಾಚರಣೆ ಆರಂಭಿಸಲಾಗಿದ್ದು, ಸಂಚಾರ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರು ಒಟ್ಟಾಗಿ ವಾಹನಗಳ ತಪಾಸಣೆ ನಡೆಸಲಿದ್ದಾರೆ. ನಗರದ ರಾತ್ರಿ ಗಸ್ತನ್ನು ಸಂಪೂರ್ಣವಾಗಿ ಪುನರ್ ರಚನೆ ಮಾಡಿ `ಆಪರೇಷನ್ ಈಗಲ್’ ಸಕ್ರಿಯಗೊಳಿಸಲಾಗಿದೆ.

ದ್ವಿಚಕ್ರ ವಾಹನಗಳು ಹೆಚ್ಚು ಕಳ್ಳತನವಾಗುವ ಸ್ಥಳಗಳಲ್ಲಿ ಸಾದಾ ಉಡುಪಿನಲ್ಲಿರುವ ಪೊಲೀಸರು ನಿರಂತರ `ಆಪರೇಷನ್ ಡೀಲ್ ಕಾಯ್’ ನಡೆಸಲಿದ್ದಾರೆ. ಪಾರ್ಕಿಂಗ್ ಸ್ಥಳಗಳಲ್ಲಿ ಲಾಕ್ ಮಾಡದೆ ನಿಲ್ಲಿಸಿರುವ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಮಾಲೀಕರಿಗೆ ತಿಳುವಳಿಕೆ ನೀಡಿ, ದಾಖಲೆಗಳನ್ನು ಪರಿಶೀಲಿಸಿ, ಹಿಂದಿರುಗಿಸುವ ಕಾರ್ಯವನ್ನು ಮುಂದುವರಿಸಲಾಗಿದೆ.

ಸರ್ಕಾರ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಪ್ರಮುಖ ಪಾರ್ಕಿಂಗ್ ಸ್ಥಳಗಳಲ್ಲಿ ಸಿಸಿ ಕ್ಯಾಮಾರಗಳನ್ನು ಅಳವಡಿಸಲಾಗುವುದು. ಕಳುವಾದ ವಾಹನಗಳ ಪತ್ತೆಗೆ ಅಪರಾಧ ವಿಭಾಗದ ನುರಿತ ಅಧಿಕಾರಿ ಹಾಗೂ ಸಿಬ್ಬಂದಿಯನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ತಿಳಿಸಿರುವ ನಗರ ಪೊಲೀಸ್ ಆಯುಕ್ತರು, ಸಾರ್ವಜನಿಕರು ತಮ್ಮ ವಾಹನಗಳನ್ನು ಸುರಕ್ಷಿತ ಸ್ಥಳಗಳಲ್ಲಿ, ಸೂಕ್ತ ಲಾಕಿಂಗ್ ವ್ಯವಸ್ಥೆಯೊಂದಿಗೆ ನಿಲುಗಡೆ ಮಾಡುವ ಮೂಲಕ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

Translate »