ಜುಲೈ ಅಂತ್ಯಕ್ಕೆ ಜಯದೇವ ಆಸ್ಪತ್ರೆ ಹೊಸ ಕಟ್ಟಡದಲ್ಲಿ ಕಾರ್ಯಾರಂಭ
ಮೈಸೂರು

ಜುಲೈ ಅಂತ್ಯಕ್ಕೆ ಜಯದೇವ ಆಸ್ಪತ್ರೆ ಹೊಸ ಕಟ್ಟಡದಲ್ಲಿ ಕಾರ್ಯಾರಂಭ

June 2, 2018

ಮೈಸೂರು: ಮೈಸೂರಿನ ಕುಂಬಾರಕೊಪ್ಪಲು ಟೋಲ್ ಗೇಟ್ ಬಳಿ ಮೈಸೂರು-ಕೆಆರ್‍ಎಸ್ ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯಲ್ಲಿ ಹೃದ್ರೋಗ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಉಪಕರಣಗಳ ಜೋಡಣೆ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದ್ದು, ಜುಲೈ ತಿಂಗಳಲ್ಲಿ ರೋಗಿಗಳ ಸೇವೆಗೆ ಆಸ್ಪತ್ರೆ ಸಜ್ಜಾಗಲಿದೆ ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ.

ಆಸ್ಪತ್ರೆ ನೂತನ ಕಟ್ಟಡದಲ್ಲಿ ಉಪಕರಣಗಳ ಅಳವಡಿಕೆಯ ಕಾರ್ಯವನ್ನು ಶುಕ್ರವಾರ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರದ 150 ಕೋಟಿ ರೂ. ಅನುದಾನದಲ್ಲಿ 15 ಎಕರೆ ಪ್ರದೇಶದಲ್ಲಿ 34,874 ಚದರಡಿ ವಿಸ್ತೀರ್ಣದಲ್ಲಿ ಮೂರು ಅಂತಸ್ತಿನಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಿಸಲಾಗಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಉದ್ಘಾಟನೆಗೊಂಡ 350 ಹಾಸಿಗೆ ಸಾಮಾಥ್ರ್ಯದ ಈ ಕಟ್ಟಡದಲ್ಲಿ ಚಿಕಿತ್ಸೆ, ಶಸ್ತ್ರ ಚಿಕಿತ್ಸೆಗೆ ಅಗತ್ಯವಾಗಿರುವ ಉಪಕರಣಗಳ ಖರೀದಿಗಾಗಿ ಜಯದೇವ ಸಂಸ್ಥೆಯ ಆಂತರಿಕ ಅನುದಾನದಿಂದ 60 ಕೋಟಿ ರೂ. ವಿನಿಯೋಗಿಸಲಾಗಿದೆ. ಈಗಾಗಲೇ ಅಗತ್ಯ ಉಪಕರಣಗಳ ಅಳವಡಿಕೆ ಕಾರ್ಯ ಭರದಿಂದ ಸಾಗಿದೆ. ಇನ್ನಷ್ಟು ಅತ್ಯಾಧುನಿಕ ಉಪಕರಣಗಳನ್ನು ತಂದಿಡಲಾಗಿದೆ. ಈ ಕಟ್ಟಡದಲ್ಲಿ 4 ಶಸ್ತ್ರ ಚಿಕಿತ್ಸಾ ಕೊಠಡಿ, 4 ಕಾರ್ಡಿಯಾಕ್ ಕ್ಯಾತ್‍ಲ್ಯಾಬ್, 60 ಹಾಸಿಗೆಗಳ 3 ಇಂಟೆನ್ಸಿವ್ ಕರೋನರಿ ಕೇರ್ ಯೂನಿಟ್, ಕಾರ್ಡಿಯಾಕ್ ಸಿಟಿ ಎಂಆರ್‍ಐ ಸೌಲಭ್ಯ, ಸಾಮಾನ್ಯ ಕೊಠಡಿಗಳು, ವಿಶೇಷ ಕೊಠಡಿ, ಡಿಲಕ್ಸ್ ಕೊಠಡಿಗಳ ಸೌಲಭ್ಯ ದೊರೆಯಲಿದೆ. ಹೊರ ರೋಗಿ, ಒಳ ರೋಗಿ ವಿಭಾಗ, ಸಾಮಾನ್ಯ ವಾರ್ಡ್, ವಿಶೇಷ ವಾರ್ಡ್, ಡೀಲಕ್ಸ್ ವಾರ್ಡ್, ಎಕೋ ವಿಭಾಗ, ಟಿಎಂಟಿ ವಿಭಾಗಗಳಿವೆ ಎಂದು ಹೇಳಿದರು.

ನೆಲ ಅಂತಸ್ತಿನಲ್ಲಿ ನಿರೀಕ್ಷಣಾ ಸ್ಥಳ ಹಾಗೂ ವಿಶ್ರಾಂತಿ ಸ್ಥಳ, ಔಷಧಾಲಯ, ಬ್ಯಾಂಕ್, ಸಾಮಾನ್ಯ ಹೊರ ರೋಗಿಗಳ ವಿಭಾಗ, ವಿಶೇಷ ಹೊರ ರೋಗಿಗಳ ವಿಭಾಗ, ಪ್ರಯೋಗಾಲಯ, ಸಿಎಸ್‍ಎಸಿಡಿ, ಸಿಟಿ, ಎಂಆರ್‍ಐ, ಹೃದ್ರೋಗ ಚಿಕಿತ್ಸಾ ವಿಭಾಗವಿದೆ ಎಂದರು.
ಎಲ್ಲಾ ವಿಭಾಗಗಳಿಗೂ ಅಗತ್ಯ ಉಪಕರಣ ಅಳವಡಿಕೆ, ಆಕ್ಸಿಜನ್ ಸರಬರಾಜು, ಬೆಳಕು ಸೇರಿದಂತೆ ಎಲ್ಲಾ ಅಗತ್ಯ ಕಾರ್ಯವನ್ನು ಜುಲೈ ಮೊದಲ ವಾರದೊಳಗೆ ಮುಗಿಸಬೇಕು. ಜುಲೈ ಕೊನೆ ವಾರದಿಂದ ಆಸ್ಪತ್ರೆ ಕಾರ್ಯಾರಂಭಕ್ಕೆ ಉಳಿದ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸುವಂತೆ ಇಂಜಿನಿಯರ್‍ಗಳು ಹಾಗೂ ಉಪಕರಣಗಳ ಅಳವಡಿಕೆಯ ಹೊಣೆಗಾರಿಕೆ ಹೊತ್ತಿರುವ ಸಂಸ್ಥೆಯ ಪ್ರತಿನಿಧಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಡಾ.ಪೂರ್ಣೇಶ್, ಡಾ. ಪಾಂಡುರಂಗ, ಡಾ. ಮಂಜುನಾಥ್, ಇಂಜಿನಿಯರ್ ಮುನಿನಾರಾಯಣಸ್ವಾಮಿ, ಸಿಂಫ್ಲೆಕ್ಸ್ ಕಂಪನಿಯ ಎ.ಕೆ. ಡೇ, ನರ್ಸಿಂಗ್ ಅಧೀಕ್ಷಕ ಹರೀಶ್, ಪ್ರಥಮ ದರ್ಜೆ ಗುತ್ತಿಗೆದಾರ ನಾಟನಹಳ್ಳಿ ಎನ್.ಟಿ. ಜಗದೀಶ್, ಸಯ್ಯದ್ ಹಾಗೂ ಜಯದೇವ ಇಂಜಿನಿಯರ್‍ಗಳು ಉಪಸ್ಥಿತರಿದ್ದರು.
ಕ್ಯಾಪ್ಶನ್

Translate »