ಪಂಕ್ಚರ್ ಗಾಡಿಯಲ್ಲಿ ಜೆಡಿಎಸ್ ಪ್ರಯಾಣ
ಚಾಮರಾಜನಗರ

ಪಂಕ್ಚರ್ ಗಾಡಿಯಲ್ಲಿ ಜೆಡಿಎಸ್ ಪ್ರಯಾಣ

June 5, 2018

ಚಾಮರಾಜನಗರ: ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಪಂಕ್ಚರ್ ಆಗಿರುವ ಗಾಡಿಯಾಗಿದೆ. ಈ ಪಂಕ್ಚರ್ ಗಾಡಿಯಲ್ಲಿ ಜೆಡಿಎಸ್ ಪ್ರಯಾಣ ಮಾಡುತ್ತಿದೆ ಎಂದು ಮಾಜಿ ಸಂಸದೆ ತೇಜಸ್ವಿನಿಗೌಡ ವ್ಯಂಗ್ಯ ವಾಡಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನ ದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅವಕಾಶವಾದಿಗಳ ಪಿತಾಮಹ ಎಂದು ಟೀಕಿಸಿದರು.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುವುದಾಗಿ ಚುನಾವಣಾ ಪೂರ್ವದಲ್ಲಿ ಖುಷಿಯಿಂದ ಹೇಳುತ್ತಿದ್ದರು. ಜತೆಗೆ, ವಯೋವೃದ್ಧರಿಗೆ ಮಾಸಿಕ 6,500 ವೃದ್ಧಾಪ್ಯ ವೇತನ ನೀಡುವ ಘೋಷಣೆ ಮಾಡಿದರು. ಆದರೆ, ಪ್ರಸ್ತುತ ಅವರು ವಚನ ಭ್ರಷ್ಟರಾಗಿದ್ದಾರೆ ಎಂದು ಆರೋಪಿಸಿದರು. ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ 78 ಸ್ಥಾನ ಗೆದ್ದಿದೆ. ಅವರ ನೇತೃತ್ವ ಇಲ್ಲದಿದ್ದರೆ 28 ಸ್ಥಾನವು ಬರುತ್ತಿರಲಿಲ್ಲ. ಈಗ ಅವರು 70ರ ಅಂಕಿದಾಟಿ ಜೆಡಿಎಸ್ ಬಾಗಿಲು ಕಾಯುತ್ತಿರುವುದು ಕಾಂಗ್ರೆಸ್‍ನ ದುಸ್ಥಿತಿಗೆ ಕೈಗನ್ನಡಿಯಾಗಿದೆ ಎಂದ ಅವರು, ಕುಮಾರಸ್ವಾಮಿ ಅವರಿಗೆ ತಾಕತ್ತಿದ್ದರೆ ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಬರಲಿ ಎಂದು ಸವಾಲು ಹಾಕಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ನಗರ ಘಟಕದ ಅಧ್ಯಕ್ಷ ಸುಂದರ್‍ರಾಜು ಹಾಜರಿದ್ದರು.

Translate »