ಮತ್ತೆ ಬಿಜೆಪಿ ಸಖ್ಯ ಬಯಸಿದ ಜೆಡಿಎಸ್!
ಮೈಸೂರು

ಮತ್ತೆ ಬಿಜೆಪಿ ಸಖ್ಯ ಬಯಸಿದ ಜೆಡಿಎಸ್!

July 27, 2019

ಬೆಂಗಳೂರು,ಜು.26-`ಕೆಟ್ಟ ಮೇಲೆ ಬುದ್ದಿ ಬಂತು ಅಟ್ಟ ಮೇಲೆ ಒಲೆ ಉರಿಯಿತು’ ಎಂಬ ಗಾದೆಯಂತೆ ಲೋಕ ಸಭಾ ಚುನಾವಣೆಯಲ್ಲಿ ಮಣ್ಣುಮುಕ್ಕಿ, ಕಾಂಗ್ರೆಸ್ ಶಾಸಕರ ಬಂಡಾಯದಿಂದ ಅಧಿಕಾರವನ್ನು ಕಳೆದುಕೊಂಡ ನಂತರ ಜೆಡಿಎಸ್‍ಗೆ ಜ್ಞಾನೋದಯವಾದಂತಿದೆ. ಇಂದು ಸಂಜೆ ಯಡಿ ಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲಾ ಶಾಸಕರು ಸಾರಾಸಗಟಾಗಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬ ಅಭಿಪ್ರಾಯವನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ತಿಳಿಸಿದರು ಎನ್ನ ಲಾಗಿದೆ. ಸಾರ್ವತ್ರಿಕ ಚುನಾವಣೆಯ ನಂತರ ಬಿಜೆಪಿ ಜೊತೆ ಸೇರಿಯೇ ಸರ್ಕಾರ ರಚಿಸಬೇಕಾಗಿತ್ತು. ಆದರೆ ನಾವು ಕಾಂಗ್ರೆಸ್ ಜೊತೆಗೂಡಿ ಸರ್ಕಾರ ರಚಿಸಿ ತಪ್ಪೆ ಸಗಿದ್ದೇವೆ. ಇನ್ನು ಮುಂದೆ ಬಿಜೆಪಿ ಜೊತೆ ಹೊಂದಾ ಣಿಕೆ ಮಾಡಿಕೊಳ್ಳುವುದು ಉತ್ತಮ. ರಾಜ್ಯದ ಮತ ದಾರರೂ ಕೂಡ ನಾವು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದೇ ಚುನಾವಣೆ ಯಲ್ಲಿ ನಮಗೆ ಜನಾದೇಶ ನೀಡಿದ್ದಾರೆ ಎಂದು ಶಾಸಕರು ವಿಶ್ಲೇಷಿಸಿದರು ಎನ್ನಲಾಗಿದೆ.  ಶಾಸಕರ ಅಭಿಪ್ರಾಯಗಳನ್ನು ಸಮಾಧಾನ ಚಿತ್ತದಿಂದ ಆಲಿಸಿದ ಹೆಚ್.ಡಿ.ಕುಮಾರ ಸ್ವಾಮಿ, ಈ ಸಂಬಂಧ 1 ವಾರದಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಶಾಸಕರಿಗೆ ತಿಳಿಸಿದರು ಎಂದು ಮೂಲಗಳು ಹೇಳಿವೆ. ಈ ಸಂಬಂಧ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಜಿ.ಟಿ.ದೇವೇಗೌಡ, ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲಾ ಶಾಸಕರೂ ಕುಮಾರಸ್ವಾಮಿಯವರಿಗೆ ತಿಳಿಸಿರುವುದು ನಿಜ.

ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿಯ `ಬಿ’ ಟೀಂ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡಿತ್ತು. ಆ ಹಿನ್ನೆಲೆಯಲ್ಲೇ ಜನರ ತೀರ್ಪು ಬಂದಿದೆ. ನಾವು ಬಿಜೆಪಿ ಜೊತೆ ಕೈ ಜೋಡಿಸಬೇಕು ಎಂಬುದೇ ಜನತೆಯ ತೀರ್ಪಾಗಿದ್ದು, ನಾವು ಕಾಂಗ್ರೆಸ್ ಜೊತೆ ಸೇರಿ ತಪ್ಪು ಮಾಡಿದ್ದೇವೆ. ಅದರ ಪರಿಣಾಮವಾಗಿ ಲೋಕಸಭಾ ಚುನಾವಣೆಯಲ್ಲಿ ಸೋಲನನುಭವಿಸಿದ್ದೇವೆ. ಆದ್ದರಿಂದ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಎಲ್ಲಾ ಶಾಸಕರು ತಿಳಿಸಿದ್ದಾರೆ. ಒಂದು ವಾರದಲ್ಲಿ ತಮ್ಮ ನಿರ್ಧಾರ ತಿಳಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ ಎಂದು ಜಿ.ಟಿ.ದೇವೇಗೌಡರು ಹೇಳಿದರು.

Translate »