ಹಾಸನ: ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲಾ ಇಲಾಖೆಗಳೂ ಕೈಜೋಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಪೂರ್ಣಿಮಾ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲಾ ಮಕ್ಕಳಿಗೂ ಸಮಾನ ಅವಕಾಶ ದೊರೆಯಬೇಕು. ಅದಕ್ಕೆ ಸಮಾಜವೂ ಸಹಕಾರ ನೀಡಬೇಕು ಎಂದರು.
ಬಾಲ ಕಾರ್ಮಿಕ ಪದ್ಧತಿ ಒಂದು ಅನಿಷ್ಠ ವ್ಯವಸ್ಥೆ. ಅದನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕು. ಈ ಬಗ್ಗೆ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳಾಗಬೇಕು ಎಂದ ಅವರು, ಬಾಲ ಕಾರ್ಮಿಕರ ಪತ್ತೆಗೆ ಹೆಚ್ಚಿನ ತಪಾಸಣೆಗಳು ನಡೆಸಬೇಕು. ಪ್ರತಿ ಗ್ರಾಮ ಪಂಚಾಯಿತಿ ಹಂತದಲ್ಲೂ ಬಾಲ ಕಾರ್ಮಿಕರು ಇಲ್ಲದಿರುವ ಬಗ್ಗೆ ಖಾತರಿಪಡಿಸಿಕೊಳ್ಳಿ ಎಂದು ಸೂಚಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಶಂಕರ್ ಮಾತನಾಡಿ, ಜೂ.12 ರಂದು ವಿಶ್ವ ಬಾಲ ಕಾರ್ಮಿಕ ದಿನಾಚರಣೆ ಆಯೋಜಿಸಲಾಗಿದೆ. ಇದರ ಅಂಗವಾಗಿ ಜಾಗೃತಿ ಜಾಥಾ, ಬೈಕ್ ರ್ಯಾಲಿ ಹಾಗೂ ನಗರದ ಅಂಬೇಡ್ಕರ್ ಭವನದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ ಎಂದರಲ್ಲದೆ, ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಿ ಪುನರ್ ವಸತಿ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಾರ್ವಜನಿರಲ್ಲಿ ಜಾಗೃತಿ ಹೆಚ್ಚಿದ್ದು ಬಾಲ ಕಾರ್ಮಿಕರು ಪತ್ತೆಯಾಗುತ್ತಿಲ್ಲ. ಆದರೆ ನಿರಂತರ ನಿಗಾ ವಹಿಸಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಮಾತ ನಾಡಿದ ಅಪರ ಜಿಲ್ಲಾಧಿಕಾರಿಯವುರು ಅರ್ಥಪೂರ್ಣವಾಗಿ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಆಯೋಜಿಸಲು ಸೂಚಿಸಿ ಸಲಹೆಗಳನ್ನು ನೀಡಿದರು. ವಿವಿಧ ಇಲಾಖಾ ಅಧಿಕಾರಿಗಳು, ಸಂಘಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿದ್ದರು.