ಮೈಸೂರು ರೆಡ್ ಜೋನ್‍ನಿಂದ ಹೊರ ಬರಲು ದಿನಗಣನೆ 10ನೇ ದಿನವೂ ಹೊಸ ಪ್ರಕರಣ ಪತ್ತೆಯಾಗಿಲ್ಲ
ಮೈಸೂರು

ಮೈಸೂರು ರೆಡ್ ಜೋನ್‍ನಿಂದ ಹೊರ ಬರಲು ದಿನಗಣನೆ 10ನೇ ದಿನವೂ ಹೊಸ ಪ್ರಕರಣ ಪತ್ತೆಯಾಗಿಲ್ಲ

May 11, 2020

ಮೈಸೂರು, ಮೇ 10(ಎಂಟಿವೈ)- ರೆಡ್‍ಜೋನ್ ಹಣೆಪಟ್ಟಿಯಿಂದ ಹೊರ ಬರಲು ಮೈಸೂರು ಜಿಲ್ಲೆಗೆ ನಾಲ್ಕೇ ಮೆಟ್ಟಿಲು ಬಾಕಿ ಇದೆ. ಸತತ 2 ವಾರ ಹೊಸ ಪ್ರಕರಣ ಪತ್ತೆ ಯಾಗದಿದ್ದರೆ ನಿಯಮಾನುಸಾರ ರೆಡ್‍ಜೋನ್‍ನಿಂದ ಆರೆಂಜ್‍ಜೋನ್‍ಗೆ ವರ್ಗಾವಣೆಯಾಗುವುದರಿಂದ ಮೈಸೂರಿನ ಜನತೆ ಕೇವಲ 4 ದಿನಗಳತ್ತ ಗಮನ ಕೇಂದ್ರೀಕರಿಸುವಂತಾಗಿದೆ.

ಕೊರೊನಾ ಮುಕ್ತವಾಗುವತ್ತ ಮೈಸೂರು ದಾಪುಗಾಲಿಡುತ್ತಿದ್ದು, ಸತತ 10ನೇ ದಿನವೂ ಕೊರೊನಾ ಸೋಂಕಿತ ಹೊಸ ಪ್ರಕರಣ ಪತ್ತೆಯಾಗಿಲ್ಲ. ಕೋವಿಡ್ ಆಸ್ಪತ್ರೆಯಿಂದ ಸೋಂಕಿತರು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಸಕ್ರಿಯ ಪ್ರಕರಣ ಕೇವಲ 4ಕ್ಕೆ ಕುಸಿದಿದ್ದರೆ, ಬಿಡುಗಡೆ ಯಾದವರ ಸಂಖ್ಯೆ 86ಕ್ಕೆ ಏರಿಕೆಯಾದಂತಾಗಿದೆ. ಜಿಲ್ಲೆಯಲ್ಲಿ 10ದಿನದಿಂದ ಹೊಸ ಪ್ರಕರಣ ಪತ್ತೆಯಾಗದೇ ಇರುವುದು ಜಿಲ್ಲೆಯ ಜನರಲ್ಲಿ ಹರ್ಷ ಉಂಟು ಮಾಡಿದೆ. ರೆಡ್‍ಜೋನ್‍ನಿಂದಾಗಿ ಹಲವು ಕ್ಷೇತ್ರಗಳಲ್ಲಿ ನಿರ್ಬಂಧ ಮುಂದುವರೆದಿರುವುದರಿಂದ ಜನತೆ ಕಂಗಾಲಾಗಿದ್ದಾರೆ.

ಮೈಸೂರಲ್ಲಿ ಸೋಂಕಿತರಿಗೆ ಪರಿಣಾಮಕಾರಿಯಾದ ಚಿಕಿತ್ಸೆ ನೀಡುವುದರೊಂದಿಗೆ ಆರೈಕೆ ಮಾಡುತ್ತಿರುವುದರಿಂದ 90ರ ಗಡಿ ದಾಟಿದ್ದ ಸೋಂಕಿತರ ಸಂಖ್ಯೆ ಕೇವಲ 4ಕ್ಕೆ ಕುಸಿತ ಕಂಡಿದೆ. ಈ 4 ಮಂದಿ ಮಾತ್ರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 3ನೇ ಅವಧಿ ಲಾಕ್‍ಡೌನ್‍ನಲ್ಲಿ ದೊರೆತ ಸಡಿಲಿಕೆಯಿಂದ ಹೊರ ರಾಜ್ಯಗಳಿಂದ ಜಿಲ್ಲೆ ಪ್ರವೇಶಿಸಿದ ಒಟ್ಟು 268 ಮಂದಿಯನ್ನು ಫೆಸಿಲೆಟೆಡ್ ಕ್ವಾರಂಟೈನ್(ಲಾಡ್ಜ್‍ಗಳಲ್ಲಿ) ಮಾಡಲಾಗಿದೆ. ಇದರಿಂದ ಕ್ವಾರಂಟೈನ್‍ನಲ್ಲಿರುವವರ ಸಂಖ್ಯೆ 268ಕ್ಕೆ ಏರಿಕೆಯಾಗಿದೆ. ಹೊರ ರಾಜ್ಯದಿಂದ ಬಂದ ಎಲ್ಲರನ್ನೂ ಸ್ಕ್ರೀನಿಂಗ್ ಮಾಡಲಾಗುತ್ತಿದ್ದು, ಸೋಂಕಿನ ಲಕ್ಷಣ ಕಂಡು ಬಂದರೆ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತಿದೆ. ಎಲ್ಲಾ ರಸ್ತೆಗಳಲ್ಲೂ ನಾಕಾಬಂದಿ ಹಾಕಲಾಗಿದೆ. ಯಾವುದೇ ಕಾರಣಕ್ಕೂ ಹೊರ ರಾಜ್ಯ ದಿಂದ ಬಂದವರು ಕ್ವಾರಂಟೈನ್‍ನಿಂದ ತಪ್ಪಿಸಿಕೊಂಡು ಹೋಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ಮನೆಯಲ್ಲಿದ್ದರೆ ಆರೋಗ್ಯ ಸಿಬ್ಬಂದಿಗಳ ಕಣ್ತಪ್ಪಿಸಿ ಹೊರಗೆ ಬರುವ ಸಾಧ್ಯತೆ ಹೆಚ್ಚಾಗಿದ್ದರಿಂದ ಎಲ್ಲರನ್ನು ಕಡ್ಡಾಯವಾಗಿ ಫಿಸಿಲೆಡೆಟ್ ಕ್ವಾರಂಟೈನ್ ಮಾಡಲಾಗುತ್ತದೆ. ಇದುವರೆಗೂ 5029 ಮಂದಿ ಮೇಲೆ ನಿಗಾ ಇಡಲಾಗಿತ್ತು. 4757 ಮಂದಿ 14 ದಿನಗಳ ಕ್ವಾರಂಟೈನ್ ಮುಗಿಸಿದ್ದಾರೆ. 5331 ಮಂದಿಯಿಂದ ಸ್ವ್ಯಾಬ್ ಟೆಸ್ಟ್ ಮಾಡಲಾಗಿತ್ತು. 5241 ಮಂದಿ ಸ್ಯಾಂಪಲ್ ನೆಗೆಟಿವ್ ಆಗಿ ಬಂದಿದೆ. 90 ಸ್ಯಾಂಪಲ್ ನೆಗೆಟಿವ್ ಬಂದಿದೆ.

Translate »