ವಿಜೃಂಭಣೆಯ ಕಬ್ಬಳ್ಳಿ ಬಸವೇಶ್ವರಸ್ವಾಮಿ ಜಾತ್ರೆ
ಹಾಸನ

ವಿಜೃಂಭಣೆಯ ಕಬ್ಬಳ್ಳಿ ಬಸವೇಶ್ವರಸ್ವಾಮಿ ಜಾತ್ರೆ

November 20, 2018

ಚನ್ನರಾಯಪಟ್ಟಣ: ತಾಲೂಕಿನ ಕಬ್ಬಳಿಯಲ್ಲಿ ಶ್ರೀ ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು.

ಶ್ರೀ ಕ್ಷೇತ್ರದಲ್ಲಿ 87ನೇ ಭಾರೀ ದನಗಳ ಜಾತ್ರಾ ಮಹೋತ್ಸವಕ್ಕೆ ಶ್ರೀ ಆದಿಚುಂಚನ ಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸೋಮ ವಾರ ಬೆಳಗ್ಗೆ ಬಸವೇಶ್ವರ ದೇಗುಲದ ಆವ ರಣದಲ್ಲಿ ಗೋಪೂಜೆ ನೆರವೇರಿಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.

ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ದೇಗುಲದಲ್ಲಿ ವಿಶೇಷ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಗಣಪತಿ ಪೂಜೆ, ಲೋಕ ಕಲ್ಯಾಣಾರ್ಥವಾಗಿ ವಿಶೇಷ ಹೋಮ, ರಾಶಿಪೂಜೆ ಸೇರಿದಂತೆ ಇನ್ನಿತರ ಪೂಜಾ ಕೈಂಕರ್ಯಗಳು ಅಪಾರ ಭಕ್ತಸ್ತೋಮದ ಸಮ್ಮುಖದಲ್ಲಿ ಜರುಗಿದವು.

ನಂತರ ಬಸವೇಶ್ವರ ದೇವರ ಉತ್ಸವ ಮೂರ್ತಿ ಹೊತ್ತ ರಥದ ಮೆರವಣಿಗೆ ದೇಗುಲದ ಆಸುಪಾಸಿನ ರಸ್ತೆಗಳಲ್ಲಿ ಸಂಚರಿಸಿತು. ಈ ವೇಳೆ ಭಕ್ತರ ಜಯಘೋಷ ಮುಗಿಲು ಮುಟ್ಟಿತು. ಆನಂತರ ದೇಗುಲದ ಆವರಣದಲ್ಲಿ ಜಾತ್ರಾ ಮಹೋ ತ್ಸವದ ಹಿನ್ನೆಲೆಯಲ್ಲಿ ನೆರೆದಿದ್ದ ಸಾವಿ ರಾರು ಭಕ್ತರಿಗೆ ಧರ್ಮದರ್ಶನ ನೀಡಿದ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರು, ಮಧ್ಯಾಹ್ನದ ವೇಳೆಗೆ ದೇಗುಲದ ಆವರಣದ ವೇದಿಕೆಯಲ್ಲಿ ನಡೆದ ಗಾನ ಸುಧೆ ಕಾರ್ಯಕ್ರಮದಲ್ಲಿ ಸರಿಸುಮಾರು 1 ಗಂಟೆಗೂ ಹೆಚ್ಚುಕಾಲ ತಾವೇ ಹಾಡಿ ಭಕ್ತ ಸಮೂಹದ ಮನ ತಣಿಸಿದರು.

ಸಂಜೆ ಅಪಾರ ಭಕ್ತಸ್ತೋಮದ ಸಮ್ಮುಖ ದಲ್ಲಿ ಶ್ರೀ ಬಸವೇಶ್ವರ ಉತ್ಸವ ಮೂರ್ತಿ ಸರ್ಪೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಜಾತ್ರೆ ಹಿನ್ನೆಲೆಯಲ್ಲಿ ಸುತ್ತಮುತ್ತಲ ಗ್ರಾಮಗಳ ಜನರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ದೇಗುಲದ ಆವರಣದಲ್ಲಿರುವ ಕಲ್ಯಾಣಿಯಲ್ಲಿ ರಾತ್ರಿ ತೆಪ್ಪೋತ್ಸವ ಕಾರ್ಯಕ್ರಮ ನಡೆಯಲಿದೆ.

ಹಾಸನ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಕಬ್ಬಳಿ ಮಠದ ಶ್ರೀ ಶಿವಪುತ್ರ ನಾಥ ಸ್ವಾಮೀಜಿ, ಜವೇನಹಳ್ಳಿ ಮಠದ ಸಂಗಮೇಶ್ವರದೇವರು ಸೇರಿದಂತೆ ಹಲವು ಸ್ವಾಮೀಜಿಗಳು ಜಾತ್ರಾ ಮಹೋತ್ಸವದ ನೇತೃತ್ವದ ಧಾರ್ಮಿಕ ವಿಧಿ ವಿಧಾನದ ನೇತೃತ್ವ ವಹಿಸಿದ್ದರು. ಸ್ಥಳೀಯರು ಜನಪ್ರತಿನಿಧಿಗಳು ಹಾಗೂ ಮುಖಂಡರು ಈ ವೇಳೆ ಹಾಜರಿದ್ದರು.

Translate »