ಗುಂಡ್ಲುಪೇಟೆ: ತಾಲೂಕಿನ ಮಲ್ಲಯ್ಯನ ಪುರ ಗ್ರಾಮದಲ್ಲಿ ಆರು ವರ್ಷಗಳಿಂದಲೂ ಪ್ರಗತಿಯಲ್ಲಿರುವ ಕನಕಭವನ ಕಾಮಗಾರಿಯನ್ನು ಪೂರ್ಣಗೊಳಿಸದೇ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದ ಕುರುಬರ ಸಂಘದ ಪದಾಧಿಕಾರಿಗಳು ಪಟ್ಟಣದ ಕೆಆರ್‍ಎಡಿಎಲ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
2012ರಲ್ಲಿ ಮಲ್ಲಯ್ಯನಪುರ ಗ್ರಾಮವನ್ನು ಸುವರ್ಣ ಗ್ರಾಮವಾಗಿ ಅಭಿವೃದ್ಧಿಪಡಿಸಲಾಗಿತ್ತು. ಈ ಸಂದರ್ಭದಲ್ಲಿ 12ಲಕ್ಷ ರೂಪಾಯಿ ವೆಚ್ಚದಲ್ಲಿ ಕನಕ ಭವನ ನಿರ್ಮಾಣ ಕಾಮಗಾರಿ ಪ್ರಾರಂಭಿಸಿ ದ್ದರೂ ಸಹ ಅದು ಇನ್ನೂ ಪೂರ್ಣಗೊಂಡಿಲ್ಲ. ಜತೆಗೆ, ಈಗಾಗಲೇ, ಮಾಡಿರುವ ಕಾಮಗಾರಿಯೂ ಸಹ ಕಳಪೆಯಾಗಿದ್ದು, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿಲ್ಲ. ಈ ಬಗ್ಗೆ ವಿಚಾರಿಸಿದರೆ ಅಧಿಕಾರಿ ಗಳು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ ಎಂದು ದೂರಿದರು.
ಗ್ರಾಮಸ್ಥರು ಕಚೇರಿ ಮುತ್ತಿಗೆ ಹಾಕಿರುವ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎಂಜಿನಿಯರ್ ಜಯರಾಂ ಮಾತನಾಡಿ, ಅಧಿಕಾರಿಗಳು ಪ್ರಗತಿ ಪರಿಶೀಲನಾ ಸಭೆಗೆ ತೆರಳಿದ್ದು ಅವರ ಗಮನಕ್ಕೆ ತರುವ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು. ಪ್ರತಿಭಟನೆಯಲ್ಲಿ ರಘು, ಶಶಿ, ರೇವಣ್ಣ, ಇಂದ್ರ, ಗ್ರಾಪಂ ಸದಸ್ಯ ಮಹದೇವೇಗೌಡ ಸೇರಿದಂತೆ ಇತರರು ಇದ್ದರು.