ಪಾರ್ಲಿಮೆಂಟ್ ಎಲೆಕ್ಷನ್ ಆಗೋವರೆಗೂ ಇರ್ತಾರೆ…
ಮೈಸೂರು

ಪಾರ್ಲಿಮೆಂಟ್ ಎಲೆಕ್ಷನ್ ಆಗೋವರೆಗೂ ಇರ್ತಾರೆ…

June 27, 2018
  • ಮೈತ್ರಿ ಸರ್ಕಾರದ ಆಯಸ್ಸಿನ ಬಗ್ಗೆ ಶಾಂತಿವನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕವಡೆ…!
  • ಆಪ್ತರೊಂದಿಗಿನ ಸಿದ್ದರಾಮಯ್ಯರ ‘ಆಪ್ತ ಸಮಾಲೋಚನೆ’ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
  • ದೋಸ್ತಿಗಳಲ್ಲಿ ಸಿಡಿಮಿಡಿ, ಡಿಸಿಎಂ ಡಾ. ಪರಮೇಶ್ವರ್ ಮಾಧ್ಯಮದ ಮುಂದೆ ಅಬ್ಬರ

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು, ತಾವು ಚಿಕಿತ್ಸೆ ಪಡೆಯುತ್ತಿರುವ ಧರ್ಮಸ್ಥಳದ ಶಾಂತಿವನ ಪ್ರಕೃತಿ ಚಿಕಿತ್ಸಾಲಯದಲ್ಲಿ ತಮ್ಮ ಆಪ್ತರ ಜೊತೆ ಔಪಚಾರಿಕವಾಗಿ ಮಾತನಾಡಿರುವ ಕೆಲವು ಸಂಭಾಷಣೆಯ ವೀಡಿಯೋ ವೈರಲ್ ಆಗಿದ್ದು, ಸರ್ಕಾರದ ಅಸ್ತಿತ್ವವನ್ನೇ ಅಲುಗಾಡಿ ಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಸಂಪುಟ ರಚನೆಯಾದ ಬೆನ್ನಲ್ಲೇ ಸಿದ್ದ ರಾಮಯ್ಯ ಅವರ ಕೆಲ ಆಪ್ತ ಶಾಸಕರು ಸಂಪುಟದಲ್ಲಿ ತಮಗೆ ಸ್ಥಾನ ದೊರೆಯ ಲಿಲ್ಲ ಎಂದು ಬಂಡಾಯವೆದ್ದಿದ್ದರು. ಅದು ಶಮನವಾಗುವಂತೆ ಭಾಸವಾಯಿತಾ ದರೂ, ಒಳಗೊಳಗೆ ಬೂದಿ ಮುಚ್ಚಿದ ಕೆಂಡದಂತಿತ್ತು. ಆನಂತರ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಜೆಟ್ ಮಂಡಿ ಸುತ್ತೇನೆ ಎಂದಾಗ ಅದಕ್ಕೆ ಸಿದ್ದರಾಮಯ್ಯ ಅಪಸ್ವರವೆತ್ತಿದ್ದರು. ಈ ಮಧ್ಯೆ ಪ್ರಕೃತಿ ಚಿಕಿತ್ಸಾ ಲಯದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಿದ್ದರಾಮಯ್ಯ ಅವರನ್ನು ಅವರ ಆಪ್ತರು ಪದೇ ಪದೆ ಭೇಟಿ ಮಾಡುತ್ತಿದ್ದಾರೆ. ಅಲ್ಲಿ ರಾಜಕೀಯ ರಣತಂತ್ರಗಳೂ ಸಹ ರೂಪುಗೊಳ್ಳುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ನಡುವೆಯೇ ಸಿದ್ದ ರಾಮಯ್ಯ ತಮ್ಮ ಆಪ್ತರ ಜೊತೆ ಮಾತ ನಾಡಿದ ಸಂಭಾಷಣೆ ವೀಡಿಯೋ ವೈರಲ್ ಆಗಿದ್ದು, ಸಮ್ಮಿಶ್ರ ಸರ್ಕಾರ ಅಸ್ತಿತ್ವ ಉಳಿಸಿ ಕೊಳ್ಳಲಿದೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಉದ್ಭವವಾಗಿದೆ.

ಮಾತನಾಡಿದ್ದೇನೆ?: ಸಿದ್ದರಾಮಯ್ಯ ಅವರ ಆಪ್ತರೊಬ್ಬರು `ಸರ್ಕಾರ ಐದು ವರ್ಷ ಇರುತ್ತದೆಯೇ?’ ಎಂದು ಹೇಳುತ್ತಿ ದ್ದಂತೆಯೇ ಸಿದ್ದರಾಮಯ್ಯನವರು `ಹಾಂ… ಐದು ವರ್ಷನಾ… , ಪಾರ್ಲಿಮೆಂಟ್ ಎಲೆಕ್ಷನ್ ಆಗೋವರೆಗೂ ಇರ್ತಾರೆ. ಆಮೇಲೆ ಏನೇನ್ ಡೆವಲಪ್‍ಮೆಂಟ್ ಆಗುತ್ತೋ ನೋಡ್ಬೇಕು. ಅವರು ಯಂಗ್‍ಸ್ಟರ್ ಅಲ್ಲವೇ?’ ಎಂದು ಹೇಳಿರುವುದು ಅಲ್ಲೋಲ-ಕಲ್ಲೋಲ ವನ್ನುಂಟು ಮಾಡಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ಸಿದ್ದರಾಮಯ್ಯನವರು ಇನ್ನೂ ಕೆಲವು ರಾಜಕೀಯ ವಿದ್ಯಮಾನ ಗಳ ಬಗ್ಗೆ ಮಾತನಾಡಿದ್ದರಾದರೂ, ಅವೆ ಲ್ಲವೂ ಸರ್ವೇಸಾಮಾನ್ಯ.

ಐದು ವರ್ಷ ಇರುತ್ತೆ: ಸಿದ್ದರಾಮಯ್ಯ ನವರ ಈ ಮಾತುಗಳ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ

ಡಾ. ಜಿ.ಪರಮೇಶ್ವರ್ ಕೆಂಡಾಮಂಡಲವಾಗಿಬಿಟ್ಟರು. ಏರಿದ ದನಿಯಲ್ಲೇ ಅವರು, `ಸರ್ಕಾರ ಐದು ವರ್ಷ ಇರುತ್ತೆ. ನಾವು ಐದು ವರ್ಷ ಸರ್ಕಾರ ನಡೆಸಲು ಒಪ್ಪಂದ ಮಾಡಿಕೊಂಡಿದ್ದೇವೆ. ಪಕ್ಷದ ಅಧ್ಯಕ್ಷನಾಗಿ ನಾನು ಹೇಳುತ್ತಿದ್ದೇನೆ. ಐದು ವರ್ಷ ಸರ್ಕಾರ ಇರುತ್ತೆ. ಯಾವ ಸಂದರ್ಭದಲ್ಲಿ ರಾಜಕಾರಣದಲ್ಲಿ ಏನು ಆಗುತ್ತೆ ಎಂದು ಹೇಳಲಾಗುವುದಿಲ್ಲ’ ಎಂದು ಹೇಳಿದರು.

ಬಜೆಟ್‍ನತ್ತ ಗಮನ: ಇದೇ ವಿಷಯವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಇಂತಹುದ್ದೆಲ್ಲಾ ಪದೇ ಪದೇ ಬರ್ತಾನೇ ಇರುತ್ತದೆ. ನಾನು ಯಾವುದರ ಬಗ್ಗೆಯೂ ತಲೆಕೆಡಿಸಿಕೊಂಡಿಲ್ಲ. ಬಜೆಟ್ ಬಗ್ಗೆ ಗಮನ ಹರಿಸಿದ್ದೀನಿ ಎಂದರು.

ವೇಣುಗೋಪಾಲ್ ನೋಡ್ಕೋಳ್ತಾರೆ: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರೂ ಆದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪ್ರತಿಕ್ರಿಯಿಸಿ, `ಇನ್ನೊಬ್ಬರ ಬಗ್ಗೆ ನಾನ್ ಚರ್ಚೆ ಮಾಡಲ್ಲ. ಸರ್ಕಾರದ ಬಗ್ಗೆ ಕೆ.ಸಿ.ವೇಣುಗೋಪಾಲ್ ನೋಡ್ಕೋಳ್ತಾರೆ. ಸಮ್ಮಿಶ್ರ ಸರ್ಕಾರ ಬರೋದಕ್ಕೆ ಅವರೇ ಕಾರಣ. ಅವರೇ ಎಲ್ಲಾ ನಿಭಾಯ್ಸಿಕೊಳ್ತಾರೆ’ ಎಂದು ಹೇಳಿದರು.

ಮಧ್ಯೆ ಪ್ರವೇಶಿಸಲ್ಲ: ಈ ರಾಜಕೀಯ ವಿದ್ಯಾಮಾನಗಳ ಕುರಿತು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಒಂದ್ ಹೇಳ್ತಾರೆ, ಕುಮಾರಸ್ವಾಮಿ ಒಂದ್ ಹೇಳ್ತಾರೆ, ಅವರವರೇ ಹೊಡೆದಾಡಿಕೊಳ್ತಾ ಇದ್ದಾರೆ. ಅದೆಲ್ಲಾ ಅವರಿಗೆ ಬಿಟ್ಟಿದ್ದು. ಇದರಲ್ಲಿ ನಾವು ಮಧ್ಯೆ ಪ್ರವೇಶಿಸುವುದಿಲ್ಲ ಎಂದರು.

ಸರ್ಕಾರದ ಆರೋಗ್ಯ ಕೆಡಿಸ್ತಾ ಇದ್ದಾರೆ: ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. `ಅವರವರೇ ಕಚ್ಚಾಡಿ ಸಾಯ್ತಾ ಇದ್ದಾರೆ. ಸರ್ಕಾರ ಇರುತ್ತೋ-ಇರಲ್ವೋ, ಬಜೆಟ್ ಮಂಡಿಸ್ತಾರೋ-ಇಲ್ವೋ, ಇದರ ಬಗ್ಗೇನೇ ತಲೆ ಕೆಡ್ಸಿಕೊಂಡಿದ್ದಾರೆ. ಸರ್ಕಾರ ನಡೆಸ್ತಾ ಇಲ್ಲ. ಸಿದ್ದರಾಮಯ್ಯನವರು ಆರೋಗ್ಯ ಸರಿ ಮಾಡ್ಕೋಳ್ಳೋಕೆ ಹೋಗಿ ಸರ್ಕಾರದ ಆರೋಗ್ಯ ಕೆಡಿಸ್ತಾ ಇದ್ದಾರೆ’ ಎಂದರು.

Translate »