ಸಿದ್ದರಾಮಯ್ಯ  ಸೈಲೆಂಟ್ ಬಾಂಬ್… ಬಿಜೆಪಿಗೆ ಪಥ್ಯ!?
ಮೈಸೂರು

ಸಿದ್ದರಾಮಯ್ಯ ಸೈಲೆಂಟ್ ಬಾಂಬ್… ಬಿಜೆಪಿಗೆ ಪಥ್ಯ!?

June 27, 2018

ಬೆಂಗಳೂರು: ಧರ್ಮಸ್ಥಳದ ಶಾಂತಿವನದಲ್ಲಿ ವಿಶ್ರಾಂತಿ ಪಡೆಯುತ್ತಿ ರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈತ್ರಿ ಸರ್ಕಾರದ ಬಗ್ಗೆ ನೀಡುತ್ತಿರುವ ಹೇಳಿಕೆಗಳು ಹತ್ತು-ಹಲವು ಅನುಮಾನ ಹಾಗೂ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಸಿದ್ದರಾಮಯ್ಯರ ಸೈಲೆಂಟ್ ಬಾಂಬ್‍ಗಳು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಗೆ ಅಪಥ್ಯವಾದರೆ, ಬಿಜೆಪಿ ನಾಯಕರಿಗೆ ಪಥ್ಯವೆಂಬಂತೆ ಕಂಡುಬರುತ್ತಿದೆ. ಸಿದ್ದರಾಮಯ್ಯನವರ ಹೇಳಿಕೆಗಳ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ರಾಜಕೀಯ ವಿದ್ಯಮಾನಗಳು ಗರಿಗೆದರಿವೆ. ಸಿದ್ದರಾಮಯ್ಯನವರ ಹೇಳಿಕೆಯ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷರೂ ಆದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಮೈತ್ರಿ ಸರ್ಕಾರದಲ್ಲಿ ತಮ್ಮ ಮಾತಿಗೆ ಮನ್ನಣೆ ದೊರೆಯದ ಕಾರಣ ಭುಸುಗುಡುತ್ತಿರುವ ಸಿದ್ದರಾಮಯ್ಯ, ಮುಂದೆಯೂ ತಮ್ಮ ಅಭಿಪ್ರಾಯವನ್ನು ಕಾಂಗ್ರೆಸ್ ಹೈಕಮಾಂಡ್ ಪರಿಗಣಿಸದಿದ್ದಲ್ಲಿ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಯತ್ತ ಹೆಜ್ಜೆ ಹಾಕಬಹುದು. ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ. ಮುಂದೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿರುವ ಬಿಜೆಪಿ ಸರ್ಕಾರದಲ್ಲಿ ಅವರ ಪುತ್ರ ಡಾ. ಯತೀಂದ್ರ ಅವರಿಗೆ ಸಚಿವ ಸ್ಥಾನ. ಜೊತೆಗೆ ಅವರ ಆಪ್ತ ಶಾಸಕರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವ ಬಗ್ಗೆ ಒಳ ಮಾತುಕತೆ ನಡೆದಿದೆ ಎಂಬ ವಿಚಾರವಾಗಿ ಖಾಸಗಿ ವಾಹಿನಿಗಳು ವರದಿ ಬಿತ್ತರಿಸುತ್ತಿವೆ. ಇದಕ್ಕೆ ಪೂರಕವೆಂಬಂತೆ ಸಿದ್ದರಾಮಯ್ಯ ವಿರುದ್ಧ ಸದಾ ವಾಗ್ದಾಳಿ ನಡೆಸುತ್ತಿದ್ದ ಹಲವು ಬಿಜೆಪಿ ಮುಖಂಡರು ಅವರ ವಿಚಾರದಲ್ಲಿ ಈಗ ಮೃದು ಧೋರಣೆ ತಾಳಿದ್ದಾರೆ. ನಿನ್ನೆಯಿಂದ ಖಾಸಗಿ ವಾಹಿನಿಗಳಲ್ಲಿ ಬರುತ್ತಿರುವ ಅವರ ಪ್ರತಿಕ್ರಿಯೆಗಳು ಇದಕ್ಕೆ ಪುಷ್ಟಿ ನೀಡುತ್ತಿವೆ.

Translate »