ಕಾಶ್ಮೀರ-ಬಗೆಹರಿಯದ ಸಮಸ್ಯೆ: ಮಾಜಿ ರಾಜತಾಂತ್ರಿಕ ದುಲತ್ ವಿಷಾದ
ಮೈಸೂರು

ಕಾಶ್ಮೀರ-ಬಗೆಹರಿಯದ ಸಮಸ್ಯೆ: ಮಾಜಿ ರಾಜತಾಂತ್ರಿಕ ದುಲತ್ ವಿಷಾದ

November 19, 2018

ಮೈಸೂರು:  ಕಳೆದ 70 ವರ್ಷಗಳಿಂದ ಕಾಶ್ಮೀರದಿಂದ ಪಾಕಿಸ್ತಾನಕ್ಕೆ ನೀರು-ರಕ್ತ ಹೊಳೆಯಾಗಿ ಹರಿದಿದೆ. ಈ ವೇಳೆ ಅನೇಕ ಮಹಾ ನಾಯಕರು ಎರಡು ದೇಶಗಳಲ್ಲಿ ಆಳ್ವಿಕೆ ನಡೆಸಿದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂದು ಮಾಜಿ ರಾಜತಾಂತ್ರಿಕ ಎ.ಎಸ್.ದುಲತ್ ಬೇಸರ ವ್ಯಕ್ತಪಡಿಸಿದರು.

ನಜರ್‍ಬಾದ್‍ನ ಖಾಸಗಿ ಹೋಟೆಲ್‍ನಲ್ಲಿ ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್ ಹಾಗೂ ಮೈಸೂರು ಬುಕ್ ಕ್ಲಬ್ ವತಿಯಿಂದ ನಡೆದ ಮೈಸೂರು ಸಾಹಿತ್ಯ ಹಬ್ಬದಲ್ಲಿ `ಪ್ರಸ್ತುತ ಜಮ್ಮು-ಕಾಶ್ಮೀರ ರಾಜಕೀಯ ಸ್ಥಿತಿ-ಗತಿ’ ಕುರಿತು ಮಾತನಾಡಿದರು.
ಭಾರತ ಮತ್ತು ಪಾಕಿಸ್ತಾನ ವಿಭಜನೆ ಆಗಿ 70 ವರ್ಷಗಳು ದಾಟಿವೆ. ಆದರೂ ಜಮ್ಮು-ಕಾಶ್ಮೀರ ವಿಷಯದಲ್ಲಿ ನಡೆಯುತ್ತಿರುವ ರಾಜಕೀಯ ಸಂಘರ್ಷ ಇಂದಿಗೂ ನಿಂತಿಲ್ಲ. ಇದರಿಂದ ಅನೇಕ ನಾಗರಿಕರು ಬಲಿಯಾಗು ತ್ತಿದ್ದಾರೆ. ಈ ವಿಷಯದಲ್ಲಿ ಒಂದೆಡೆ ಅಂತಾ ರಾಷ್ಟ್ರೀಯ ಸಂಘರ್ಷ. ಮತ್ತೊಂದೆಡೆ ಆಂತರಿಕ ಸಂಘರ್ಷದಿಂದ ಈ ರಾಜ್ಯದಲ್ಲಿ ಶಾಂತಿ ಎಂಬುದು ಮರೀಚಿಕೆಯಾಗಿದೆ ಎಂದರು.

ಪ್ರಧಾನಮಂತ್ರಿ ಪಿ.ವಿ.ನರಸಿಂಹರಾವ್ ಅವರು ಅಧಿಕಾರದಲ್ಲಿದ್ದಾಗ ಕಾಶ್ಮೀರ ಸಮಸ್ಯೆ ಬಗೆಹರಿಸಲು ಅನೇಕ ಪ್ರಯತ್ನಗಳು ನಡೆದವು. ಆದರೆ, ಈ ಪ್ರಯತ್ನ ಮಾತುಕತೆ ಹಂತದಲ್ಲೇ ಉಳಿದುಕೊಂಡವು. ಇದಕ್ಕೇ ನಾನಾ ಕಾರಣ ಗಳನ್ನು ನೀಡಬಹುದು. ನಂತರ ಪಾಕಿಸ್ತಾನ ದಲ್ಲಿ ನವಾಜ್ ಷರೀಫ್, ಬೆನ್‍ಜೀರ್ ಭುಟ್ಟೋ ಹಾಗೂ ಜನರಲ್ ಪರ್ವೇಜ್ ಮುಷರಫ್ ಸೇರಿದಂತೆ ಇತರರು ಅಧಿಕಾರ ನಡೆಸಿದರು. ಆದರೆ, ವಾಜಪೇಯಿ ಅಧಿಕಾರಾವಧಿಯಲ್ಲಿ ಭಾರತ-ಪಾಕಿಸ್ತಾನದ ನಡುವೆ ಮಾತುಕತೆ ನಡೆಯುತ್ತಿದ್ದರೆ, ಮತ್ತೊಂದೆಡೆ ಆಕ್ರಮಣಗಳು ನಡೆಯುತ್ತಿದ್ದವು. ಇದರಿಂದ ಎರಡೂ ದೇಶದ ಸೇನೆಗಳ ನಡುವೆ ಸಾಕಷ್ಟು ಹಾನಿಯಾಗಿದೆ ಎಂದು ವಿವರಿಸಿದರು.

1999-2004 ರವರೆಗೆ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಮಂತ್ರಿಯಾಗಿದ್ದಾಗ, ಪಾಕಿಸ್ತಾನದ ಜೊತೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ನಡೆಸುತ್ತಿದ್ದರು. ಇತ್ತ ಎರಡೂ ದೇಶದ ಗಡಿಯಲ್ಲಿ ಸೇನಾ ಆಕ್ರಮಣ ಗಳು ನಡೆಯುತಿತ್ತು. ಆದರೆ, ವಾಜಪೇಯಿ ಅವರು, ಅಂಜದೆ ಕಾಶ್ಮೀರದ ಉಳಿವಿಗೆ ತಮ್ಮೆಲ್ಲಾ ರಾಜತಾಂತ್ರಿಕ ಮಾರ್ಗಗಳನ್ನು ಬಳಸಿ ಕೊಂಡು ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಪ್ರಯತ್ನಿಸಿದರು. ಈ ನಡುವೆ ಉಗ್ರಗಾಮಿಗಳು ನೂರಾರು ಭಾರತೀಯರಿದ್ದ ವಿಮಾನ ಹೈಜಾಕ್ ಮಾಡಿ, ವಾಜಪೇಯಿ ಸರ್ಕಾರದ ಅಸ್ತಿತ್ವವನ್ನೇ ಪ್ರಶ್ನೆ ಮಾಡಿಬಿಟ್ಟರು. ಅಂದು ಈ ಘಟನೆಯಲ್ಲಿ ವಾಜಪೇಯಿ ಸರ್ಕಾರ ನಡೆದುಕೊಂಡ ರಾಜತಾಂತ್ರಿಕ ನೀತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂದಿಗೂ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ತದನಂತರ ಭಾರತ-ಪಾಕಿಸ್ತಾನಗಳ ನಡುವೆ ರೈಲು ಸಂಚಾರ, ಬಸ್ ಸಂಚಾರ, ವ್ಯಾಪಾರ ವಹಿವಾಟು ನಡೆದವು. ಈ ನಡುವೆಯೇ ಕಾರ್ಗಿಲ್ ಯುದ್ಧ ನಡೆದು ನಮ್ಮ ಭಾರತೀಯ ಸೇನೆಗೆ ಹೀರೊ ಪಟ್ಟ ಲಭಿಸಿತು. 2004ರ ನಂತರ ಯುಪಿಎ ನೇತೃತ್ವದ ಮನಮೋಹನ್ ಸರ್ಕಾರ ಅಸ್ಥಿತ್ವಕ್ಕೆ ಬಂತು. ಆ ಸರ್ಕಾರವೂ ಎರಡು ದೇಶಗಳ ರಾಜತಾಂತ್ರಿಕ ವ್ಯವಸ್ಥೆ ಸರಿಪಡಿಸಲು ಸಾಕಷ್ಟು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಇದರಿಂದ ಸ್ಥಳೀಯ ರಾಜಕಾರಣಿಗಳಾದ ಫಾರೂಕ್ ಅಬ್ದುಲ್ಲಾ, ಇವರ ಪುತ್ರ ಓಮರ್ ಅಬ್ದುಲ್ಲಾ, ಮೆಹಬೂಬ ಮುಪ್ತಿ ಸೇರಿದಂತೆ ಅನೇಕ ರಾಜಕಾರಣಿಗಳು ಪ್ರತ್ಯೇಕತೆಗೆ ಹೆಚ್ಚಿನ ಒಲವು ತೋರುತ್ತಿರುವುದು ಸಮಸ್ಯೆ ಮತ್ತಷ್ಟು ಹೆಚ್ಚಿದೆ ಎಂದರು.

ಕಾಶ್ಮೀರ ಪಾಕಿಸ್ತಾನದ ವಶವಾಗುವುದಿಲ್ಲ: ಇನ್ನು ಹಲವು ವರ್ಷ ಕಳೆದರೂ ಕಾಶ್ಮೀರವನ್ನು ಪಾಕಿಸ್ತಾನ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ಬದಲಾಗಿ, ಈ ಸಮಸ್ಯೆಯನ್ನು ಹೇಳಿಕೊಂಡು ಆ ದೇಶ ಮತ್ತಷ್ಟು ವರ್ಷಗಳು ರಾಜಕೀಯ ಮಾಡಬಹುದೇ ಹೊರತು, ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ಪಾಕಿಸ್ತಾನದ ಮಿಲಿಟರಿ ಅಧಿಕಾರಿಗಳೇ ಹೇಳುತ್ತಾರೆ. ಖುದ್ದು ಜನರಲ್ ಮುಷರಫ್ ಭಾರತದ ಭೇಟಿ ವೇಳೆ ಆಂತರಿಕ ವಾಗಿ ಹೇಳಿದ್ದರು. ಆದರೆ, ಬಹಿರಂಗವಾಗಿ ಈ ಮಾತನ್ನು ಒಪ್ಪಿಕೊಳ್ಳಲು ಅವರು ಸಿದ್ಧರಿರಲಿಲ್ಲ ಅಷ್ಟೆ ಎಂದು ಹೇಳಿದರು.

ಕಾಶ್ಮೀರದಲ್ಲಿ ಶಾಂತಿ ನೆಲಸ ಬೇಕಾದರೆ, ಮೊದಲು ದೇಶದೊಳಗಿನ ಆಂತರಿಕ ರಾಜಕೀಯ ಸರಿದಾರಿಗೆ ಬರಬೇಕು. ಇದರಿಂದ ಕೇಂದ್ರ ಸರ್ಕಾರಕ್ಕೆ ಕಾಶ್ಮೀರ ಸಮಸ್ಯೆ ಬಗ್ಗೆ ಯೋಚಿಸಲು ಸಾಧ್ಯವಾಗುತ್ತದೆ. ದೇಶದೊಳಗೆ ಒಮ್ಮೆ ರಾಜಕೀಯ ಒಗ್ಗಟ್ಟು ಪ್ರದರ್ಶನವಾದರೆ, ಅತ್ತ ಇಸ್ಲಾಮಾಬಾದ್‍ನಿಂದ ರಾಜತಾಂತ್ರಿಕರು ತಾವಾಗಿಯೇ ಮಾತುಕತೆ ಆಗಮಿಸುತ್ತಾರೆ. ಪ್ರಸ್ತುತ ಕಾಶ್ಮೀರ ಕಣಿವೆಯಲ್ಲಿ ಮಿಲಿಟರಿ ಶಕ್ತಿ ಉಪಯೋಗಿಸಿ ಈ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು ಎಂದರು. ವೇದಿಕೆಯಲ್ಲಿ ಚಿಂತಕರಾದ ಆನಂದ್ ಅರ್ನಿ, ನೇನಾ ಗೋಪಾಲ್ ಇದ್ದರು.

Translate »