ಮಹಾರಾಜರನ್ನು ಕುರಿತು ಪದ್ಯ ಬರೆದರು.. ಪರಂಪರೆ ಬಿಂಬಿಸಿದರು..
ಮೈಸೂರು

ಮಹಾರಾಜರನ್ನು ಕುರಿತು ಪದ್ಯ ಬರೆದರು.. ಪರಂಪರೆ ಬಿಂಬಿಸಿದರು..

November 19, 2018

ಮೈಸೂರು:  ಇದೊಂದು ವಿಶಿಷ್ಟ ಸ್ಪರ್ಧೆ. ಮಕ್ಕಳೇ ತಮ್ಮ ತಂದೆ, ತಾಯಿ, ಪೋಷಕರ ಬಗ್ಗೆ ಘೋಷಣೆಗಳನ್ನು ಬರೆದರು. ಮೈಸೂರು ಮಹಾರಾಜರನ್ನು ಕುರಿತು ಪದ್ಯ ಬರೆದರು. ನಮ್ಮ ಪರಂಪರೆ ಕುರಿತು ಚಿತ್ರಕಲೆ ರಚಿಸಿ ಮೈಸೂರಿನ ಬಗ್ಗೆ ಅಭಿಮಾನ ಪ್ರದರ್ಶಿಸಿದರು.

ಮೈಸೂರು ಸಂಸ್ಕೃತಿ ಮತ್ತು ಪರಂಪರೆಗಳನ್ನು ಉತ್ತೇಜಿಸಲು ಮೀಸಲಾಗಿರುವ ವೃತ್ತಿಪರರ ತಂಡ ವಾದ `ಭೇರುಂಡ’ ಮೈಸೂರು ಅರಮನೆ ಆವರಣ ದಲ್ಲಿ ಭಾನುವಾರ ಆಯೋಜಿಸಿದ್ದ `ಮಕ್ಕಳ ಹಬ್ಬ’ (ರಾಯಲ್ ಕಿಡ್ಸ್ ಫೆಸ್ಟ್)ದಲ್ಲಿ 1ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ಇಂತಹದ್ದೊಂದು ವಿಶಿಷ್ಟ ಕಾರ್ಯ ಕ್ರಮವನ್ನು ಆಯೋಜಿಸಲಾಗಿತ್ತು. ಮೈಸೂರು ಮತ್ತು ಸುತ್ತಮುತ್ತಲಿನ ವಿವಿಧ ಶಾಲೆಗಳ 250ಕ್ಕೂ ಹೆಚ್ಚಿನ ಮಕ್ಕಳು ಮಕ್ಕಳ ಹಬ್ಬದಲ್ಲಿ ಪಾಲ್ಗೊಂಡಿದ್ದರು.

`ನಮ್ಮ ಪೋಷಕರು’ ಕುರಿತ ಬರವಣಿಗೆ ಸ್ಪರ್ಧೆಯಲ್ಲಿ ಮಕ್ಕಳು, ತಮಗಾಗಿ ತಂದೆ, ತಾಯಿ, ಪೋಷಕರು ಮಾಡುವ ತ್ಯಾಗ, ತಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳುವ ಬಗೆ, ಜೀವನದಲ್ಲಿ ನಮಗೆ ಅವರೆಷ್ಟು ಮುಖ್ಯ ಎಂಬ ಬಗ್ಗೆ ವಿವರವಾಗಿ ಬರೆದು ತಮ್ಮ ಪ್ರೀತಿ ತೋರಿದರು.

`ನಮ್ಮ ಮಹಾರಾಜರು’ ಕುರಿತು ಪದ್ಯ ಬರೆಯುವ ಸ್ಪರ್ಧೆಯಲ್ಲಿ ಮಕ್ಕಳ ಮಹಾರಾಜರ ಬಗ್ಗೆ, ರಾಜವಂಶ ಸ್ಥರ ಬಗ್ಗೆ ವರ್ಣಿಸಿ ಬರೆದದ್ದು ವಿಶೇಷವಾಗಿತ್ತು. ಮೈಸೂರು ಮಹಾರಾಜರ ಆಳ್ವಿಕೆ, ಅವರ ಕೊಡುಗೆ ಗಳನ್ನು ವಿವರವಾಗಿ ಬರೆದರು.

`ನಮ್ಮ ಪರಂಪರೆ’ ಕುರಿತ ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗ ವಹಿಸಿದ್ದ ಮಕ್ಕಳು ಪ್ರತಿಯೊಬ್ಬರೂ ವಿಭಿನ್ನ ರೀತಿಯ ಕಲ್ಪನೆಯಲ್ಲಿ ಮೈಸೂರು ದಸರಾ, ಗಂಡ ಭೇರುಂಡ, ಮೈಸೂರು ಅರಮನೆ, ಮೈಸೂರು ಮೃಗಾಲಯ, ಚಾಮುಂಡಿ ಬೆಟ್ಟದ ಚಾಮುಂಡಿ ದೇವಸ್ಥಾನದ ಗೋಪುರ, ನಂದಿ, ಕೆ.ಆರ್.ವೃತ್ತ, ಸಂತ ಫಿಲೋಮಿನಾಸ್ ಚರ್ಚ್, ದಸರಾ ಆನೆಗಳು ಇನ್ನಿತರ ಚಿತ್ರಗಳನ್ನು ಬಣ್ಣಗಳಿಂದ ರಚಿಸಿ ಮೈಸೂರಿನ ಪರಂಪರೆಯನ್ನು ಬಿಂಬಿಸಿದರು. 1ರಿಂದ 4, 5ರಿಂದ 5 ಮತ್ತು 8ರಿಂದ 10ನೇ ತರಗತಿ ವಿಭಾಗ ದಲ್ಲಿ ನಡೆದ ಸ್ಪರ್ಧೆಗಳ ವಿಜೇತ ಮಕ್ಕಳಿಗೆ ಪ್ರತಿ ವಿಭಾಗಕ್ಕೆ ಕ್ರಮವಾಗಿ ಮೂರು ಬಹುಮಾನಗಳನ್ನು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿತರಿ ಸಿದರು. ಮೈಸೂರು ಅರಮನೆ ಮಂಡಳಿ ಉಪನಿರ್ದೇ ಶಕ ಟಿ.ಎಸ್.ಸುಬ್ರಹ್ಮಣ್ಯ, ಕಲಾವಿದ ಬಾದಲ್ ನಂಜುಂಡಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.

Translate »