ಮೈಸೂರು ವಿಭಾಗದ ಪ್ರವಾಸೋದ್ಯಮ ರಾಯಭಾರಿ ಆಗಲು ಯದುವೀರ್ ಸಮ್ಮತಿ
ಮೈಸೂರು

ಮೈಸೂರು ವಿಭಾಗದ ಪ್ರವಾಸೋದ್ಯಮ ರಾಯಭಾರಿ ಆಗಲು ಯದುವೀರ್ ಸಮ್ಮತಿ

September 25, 2018

ಮೈಸೂರು: ಪ್ರವಾಸಿತಾಣವಾದ ಮೈಸೂರನ್ನು ದಕ್ಷಿಣ ಭಾರತದ ಪ್ರವಾಸೋದ್ಯಮ ಭೂಪಟದಲ್ಲಿ ಅಗ್ರಸ್ಥಾನಕ್ಕೇರಿಸುವ ಮಹದಾಸೆ ಹೊಂದಿರುವ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಪ್ರವಾಸೋದ್ಯಮ ಇಲಾಖೆಯ ಮೈಸೂರು ವಿಭಾಗದ ರಾಯಭಾರಿಯಾಗಲು ಸಮ್ಮತಿ ಸೂಚಿಸಿದ್ದಾರೆ.

ಕಳೆದ ಬುಧವಾರ ಮೈಸೂರು ಅರಮನೆಗೆ ಭೇಟಿ ನೀಡಿದ್ದ ಪ್ರವಾಸೋ ದ್ಯಮ ಸಚಿವ ಸಾ.ರಾ.ಮಹೇಶ್, ಈ ವೇಳೆ ಯದುವೀರ್ ಅವರೊಂದಿಗೆ ಮಾತುಕತೆ ನಡೆಸಿ ಮೈಸೂರು ವಿಭಾಗದ ಪ್ರವಾ ಸೋದ್ಯಮ ಇಲಾಖೆ ರಾಯಭಾರಿಯಾಗುವಂತೆ ಅವರಲ್ಲಿ ಮನವಿ ಮಾಡಿದ್ದರು.

ಇದಕ್ಕೆ ಸ್ಪಂದಿಸಿರುವ ಯದುವೀರ್ ಅವರು, ರಾಯಭಾರಿಯಾಗಲು ಸಮ್ಮತಿ ಸೂಚಿಸಿ ಸಚಿವರಿಗೆ ಪತ್ರ ಮುಖೇನ ತಿಳಿಸಿರುವ ಅವರು, ಕೃತಜ್ಞತೆ ಅರ್ಪಿಸಿ ಮೈಸೂರನ್ನು ದಕ್ಷಿಣ ಭಾರತದ ಪ್ರವಾಸೋದ್ಯಮ ಭೂಪಟದಲ್ಲಿ ಅಗ್ರಸ್ಥಾನಕ್ಕೇರಿಸುವ ಬಯಕೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ಅವಕಾಶ ಲಭಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕಾರ್ಯಸಾಧನೆಗಾಗಿ ನಮಗೆ ಸ್ಪಷ್ಟ ಉದ್ದೇಶಗಳು ಹಾಗೂ ಖಚಿತ ಗುರಿ ಹೊಂದುವ ಅಗತ್ಯವಿದೆ. ನಾವು ಈ ನಿಟ್ಟಿನಲ್ಲಿ ರಚನಾತ್ಮಕವಾಗಿ ಮುಂದುವರೆಯುವ ಸಲುವಾಗಿ ಸಂಬಂಧಪಟ್ಟ ಅಧಿಕಾರಿಗಳ ಸಭೆ ಏರ್ಪಡಿಸಿದರೆ ಉತ್ತಮ. ಮೈಸೂರು ಪ್ರವಾಸೋದ್ಯಮವನ್ನು ಅಗ್ರಸ್ಥಾನಕ್ಕೇರಿಸುವ ಉದ್ದೇಶವನ್ನು ಕಾರ್ಯರೂಪಕ್ಕೆ ತರಲು ಪ್ರವಾಸೋದ್ಯಮ ವಿಭಾಗದೊಂದಿಗೆ ಕಾರ್ಯೋನ್ಮುಖನಾಗುವ ದಿನವನ್ನು ಎದುರು ನೋಡುತ್ತಿದ್ದೇನೆ ಎಂದು ಪತ್ರ ದಲ್ಲಿ ಯದುವೀರ್ ತಿಳಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಯದುವೀರ್ ಅವ ರಿಗೆ ಪತ್ರ ಬರೆದಿರುವ ಸಾ.ರಾ.ಮಹೇಶ್ ಅವರು, ರಾಯಭಾರಿಯಾಗಲು ಸಮ್ಮತಿಸಿ ರುವುದಕ್ಕೆ ಅತೀವ ಸಂತಸ ವ್ಯಕ್ತಪಡಿಸಿ ರಾಜ್ಯ ಸರ್ಕಾರದ ಪರವಾಗಿ ಅಭಿನಂದನೆಗಳನ್ನು ಅರ್ಪಿಸಿದ್ದಾರೆ. ಜೊತೆಗೆ ಸೂಕ್ತ ಸಮಯದಲ್ಲಿ ಈ ಸಂಬಂಧ ಅಧಿಕಾರಿಗಳ ಸಭೆ ಏರ್ಪಡಿಸಲಾಗುವುದು ಎಂದೂ ತಿಳಿಸಿದ್ದಾರೆ.

Translate »