ಕೊಡಗಿನ ನೆರೆ ಸಂತ್ರಸ್ತರಿಗೆ ಮೈಸೂರು ಪಾಲಿಕೆ  ಗುತ್ತಿಗೆದಾರರಿಂದ 4,77,100 ರೂ. ನೆರವು
ಮೈಸೂರು

ಕೊಡಗಿನ ನೆರೆ ಸಂತ್ರಸ್ತರಿಗೆ ಮೈಸೂರು ಪಾಲಿಕೆ  ಗುತ್ತಿಗೆದಾರರಿಂದ 4,77,100 ರೂ. ನೆರವು

September 25, 2018

ಮೈಸೂರು: ನೆರೆ ಹಾಗೂ ಭೂಕುಸಿತದಿಂದ ತತ್ತರಿಸಿ ಹೋಗಿರುವ ಕೊಡಗಿಗೆ ಮೈಸೂರು ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘವು ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಅವರ ಮೂಲಕ 4,77,100 ರೂ. ನೆರವು ನೀಡಿದೆ.

ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಅಧ್ಯಕ್ಷತೆಯಲ್ಲಿ ಪಾಲಿಕೆಯ ಹಳೆಯ ಕೌನ್ಸಿಲ್ ಸಭಾಂಗಣದಲ್ಲಿ ಸೋಮವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಸಿ.ವೆಂಕಟಪ್ಪ ಸೇರಿದಂತೆ ಸಂಘದ ಪದಾಧಿಕಾರಿಗಳು ನೆರವಿನ ಚೆಕ್ ಅನ್ನು ನೀಡಿದರು. ಸಂಘದ ಪದಾಧಿಕಾರಿಗಳು ಮಾತನಾಡಿ ನೆರೆ ಹಾನಿಗೆ ತುತ್ತಾಗಿದ್ದ ಕೊಡಗಿಗೆ ನೆರವು ನೀಡಲು ಪಾಲಿಕೆಯ ಗುತ್ತಿಗೆದಾರರು ಸ್ವಯಂ ಮುಂದೆ ಬಂದರು. ಹೀಗೆ ಎಲ್ಲರೂ ಶಕ್ತಿಯಾನುಸಾರ ನೆರವು ನೀಡಲು ನಿರ್ಧರಿಸಲಾಯಿತು. ಸಂಘದ ಗೌರವಾಧ್ಯಕ್ಷ ಸಿ.ವೆಂಕಟಪ್ಪ, ಹೆಚ್.ಎಲ್.ಸ್ವಾಮಿಗೌಡ, ಎನ್.ಸಿದ್ದು ಅವರು ತಲಾ 50 ಸಾವಿರ ರೂ. ನೀಡಿದರೆ, ಕೆ.ದಶರಥ, ಜಿ.ಅಶೋಕ್, ಚಲಪತಿ, ಜಗನ್ನಾಥ್, ಡಿ.ರಾಮಶೆಟ್ಟಿ, ಮೊಹಮದ್ ಷರೀಫ್ ಅವರು ತಲಾ 25 ಸಾವಿರ ರೂ. ನೀಡಿದ್ದಾರೆ. ಇದರೊಂದಿಗೆ ಮೈಸೂರು ಸರ್ಕಲ್ ಡಾಂಬರು ಮಾಲೀಕರ ಸಂಘದ ಸದಸ್ಯರು 1,22,100 ರೂ ನೀಡಿದ್ದಾರೆ.

ಇದೇ ವೇಳೆ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಮಾತನಾಡಿ, ಕೊಡಗು ಜಿಲ್ಲೆಯ ವಿವಿಧೆಡೆ ಪ್ರಕೃತಿ ವಿಕೋಪದಿಂದ ಭಾರೀ ಪ್ರಮಾಣದ ಹಾನಿಯಾಗಿ ಸಾವಿರಾರು ಜನರು ಸಂತ್ರಸ್ತರಾದ ಮಾಹಿತಿ ಅಲ್ಲಿನ ಜಿಲ್ಲಾಡಳಿತಕ್ಕೆ ತಿಳಿಯುತ್ತಿದ್ದಂತೆ ಬನ್ನು, ಬ್ರೆಡ್ ಸೇರಿದಂತೆ ತಿನಿಸುಗಳನ್ನು ರವಾನಿಸುವಂತೆ ಕೋರಿಕೊಂಡರು. ಕೂಡಲೇ ಕಾರ್ಯ ಪ್ರವೃತ್ತರಾದ ನಾವು ವಿವಿಧ ಬೇಕರಿ, ಮಳಿಗೆಗಳಿಂದ ಬನ್ನು, ಬ್ರೆಡ್ ನಮಗೆ ಬೇಕಾಗುವಷ್ಟು ಲಭ್ಯವಾಗಲಿಲ್ಲ. ಕೆಲವು ದೊಡ್ಡ ದೊಡ್ಡ ವಾಣಿಜ್ಯ ಮಳಿಗೆಗಳಲ್ಲಿ ಮೊದಲು ಹಣ ನೀಡಿದರೆ ಮಾತ್ರ ಬನ್ನು, ಬ್ರೆಡ್ ನೀಡುವುದಾಗಿ ಷರತ್ತು ಹಾಕಿದರು. ಸರ್ಕಾರದಲ್ಲಿ ಹಣವಿ ದ್ದರೂ ನಮ್ಮ ಕೈಯ್ಯಲ್ಲಿ ಹಣವಿಲ್ಲದೆ ಪರದಾಡುವಂತಾಯಿತು. ಇದರಿಂದ ತಿನಿಸು ಹಾಗೂ ಅಗತ್ಯ ವಸ್ತುಗಳನ್ನು ಸಂಗ್ರಹಿಸುವುದಕ್ಕೆ ಟೌನ್‍ಹಾಲ್‍ನಲ್ಲಿ ಕೇಂದ್ರ ತೆರೆಯಲಾಯಿತು. ಈ ನಡುವೆ ಕೊಡಗಿನ ನಿರಾಶ್ರಿತರ ಕ್ಯಾಂಪ್‍ಗಳಿಗೆ ಗೀಸರ್ ಸೇರಿದಂತೆ ಇನ್ನಿತರ ವಸ್ತು ಗಳು ಅಗತ್ಯವಾಗಿದ್ದರಿಂದ ಅಶೋಕ ರಸ್ತೆಯಲ್ಲಿ ಗೀಸರ್ ಸೇರಿ ದಂತೆ ಇನ್ನಿತರ ವಸ್ತುಗಳನ್ನು ಖರೀದಿಸಿ ಕಳುಹಿಸಿಕೊಡಲಾಗಿತ್ತು. ಇದೀಗ ಅದರ ಬಿಲ್ ಅನ್ನು ಗುತ್ತಿಗೆದಾರರು ನೀಡಿದ ನೆರವಿನಿಂದ ಪಾವತಿಸುವುದಾಗಿ ವಿವರಿಸಿದರು. ಈ ಸಂದರ್ಭದಲ್ಲಿ ನಗರ ಪಾಲಿಕೆ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Translate »