ಭಾರೀ ಮಳೆ: ಹಿನಕಲ್‍ನ ವಿವಿಧೆಡೆ ಮನೆಗೆ ನುಗ್ಗಿದ ನೀರು
ಮೈಸೂರು

ಭಾರೀ ಮಳೆ: ಹಿನಕಲ್‍ನ ವಿವಿಧೆಡೆ ಮನೆಗೆ ನುಗ್ಗಿದ ನೀರು

September 25, 2018

ಮೈಸೂರು: ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಮೈಸೂರು ನಗರದ ಹೊರವಲಯದ ಹಿನಕಲ್‍ನ ಕೆಲ ಭಾಗ ಜಲಾವೃತಗೊಂಡು ಹಲವಾರು ಮನೆಗಳಿಗೆ ನೀರು ನುಗ್ಗಿದ್ದು, ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಇಲ್ಲಿಗೆ ಭೇಟಿ ನೀಡಿ, ಪರಿಶೀಲಿಸಿದರಲ್ಲದೆ, ಮಳೆ ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಭಾನುವಾರ ರಾತ್ರಿ ಗುಡುಗು, ಸಿಡಿಲಿನೊಂದಿಗೆ ಆರಂಭವಾದ ಮಳೆ ಸೋಮವಾರ ಮುಂಜಾನೆ ಯವರೆಗೂ ಎಡೆಬಿಡದೆ ಸುರಿದ ಪರಿಣಾಮ ಕೆಲವೆಡೆ ತಗ್ಗು ಪ್ರದೇಶದಲ್ಲಿ ನೀರು ತುಂಬಿ ಕೊಂಡರೆ, ಹಲವೆಡೆ ಮನೆಗಳಿಗೆ ಮಳೆ ನುಗ್ಗಿ ಜನರು ಪರದಾಡುವಂತಾಗಿತ್ತು. ಮೈಸೂರಿನ ಹೊರವಲಯದ ಹಿನಕಲ್‍ನ ತಮ್ಮಡಗೇರಿ ಮಳೆ ಹಾಗೂ ಚರಂಡಿ ನೀರಿನಿಂದ ಸಂಪೂರ್ಣ ಆವರಿಸಿತ್ತು. ರಾತ್ರಿಯಿಡೀ ಜಾಗರಣೆ ಮಾಡಿದ್ದ ಸ್ಥಳೀಯ ನಿವಾಸಿಗಳು, ಯಾತನೆ ಅನುಭವಿಸಿದ್ದರು.

ಹಿನಕಲ್ ಗ್ರಾಮ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಗೆ ಬರಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರೂ ಆದ ಈ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು ಇಂದು ಬೆಳಿಗ್ಗೆ ಮುಡಾ ಅಧಿಕಾರಿಗಳೊಂದಿಗೆ ಮಳೆ ಹಾಗೂ ಚರಂಡಿ ನೀರು ನುಗ್ಗಿದ್ದ ಹಿನಕಲ್‍ನ ತಮ್ಮಡಗೇರಿಗೆ ಭೇಟಿ ನೀಡಿ, ಪರಿಶೀಲಿಸಿದರು. ಅಧಿಕಾರಿಗಳೊಂದಿಗೆ ಸಚಿವರು ಪರಿಶೀಲನೆಗಾಗಿ ಆಗಮಿಸಿದ ವೇಳೆ ಸ್ಥಳೀಯ ನಿವಾಸಿಗಳು ತಾವು ಮಳೆ ನೀರಿನಿಂದ ಅನುಭವಿಸಿದ ಯಾತನೆಯನ್ನು ತೋಡಿಕೊಂಡರು. ಅಲ್ಲದೆ ಜೋರಾಗಿ ಮಳೆ ಬಂದರೆ ನೀರು ಸರಾಗ ವಾಗಿ ಹರಿದು ಹೋಗುವುದಕ್ಕೆ ಚರಂಡಿ ವ್ಯವಸ್ಥೆಯಿಲ್ಲದ ಪರಿಣಾಮ ಮಳೆ ಹಾಗೂ ಚರಂಡಿ ನೀರು ರಸ್ತೆ ಯಲ್ಲಿಯೇ ಶೇಖರಣೆಯಾಗಿ ಮನೆಗಳಿಗೆ ನುಗ್ಗುತ್ತಿದೆ. ಇದರಿಂದ ಮನೆಯಲ್ಲಿರುವ ವಸ್ತುಗಳೆಲ್ಲಾ ಚರಂಡಿ ನೀರಿನಲ್ಲಿ ತೊಯ್ದು, ನಷ್ಟ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಳೆ ನೀರಿನಿಂದ ಉಂಟಾಗುತ್ತಿರುವ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಣೆ ಮಾಡುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಸ್ಥಳೀಯರಿಂದ ಸಮಸ್ಯೆ ಆಲಿಸಿ, ಸ್ಥಳ ಪರಿಶೀಲನೆ ನಡೆಸಿದ ಸಚಿವ ಜಿ.ಟಿ.ದೇವೇಗೌಡರು, ಮುಂದಿನ ದಿನಗಳಲ್ಲಿ ಮಳೆ ನೀರಿನಿಂದಾಗುವ ಅನಾಹುತ ಗಳನ್ನು ತಪ್ಪಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇಂತಹ ಪ್ರಕರಣಗಳು ಮರುಕಳಿಸದಂತೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದೇನೆ. ಅಲ್ಲದೆ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಚರಂಡಿ ನಿರ್ಮಾಣ, ಚರಂಡಿಗಳಲ್ಲಿ ತುಂಬಿಕೊಂಡಿರುವ ಹೂಳನ್ನು ಎತ್ತುವುದಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ನಿರ್ಮಿಸುವುದರೊಂದಿಗೆ ಚರಂಡಿ ಒತ್ತುವರಿಯನ್ನು ತೆರವುಗೊಳಿಸುವುದಾಗಿ ಹೇಳಿದರು. ಅಲ್ಲದೆ ಸ್ಥಳದಲ್ಲಿಯೇ ಇದ್ದ ಮುಡಾ ಅಧೀಕ್ಷಕ ಅಭಿಯಂ ತರ ಸುರೇಶಬಾಬು ಅವರಿಗೆ ಚರಂಡಿಯನ್ನು ದುರಸ್ಥಿ ಮಾಡುವಂತೆ ಸೂಚಿಸಿದರು.

Translate »