ರಾಜ್ಯ ವಿಭಜನೆಗೆ ಮತ್ತೆ ‘ಕತ್ತಿ’ ವರಸೆ!
ಮೈಸೂರು

ರಾಜ್ಯ ವಿಭಜನೆಗೆ ಮತ್ತೆ ‘ಕತ್ತಿ’ ವರಸೆ!

October 19, 2019

ಬೆಂಗಳೂರು: ಜಿಲ್ಲೆ ಗಳ ಪುನರ್ ರಚನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿ ರುವ ಬೆನ್ನಲ್ಲೇ ಬಿಜೆಪಿಯ ಹಿರಿಯ ಶಾಸಕ ಉಮೇಶ್ ಕತ್ತಿ ಉತ್ತರ ಕರ್ನಾಟಕದ ಅಭಿವೃದ್ಧಿ ಯಾಗಬೇಕಾದರೆ ರಾಜ್ಯ ವಿಭಜನೆಯಾಗಲೇ ಬೇಕೆಂದು ಒತ್ತಾಯಿಸಿದ್ದಾರೆ.

ಕರ್ನಾಟಕವನ್ನು ವಿಭಜನೆ ಮಾಡುವ ಪ್ರಸ್ತಾಪ ವಷ್ಟೇ ಅಲ್ಲ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸುದ್ದಿಗೋಷ್ಠಿಯಲ್ಲಿ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ನಮ್ಮ ರೈತರಿಗೆ ದಕ್ಕ ಬೇಕಾದ ನೀರನ್ನು ಮಹಾರಾಷ್ಟ್ರಕ್ಕೆ ನೀಡುತ್ತೇವೆ ಎಂದು ಮುಖ್ಯ ಮಂತ್ರಿಯವರು ಹೇಳಿದ್ದಾರೆ. ಅವರಿಗೇನಾದರೂ ಬುದ್ಧಿ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತಾನು ಹೋದೆಡೆ ಮತಗಳಿಸಬೇಕೆಂಬ ಏಕೈಕ ಉದ್ದೇಶದಿಂದ ನೀಡುವ ಭರವಸೆ ಗಳಿಗೆ ರಾಜ್ಯದ ಹಿತವನ್ನು ಮುಖ್ಯಮಂತ್ರಿಯವರು ಬಲಿ ಕೊಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ. ಇಂತಹವರಿಂದ ಉತ್ತರ ಕರ್ನಾಟಕ ಅಭಿವೃದ್ಧಿಯಾಗುವುದಿಲ್ಲ. ಯಾವುದೇ ಮುಖ್ಯ ಮಂತ್ರಿಗಳು ಬಂದರೂ ನಮ್ಮ ಕಡೆ ದೃಷ್ಟಿ ಹರಿಸುವುದಿಲ್ಲ. ಕೇವಲ ರಾಜಕೀಯ ಬಣ್ಣದ ಮಾತನಾಡುತ್ತಾರೆ.

ಯಡಿಯೂರಪ್ಪ ನನಗೆ ಸಂಪುಟದಲ್ಲಿ ದೊಡ್ಡ ಹುದ್ದೆ ಕೊಡುತ್ತೇನೆ ಎಂದಿದ್ದಾರೆ. ಉಪಮುಖ್ಯಮಂತ್ರಿ ಎನ್ನುವ ಸ್ಥಾನಕ್ಕೆ ಸಂವಿಧಾನ ದಲ್ಲಿ ಸ್ಥಾನಮಾನವೇ ಇಲ್ಲ. ಅಂತಹ ಸ್ಥಾನ ನನಗೆ ಬೇಡ. ನಾನು ಮುಖ್ಯಮಂತ್ರಿಯೇ ಆಗಬೇಕು. ಅದಕ್ಕಾಗಿ ಹಿಂದಿನಿಂದಲೂ ಹೋರಾಟ ನಡೆಸುತ್ತಾ ಬಂದಿದ್ದೇನೆ. ಮಹಾರಾಷ್ಟ್ರದ ನಾಲ್ಕು ಜಿಲ್ಲೆಗಳನ್ನೊಳಗೊಂಡಂತೆ 17 ಜಿಲ್ಲೆಗಳ ಹೊಸ ರಾಜ್ಯ ಅಸ್ತಿತ್ವಕ್ಕೆ ಬರಲೇಬೇಕು. ನೊಂದು ಬೆಂದಿರುವ

ನಮ್ಮ ಉತ್ತರ ಕರ್ನಾಟಕ ಜನಕ್ಕೆ ನ್ಯಾಯ ದೊರಕಿದಂತಾಗುತ್ತದೆ. ಸ್ವಂತ ಕಾಲ ಮೇಲೆ ಅಭಿವೃದ್ಧಿ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಪ್ರತ್ಯೇಕ ರಾಜ್ಯ ಹೋರಾಟಕ್ಕೆ ನಾನೇ ಕಹಳೆ ಊದಿದ್ದೇನೆ. ಅಷ್ಟೇ ಅಲ್ಲ ಅದರ ಮುಂಚೂಣಿಯನ್ನೂ ನಾನೇ ವಹಿಸಿಕೊಳ್ಳುತ್ತೇನೆ. ಕರ್ನಾಟಕ ಇಬ್ಭಾಗ ವಾಗುವವರೆಗೂ ನಾನು ವಿಶ್ರಮಿಸುವುದಿಲ್ಲ ಎಂದು ಘೋಷಿಸಿದ್ದಾರೆ.

ಬಿಜೆಪಿಗೆ ಎಲ್ಲವನ್ನೂ ಗೆಲ್ಲಬೇಕೆಂಬ ದೊಡ್ಡ ಆಸೆ. ಅದಕ್ಕಾಗಿ ಪ್ರಧಾನಿ ಯವರು ಯಾರಿಗಾದರೂ ಅನ್ಯಾಯ ಮಾಡಲು ಹೇಸರು. ಈಗಲೂ ಕರ್ನಾಟಕದ ನೀರನ್ನು ಮಹಾರಾಷ್ಟ್ರಕ್ಕೆ ಕೊಡಿಸುತ್ತೇನೆ ಎಂದು ಯಡಿ ಯೂರಪ್ಪನವರ ಬಾಯಿಯಿಂದಲೇ ಮುತ್ತು ಉದುರಿಸಿ, ಅಲ್ಲಿ ನಡೆಯು ತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಹೊಸ ಗಾಳ ಹಾಕಿದ್ದಾರೆ. ಈ ಹಿಂದೆ ನಾನೇ ಪ್ರತ್ಯೇಕ ರಾಜ್ಯದ ಕೂಗಿಗೆ ಚಾಲನೆ ನೀಡಿದ್ದೆ. ಆದರೆ ಹಿರಿಯರ ಮಾತಿಗೆ ಮನ್ನಣೆ ನೀಡಿ, ನನ್ನ ನಿರ್ಧಾರದಿಂದ ಹಿಂದೆ ಸರಿದಿದ್ದೆ. ಆದರೆ ಇನ್ನು ಮುಂದೆ ಆ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ನಮ್ಮ ಜನತೆಗೆ ನ್ಯಾಯ ದೊರಕಿಸಿಯೇ ಕೊಡುತ್ತೇನೆ ಎಂದರು. ಉತ್ತರ ಕರ್ನಾಟಕ ಜಿಲ್ಲೆಗಳ ಜೊತೆಗೆ ಮಹಾರಾಷ್ಟ್ರದ ಕೊಲ್ಹಾಪುರ, ಸೊಲ್ಲಾಪುರ ಹಾಗೂ ಸಾಂಗ್ಲಿ ಜಿಲ್ಲೆಗಳನ್ನು ಸೇರಿಸಿಕೊಂಡು ಪ್ರತ್ಯೇಕ ರಾಜ್ಯ ರಚಿಸಿದರೆ ಈ ಭಾಗದ ಅಭಿವೃದ್ಧಿಯಾಗುತ್ತದೆ ಎಂದು ಒತ್ತಾಯಿಸಿದರು. ಮಹದಾಯಿ ಹರಿಯುವ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಇದರ ಜೊತೆ ಕೇಂದ್ರ ದಲ್ಲಿಯೂ ಸರ್ಕಾರವಿದೆ. ಈ ಅವಕಾಶವನ್ನು ಬಳಸಿಕೊಂಡು ತಕ್ಷಣ ಮಹದಾಯಿ ಬಿಕ್ಕಟ್ಟು ಬಗೆಹರಿಸಲು ಕ್ರಮಕೈಗೊಳ್ಳಬೇಕು ಎಂದು ಕೋರಿದರು.

Translate »