ಮೈಸೂರು: ಅಪಾಯಕಾರಿ ಕಿಕಿ ಡಾನ್ಸ್ ಮಾಡುವ ಮೂಲಕ ಬಿಗ್‍ಬಾಸ್ ಬೆಡಗಿ ನಿವೇದಿತಾಗೌಡ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಈಗಾಗಲೇ ಬಲು ಅಪಾಯಕಾರಿ ಕಿಕಿ ಜಾಲೆಂಜ್ ವಿರುದ್ಧ ಮುಂಬೈ ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಅಲ್ಲದೆ, ಈ ಡ್ಯಾನ್ಸ್ ಮಾಡದಂತೆ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಆದರೂ ಸೋಷಿಯಲ್ ಮೀಡಿಯಾ ದಲ್ಲಿ ‘ಕಿಕಿ ಡಾನ್ಸ್’ ಟ್ರೆಂಡ್ ಯುವ ಸಮೂಹದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಸೆಲಿಬ್ರಿಟಿಗಳು ಈ ಸವಾಲು ಸ್ವೀಕರಿಸುತ್ತಿದ್ದು, ಮೊನ್ನೆಯಷ್ಟೆ ಬಾಲಿವುಡ್ ನಟಿ ಅದಾಶರ್ಮಾ ಕಿಕ್ ಡಾನ್ಸ್ ಮಾಡಿ, ಸಾರ್ವ ಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದರು.
ಕಿಕಿ ಚಾಲೆಂಜ್ ಎಂದರೇನು:ಚಲಿಸುವ ಕಾರಿನಿಂದ ಇಳಿದು, ಅದರ ವೇಗಕ್ಕೆ ತಕ್ಕಂತೆ ಇಂಗ್ಲಿಷ್ ಹಾಡಿಗೆ ಡಾನ್ಸ್ ಮಾಡಿ, ಮತ್ತೆ ಕಾರಿನಲ್ಲಿ ಕುಳಿತುಕೊಳ್ಳಬೇಕು. ಈ ತರಹದ ಕಿಕಿ ಡ್ಯಾನ್ಸ್ ಮಾಡುವ ಮೂಲಕ ನಿವೇದಿತಾ ನೆಟ್ಟಿಗರ ಟೀಕೆಗೆ ಗುರಿಯಾಗಿದ್ದಾರೆ.
ಮುಂಬೈ, ದೆಹಲಿ ಹಾಗೂ ಮಹಾರಾಷ್ಟ್ರಗಳಲ್ಲಿ ಸದ್ದು ಮಾಡಿದ್ದ ಕಿಕಿ ಚಾಲೆಂಜ್ ಇದೀಗ ಕರ್ನಾಟಕಕ್ಕೂ ಕಾಲಿಟ್ಟಿದೆ. ಬ್ಯಾನ್ ಆಗಿರುವ ಈ ಡಾನ್ಸ್ ಮಾಡುವುದು ತರವಲ್ಲ. ಸೆಲಿಬ್ರಿಟಿ ಗಳಾದ ನೀವು ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಆದರೆ, ನೀವೇ ಹೀಗೆ ಮಾಡಿದರೆ, ನಿಮ್ಮನ್ನು ಹಿಂಬಾಲಿಸುವ ಯುವ ಸಮೂಹ ಹಾದಿ ತಪ್ಪುತ್ತದೆ ಎಂದು ನಿವೇದಿತಾ ಅವರನ್ನು ಪ್ರಶ್ನಿಸಿದ್ದಾರೆ.