ಬೆಂಗಳೂರು: ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐ ನಿರ್ದೇಶಕರ ಬದಲಾವಣೆ ವಿರೋಧಿಸಿ, ಕಾಂಗ್ರೆಸ್ ಕರೆ ಕೊಟ್ಟಿದ್ದ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಗೈರುಹಾಜರಾದ ಪಕ್ಷದ ನಗರ ಶಾಸಕರಿಗೆ ಶೋಕಾಸ್ ನೋಟೀಸ್ ನೀಡಲು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮುಂದಾಗಿದ್ದಾರೆ. ಶಾಸಕರ ಗೈರಿನಿಂದ ಪಕ್ಷದ ದೆಹಲಿ ವರಿಷ್ಠರು ತೀವ್ರ ಅಸಮಾಧಾನಗೊಂಡಿದ್ದು, ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಿರಲು ಕಾರಣ ತಿಳಿಸುವಂತೆ ಸೂಚಿಸಿ ನೋಟೀಸ್ ನೀಡಲಾಗುತ್ತಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನಗರದಲ್ಲಿ ನಡೆದ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಪ್ರತಿಭಟನೆಗೆ ಹಾಜರಾಗದ ಶಾಸಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಅವರು ನೀಡಿದ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿರುವ ದಿನೇಶ್ ಗುಂಡೂರಾವ್, ಶೋಕಾಸ್ ನೋಟೀಸ್ ಕಳುಹಿಸಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಈಗ ನೋಟೀಸ್ ನೀಡದೆ ಫಲಿತಾಂಶದ ನಂತರ ಈ ಕುರಿತು ಕ್ರಮ ಕೈಗೊಳ್ಳಲು ದಿನೇಶ್ ಚಿಂತನೆ ನಡೆಸಿದ್ದಾರೆ.