ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಸ ನಿರ್ವಹಣೆ ಸಮಸ್ಯೆ ಉಲ್ಬಣಿಸದಂತೆ ಕಟ್ಟೆಚ್ಚರ ವಹಿಸುವ ನಿಟ್ಟಿನಲ್ಲಿ ನಗರಪಾಲಿಕೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, 50 ಕೆಜಿಗಿಂತ ಹೆಚ್ಚಾಗಿ ಹಸಿ ಕಸ ಉತ್ಪತ್ತಿಯಾಗುವ ಸ್ಥಳಗಳಲ್ಲಿ ಮುಂದಿನ ಆರು ತಿಂಗಳಲ್ಲಿ ಕಡ್ಡಾಯವಾಗಿ ಕಾಂಪೋಸ್ಟ್ ಗೊಬ್ಬರ ತಯಾರಿಕಾ ಘಟಕ ಸ್ಥಾಪಿಸುವ ಸಂಬಂಧ ಆದೇಶ ಹೊರಡಿಸಲು ನಿರ್ಧರಿಸಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಸ ನಿರ್ವಹಣೆಯ ಸಮಸ್ಯೆ ಸರ್ಕಾರ ಹಾಗೂ ಬಿಬಿಎಂಪಿಗೆ ತೀವ್ರ ತಲೆನೋವಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಸುಪ್ರಿಂ ಕೋರ್ಟ್ ನಿರ್ದೇಶನವೊಂದನ್ನು ನೀಡಿದ್ದು, ಹೆಚ್ಚಾಗಿ ಕಸ ಸಂಗ್ರಹವಾಗುವ ಸ್ಥಳದಲ್ಲಿಯೇ ಕಾಂಪೋಸ್ಟ್ ಗೊಬ್ಬರ ತಯಾರಿಕಾ ಘಟಕ ಸ್ಥಾಪಿಸುವುದು ಸೂಕ್ತ ಎಂದ ಅಭಿಪ್ರಾಯ ಪಟ್ಟಿರುವ ಹಿನ್ನೆಲೆಯಲ್ಲಿ ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ 50ಕೆಜಿಗೂ ಹೆಚ್ಚು ಹಸಿ ಕಸ ಉತ್ಪತ್ತಿಯಾಗುವ ಸ್ಥಳಗಳಲ್ಲಿಯೇ ಕಾಂಪೋಸ್ಟ್ ಗೊಬ್ಬರ ತಯಾರಿಕಾ ಘಟಕ ಸ್ಥಾಪಿಸುವುದಕ್ಕೆ ಅ.30ರಂದು ನಗರ ಪಾಲಿಕೆ ಅಧಿಸೂಚನೆ ಹೊರಡಿಸಲಿದೆ. ಇದರಿಂದ ಮೈಸೂರು ನಗರದಲ್ಲಿರುವ ಅಪಾರ್ಟ್‌ಮೆಂಟ್‌ಗಳು, ಆಸ್ಪತ್ರೆಗಳು, ಕಲ್ಯಾಣಮಂಟಪ ಗಳು, ಹೊಟೇಲ್, ಬೇಕರಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಉತ್ಪತ್ತಿಯಾಗುತ್ತಿದ್ದ ಹಸಿ ಕಸ ನಿರ್ವಹಣೆಯ ಸಮಸ್ಯೆ ನಿವಾರಣೆಯಾಗಲಿದೆ.
6 ತಿಂಗಳು ಗಡುವು: 50 ಕೆಜಿಗಿಂತ ಹೆಚ್ಚು ಹಸಿ ಕಸ ಉತ್ಪತ್ತಿಯಾಗುವ ಸ್ಥಳ ಗಳಲ್ಲಿ ಕಡ್ಡಾಯವಾಗಿ ಕಾಂಪೋಸ್ಟ್ ಗೊಬ್ಬರ ತಯಾರಿಕಾ ಘಟಕ ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ ಮೈಸೂರು ನಗರ ಪಾಲಿಕೆ ಆರು ತಿಂಗಳ ಕಾಲ ಗಡುವು ನೀಡಲಿದೆ.
ಯಾವ ಯಾವ ಸ್ಥಳದಲ್ಲಿ 50 ಕೆಜಿಗಿಂತ ಹೆಚ್ಚಾಗಿ ಹಸಿಕಸ ಸಂಗ್ರಹವಾಗುತ್ತದೆ ಎಂಬ ಮಾಹಿತಿ ಪಾಲಿಕೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಇಂತಹ ಸ್ಥಳಗಳಿಗೆ ತಿಳುವಳಿಕೆಯ ಪತ್ರ ನೀಡಿ ಕಾಂಪೋಸ್ಟ್ ಗೊಬ್ಬರ ತಯಾರಿಸುವ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಅರಿವು ಮೂಡಿಸಲಾಗುತ್ತದೆ. ನಂತರ ಆರು ತಿಂಗ ಳಲ್ಲಿ ಕಡ್ಡಾಯವಾಗಿ ಕಾಂಪೋಸ್ಟ್ ಗೊಬ್ಬರ ತಯಾರಿಕಾ ಘಟಕ ನಿರ್ಮಿಸದಿದ್ದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡ ಲಾಗುತ್ತದೆ.
ಸೀವೆಜ್ ಫಾರಂ ಮೇಲಿನ ಒತ್ತಡ ಕಡಿಮೆ: ಕಲ್ಯಾಣಮಂಟಪಗಳು, ಆಸ್ಪತ್ರೆ ಗಳು, ಅಪಾರ್ಟ್‍ಮೆಂಟ್‍ಗಳು, ಅತಿಥಿ ಗೃಹ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಕಾಂಪೋಸ್ಟ್ ಗೊಬ್ಬರ ತಯಾರಿಕಾ ಘಟಕ ಸ್ಥಾಪಿಸುವುದರಿಂದ ವಿದ್ಯಾರಣ್ಯ ಪುರಂನಲ್ಲಿರುವ ಸೀವೆಜ್ ಫಾರಂ ಮೇಲಿನ ಒತ್ತಡ ನಿವಾರಣೆಯಾಗುತ್ತದೆ. ಅಲ್ಲದೆ ಅಂದು ಉತ್ಪಾದನೆಯಾಗುವ ಹಸಿಕಸ ಕಾಂಪೋಸ್ಟ್ ಗೊಬ್ಬರ ತಯಾರಿಕಾ ಘಟಕ ಸೇರುವುದರಿಂದ ವಾಸನೆ ಬರು ವುದು ತಡೆಗಟ್ಟಬಹುದಾಗಿದೆ.
ವಿನಾಯಿತಿ ನೀಡುವುದಕ್ಕೆ ಕ್ರಮ
ಕಾಂಪೋಸ್ಟ್ ಗೊಬ್ಬರ ತಯಾರಿಕಾ ಘಟಕ ಕುರಿತಂತೆ `ಮೈಸೂರು ಮಿತ್ರ’ನೊಂದಿಗೆ ನಗರಪಾಲಿಕೆಯ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು ಮಾತನಾಡಿ, ಮೈಸೂರು ನಗರದಲ್ಲಿ ಹೆಚ್ಚಿನ ಪ್ರಮಾಣದ ಹಸಿಕಸ ಉತ್ಪತ್ತಿಯಾಗುವ ಸ್ಥಳದಲ್ಲಿ ಕಡ್ಡಾಯವಾಗಿ ಕಾಂಪೋಸ್ಟ್ ಗೊಬ್ಬರ ತಯಾರಿಕಾ ಘಟಕ ಸ್ಥಾಪಿಸುವುದಕ್ಕೆ ನಗರ ಪಾಲಿಕೆ ನೀಡುತ್ತಿರುವ ಸೂಚನೆಯ ಹಿಂದೆ ಸುಪ್ರೀಂಕೋರ್ಟ್ ನಿರ್ದೇಶನವಿದೆ.
ಘನತ್ಯಾಜ್ಯ ನಿರ್ವಹಣೆ ಆಕ್ಟ್ ಅಡಿಯಲ್ಲಿ ಕಾಂಪೋಸ್ಟ್ ಗೊಬ್ಬರ ತಯಾರಿಕಾ ಘಟಕವನ್ನು ಸ್ಥಾಪಿಸುವುದು ಕಡ್ಡಾಯವಾಗಿದೆ. ಮೈಸೂರು ನಗರದಲ್ಲಿ 150 ಅಪಾರ್ಟ್‌ಮೆಂಟ್‌ಗಳಿವೆ. ಇವುಗಳಿಂದ 7.5 ಟನ್ ಹಸಿಕಸ ಉತ್ಪತ್ತಿಯಾಗು ತ್ತಿದೆ. ಈ ಕಸವನ್ನು ಕಾಂಪೋಸ್ಟ್ ಗೊಬ್ಬರವಾಗಿ ಆಯಾ ಸ್ಥಳದಲ್ಲಿಯೇ ಪರಿವರ್ತಿಸಿದರೆ ನಗರ ಪಾಲಿಕೆಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ.
ಅಲ್ಲದೆ ತಯಾರಾದ ಕಾಂಪೋಸ್ಟ್ ಗೊಬ್ಬರಕ್ಕೆ ಬೇಡಿಕೆ ಇರುವುದರಿಂದ ಮಾರಾಟ ಮಾಡಲು ಸುಲಭವಾಗಲಿದೆ. ಅಲ್ಲದೆ ಅಪಾರ್ಟ್‍ಮೆಂಟ್‍ಗಳ ಮುಂದೆ ಇರುವ ಉದ್ಯಾನ ವನಗಳಲ್ಲಿ ಬೆಳೆದಿರುವ ಗಿಡಗಳಿಗೆ ಕಾಂಪೋಸ್ಟ್ ಗೊಬ್ಬರ ಬಳಸಿದರೆ ಗಿಡಗಳ ಗುಣಮಟ್ಟವನ್ನು ಕಾಯ್ದುಕೊಳ್ಳಬಹುದಾಗಿದೆ. ಇದು ಉತ್ತಮ ಯೋಜನೆಯಾಗಿದ್ದು, ಸಾರ್ವಜನಿಕರು ಪಾಲಿಕೆಯೊಂದಿಗೆ ಕೈಜೋಡಿಸಬೇಕಾಗಿದೆ. ಅಪಾರ್ಟ್‍ಮೆಂಟ್‍ಗಳು, ಹೊಟೇಲ್‍ಗಳು, ಕಲ್ಯಾಣಮಂಟಪಗಳಲ್ಲಿ ಕಾಂಪೋಸ್ಟ್ ಗೊಬ್ಬರ ತಯಾರಿಕಾ ಘಟಕ ಸ್ಥಾಪಿಸಿ ವೈಜ್ಞಾನಿಕವಾಗಿ ಹಸಿಕಸವನ್ನು ವಿಲೇವಾರಿ ಮಾಡಿ ಕಾಂಪೋಸ್ಟ್ ಗೊಬ್ಬರ ತಯಾರಿಸಿದರೆ ಅಂತಹ ಸಂಸ್ಥೆಗೆ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ನೀಡುವ ಆಲೋಚನೆ ಪಾಲಿಕೆ ಮುಂದಿದೆ. ಈ ಸಂಬಂಧ ಕೌನ್ಸಿಲ್ ಸಭೆಯಲ್ಲಿ ಈ ಪ್ರಸ್ತಾಪ ಮುಂದಿಟ್ಟು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ವಿವರಿಸಿದರು.
– ಎಂ.ಟಿ.ಯೋಗೇಶ್ ಕುಮಾರ್