ಮೈಸೂರು: ಯುವತಿ ಮೇಲೆ ಹಲ್ಲೆ, ಲೈಂಗಿಕ ದೌರ್ಜನ್ಯ ನಡೆಸಿ, ಚಿನ್ನದ ಸರ ಮತ್ತು ಬೆಲೆಬಾಳುವ ಮೊಬೈಲ್ ಕಳವು ಮಾಡಿ ಪರಾರಿಯಾಗಿದ್ದ ಮೂವರು ಖದೀಮರನ್ನು ಮೈಸೂರಿನ ಭರತ್ ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಭರತ್‍ನಗರದ ಇಮ್ರಾನ್‍ಪಾಷ, ರೆಹ ಮತ್ ಷರೀಫ್, ಮುಬಾರಕ್ ಬಂಧಿತರು. ಅಕ್ಟೋಬರ್ 25ರಂದು ಶಕ್ತಿನಗರದ ಯುವಕ, ಯುವತಿ ಬೈಕ್‍ನಲ್ಲಿ ಸಂಜೆ ಚಾಮುಂಡಿಬೆಟ್ಟಕ್ಕೆ ಚಾಮುಂಡೇಶ್ವರಿ ದೇವಿ ದರ್ಶನಕ್ಕೆ ತೆರಳಿದ್ದರು. ವಾಪಸ್ ಬರುವಾಗ ನಗರ ಸೌಂದರ್ಯ ವೀಕ್ಷಣೆ ಮಾಡುವ ವಿವ್ ಪಾಯಿಂಟ್ ಬಳಿ ಬೈಕ್ ನಿಲ್ಲಿಸಿ, ಇಬ್ಬರೂ ನಂದಿಗೆ ಹೋಗುವ ಮಾರ್ಗದಲ್ಲಿ ವಿಹಾರದಲ್ಲಿದ್ದರು.
ಈ ವೇಳೆ ಹಿಂದಿನಿಂದ ಬೈಕ್‍ನಲ್ಲಿ ಬಂದ ಮೂವರು, ಇವರನ್ನು ಬೆದರಿಸಿ, ಚಾಕು ತೋರಿಸಿ, ಯುವತಿ ಮೇಲೆ ಹಲ್ಲೆ ನಡೆಸಿ, ಲೈಂಗಿಕ ಕಿರುಕುಳ ನೀಡಿ, 9 ಗ್ರಾಂ ಚಿನ್ನದ ಸರ, ಬೆಲೆಬಾಳುವ ಮೊಬೈಲ್ ಅನ್ನು ಕಿತ್ತು ಕೊಂಡು ಪರಾರಿಯಾಗಿದ್ದರು. ಈ ಘಟನೆ ಬಗ್ಗೆ ಕೆ.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಳಿಸಿದ ಪೊಲೀಸರು, ಮೈಸೂರು ನಗರ ಮತ್ತು ಜಿಲ್ಲಾ ವ್ಯಾಪ್ತಿಯ ಎಲ್ಲಾ ಠಾಣೆಗಳಿಗೆ ಮಾಹಿತಿ ನೀಡಿದ್ದರು. ಮೈಸೂರು ಗ್ರಾಮಾಂತರ ಪೊಲೀ ಸರು ಭರತ್‍ನಗರದಲ್ಲಿ ಮಂಗಳವಾರ ಕಾರ್ಯಾಚರಣೆ ನಡೆಸಿ, ಈ ಮೂವರು ಆರೋಪಿಗಳನ್ನು ಬಂಧಿಸಿ, ಕಳವು ಮಾಡಿದ್ದ ಚಿನ್ನಾಭರಣ, ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್‍ವಶಕ್ಕೆ ಪಡೆದಿದ್ದಾರೆ.
ಇದರಲ್ಲಿ ರೆಹಮತ್ ಷರೀಫ್ ಹಳೇ ಪ್ರಕರಣವೊಂದರ ಆರೋಪಿಯಾಗಿರುವ ಬಗ್ಗೆ ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ಪತ್ತೆ ಕಾರ್ಯದಲ್ಲಿ ಮೈಸೂರು ಗ್ರಾಮಾಂತರ ಠಾಣೆ ಇನ್ಸ್‍ಪೆಕ್ಟರ್ ಕರೀಂ ರಾವತ್ತರ್, ಸಬ್‍ಇನ್ಸ್‍ಪೆಕ್ಟರ್ ಜಯಪ್ರಕಾಶ್ ಹಾಗೂ ಇತರೆ ಸಿಬ್ಬಂದಿಗಳಿದ್ದರು.