ಇತಿಹಾಸ ಸೃಷ್ಟಿಸಿದ ಕೆ.ಆರ್.ಪೇಟೆ ನಾರಾಯಣಗೌಡ
ಮೈಸೂರು

ಇತಿಹಾಸ ಸೃಷ್ಟಿಸಿದ ಕೆ.ಆರ್.ಪೇಟೆ ನಾರಾಯಣಗೌಡ

December 10, 2019
  • `ಕಮಲ’ ಹಿಡಿದೂ ಹ್ಯಾಟ್ರಿಕ್ ಸಾಧನೆ
  • ಜೆಡಿಎಸ್ ಭದ್ರಕೋಟೆ ಛಿದ್ರ ಕಾಂಗ್ರೆಸ್‍ಗೆ ಹ್ಯಾಟ್ರಿಕ್ ಸೋಲು

ಕೆ.ಆರ್.ಪೇಟೆ,ಡಿ.9(ನಾಗಯ್ಯ/ಶ್ರೀನಿ ವಾಸ್)- ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾ ಯಣ ಗೌಡರು ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಪ್ರಥಮ ಶಾಸಕ ಎಂಬ ದಾಖಲೆ ನಿರ್ಮಿಸುವುದರ ಜೊತೆಗೆ ಜೆಡಿಎಸ್ ಭದ್ರಕೋಟೆಯಲ್ಲಿ ಕಮಲ ಅರಳಿಸಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ತವರಿನಲ್ಲಿ ಬಿಜೆಪಿ ಖಾತೆ ತೆರೆದ ಕೀರ್ತಿಗೂ ಪಾತ್ರರಾಗಿದ್ದಾರೆ.

ಈವರೆವಿಗೂ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‍ನದ್ದೇ ಪ್ರಾಬಲ್ಯ ವಾಗಿತ್ತು. ಬಿಜೆಪಿ ಈ ಕ್ಷೇತ್ರದಲ್ಲಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿತ್ತು. ಯಡಿಯೂರಪ್ಪನವರ ತವರಾದರೂ ಇಲ್ಲಿ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂ ತಹ ಸ್ಥಿತಿಯಲ್ಲಿತ್ತು. ಆದರೆ, ಈ ಉಪ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯ ಪ್ರಥಮ ಗೆಲುವಿಗೆ ಕೆ.ಆರ್.ಪೇಟೆ ನಾಂದಿ ಹಾಡಿದೆ.

ಈ ಹಿಂದೆ ಎರಡು ಚುನಾವಣೆಗಳಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ಸಿ. ನಾರಾಯಣಗೌಡರ ವಿರುದ್ಧ ಸ್ಪರ್ಧಿಸಿ ಸೋಲನ್ನನುಭವಿಸಿದ್ದ ಕಾಂಗ್ರೆಸ್‍ನ ಕೆ.ಬಿ.ಚಂದ್ರಶೇಖರ್, ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ಅದೇ ನಾರಾಯಣ ಗೌಡರ ವಿರುದ್ಧ ಮತ್ತೆ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಕಣಕ್ಕಿಳಿದಿದ್ದರು. ನಾರಾಯಣ ಗೌಡರ ಪಕ್ಷ ಬದಲಾವಣೆ ಹಾಗೂ ಎರಡು ಬಾರಿ ತಮ್ಮ ಸೋಲಿನ ಅನುಕಂಪ ದಿಂದಾಗಿ ಈ ಬಾರಿ ಗೆಲ್ಲುವ ನಿರೀಕ್ಷೆ ಹೊಂದಿದ್ದ ಚಂದ್ರಶೇಖರ್ ಹ್ಯಾಟ್ರಿಕ್ ಸೋಲು ಅನುಭವಿಸುವುದರ ಜೊತೆಗೆ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಅದೇ ವೇಳೆ ನಾರಾಯಣಗೌಡ ಹ್ಯಾಟ್ರಿಕ್ ಗೆಲು ವಿನ ಮೂಲಕ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿದರು.

ಜೆಡಿಎಸ್ ಶಾಸಕರಾಗಿದ್ದ ನಾರಾಯಣ ಗೌಡ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಲ್ಲದೇ, ಹಿಂದಿನ ಸ್ಪೀಕರ್ ಆದೇಶ ದಂತೆ ಅನರ್ಹ ಶಾಸಕರಾಗಿದ್ದರು. ಸ್ಪೀಕರ್ ಆದೇಶವನ್ನು ಸುಪ್ರೀಂ ಕೋರ್ಟ್ ಕೂಡಾ ಎತ್ತಿ ಹಿಡಿದಿತ್ತು. ಅನರ್ಹರಾಗಿ ಬಿಜೆಪಿ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿ ಯಲು ಕಾರಣರಾದ ಕಾಂಗ್ರೆಸ್ ಮತ್ತು ಜೆಡಿಎಸ್‍ನ 17 ಮಂದಿಯ ಪೈಕಿ ಒಬ್ಬ ರಾಗಿದ್ದ ನಾರಾಯಣಗೌಡರನ್ನು ಗೆಲ್ಲಿ ಸಲೇಬೇಕು ಹಾಗೂ ಯಡಿಯೂ ರಪ್ಪನವರ ತವರಿನಲ್ಲಿ ಕಮಲ ಅರಳಿಸ ಬೇಕು ಎಂಬ ಛಲವನ್ನು ಬಿಜೆಪಿ ಹೊಂದಿತ್ತು.

ಕೆ.ಆರ್.ಪೇಟೆಯಲ್ಲಿ ಬಿಜೆಪಿ ಖಾತೆ ತೆರೆಯಲೇಬೇಕು ಎಂಬ ಛಲದೊಂದಿಗೆ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ನಾಮಪತ್ರ ಸಲ್ಲಿಕೆ ದಿನದಿಂದ ಕೊನೆಯವರೆಗೂ ಕ್ಷೇತ್ರದಲ್ಲೇ ಬೀಡುಬಿಟ್ಟು ಪ್ರತಿ ಹಳ್ಳಿಗೂ ಭೇಟಿ ನೀಡಿ ಮತದಾರರ ಮನವೊಲಿಸುವಲ್ಲಿ ಸಫಲರಾಗಿದ್ದರು. ಮೊದಲಿಗೆ ಈ ಕ್ಷೇತ್ರದ ಉಸ್ತುವಾರಿಯನ್ನು ಸಚಿವ ಮಾಧುಸ್ವಾಮಿ ಅವರಿಗೆ ನೀಡಲಾಗಿ ತ್ತಾದರೂ, ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆ ಕಾರಣದಿಂದಾಗಿ ಅವರನ್ನು ಬದ ಲಾಯಿಸಿ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಅವರಿಗೆ ಈ ಕ್ಷೇತ್ರದ ಜವಾ ಬ್ದಾರಿ ನೀಡಲಾಗಿತ್ತು. ಇವರ ಜೊತೆಗೆ ನೆರೆಯ ಹಾಸನ ಕ್ಷೇತ್ರದ ಶಾಸಕ ಪ್ರೀತಂ ಗೌಡ ಸಹ ಸೇರ್ಪಡೆಯಾದರು. ಈ ತ್ರಿಮೂರ್ತಿ ಗಳು ಕ್ಷೇತ್ರದಲ್ಲಿ ಪ್ರವಾಸ ಮಾಡಿ ಜೆಡಿಎಸ್ ಭದ್ರಕೋಟೆಯಲ್ಲಿ ಕಮಲ ಅರಳಿಸಲು ರೂಪಿಸಿದ ಕಾರ್ಯತಂತ್ರ ಫಲ ನೀಡಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂ ರಪ್ಪ, ಸಚಿವರಾದ ಶ್ರೀರಾಮುಲು, ಆರ್. ಅಶೋಕ್, ಡಿಸಿಎಂ ಗೋವಿಂದಕಾರ ಜೋಳ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಪ್ರಚಾರ ಮಾಡಿದ್ದರು. ಈ ಕ್ಷೇತ್ರದಲ್ಲಿ ಪ್ರಚಾರ ಮಾಡಿದ ಎಲ್ಲರೂ ಮಾಡಿದ ಮನವಿಯೆಂದರೆ `ಯಡಿಯೂ ರಪ್ಪನವರ ತವರಿನಲ್ಲಿ ಕಮಲ ಅರಳಿಸಿ’ ಎಂಬುದೇ ಆಗಿತ್ತು. ಕೊನೆಗೂ ಕೆ.ಆರ್. ಪೇಟೆಯಲ್ಲಿ ಕಮಲ ಅರಳಿದೆ.

ಇನ್ನು 2 ಬಾರಿ ಸೋತು ಮೂರನೇ ಬಾರಿ ಅದೃಷ್ಟಪರೀಕ್ಷೆಗಿಳಿದಿದ್ದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಸೇರಿ ದಂತೆ ಕಾಂಗ್ರೆಸ್ ಮುಖಂಡರು ನಡೆಸಿದ ಪ್ರಚಾರ ಯಾವುದೇ ಫಲ ನೀಡಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟರು.

ತಮ್ಮ ಪಕ್ಷದ ಶಾಸಕರಾಗಿದ್ದ ನಾರಾ ಯಣಗೌಡರನ್ನು ಸೋಲಿಸಲೇಬೇಕು ಎಂದು ಪಣತೊಟ್ಟಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಹೆಚ್.ಡಿ.ರೇವಣ್ಣ, ಸಾ.ರಾ. ಮಹೇಶ್, ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಸಿ.ಎಂ. ಕುಮಾರಸ್ವಾಮಿ ಪುತ್ರ ನಿಖಿಲ್‍ಕುಮಾರ ಸ್ವಾಮಿ ಮುಂತಾದ ಜೆಡಿಎಸ್‍ನ ಘಟಾನುಘಟಿ ನಾಯಕರೇ ಕೆ.ಆರ್.ಪೇಟೆಗೆ ಬಂದು ಅಬ್ಬರದ ಪ್ರಚಾರ ನಡೆಸಿದರಾದರೂ ಆ ಪಕ್ಷದ ಅಭ್ಯರ್ಥಿ ಬಿ.ಎಲ್.ದೇವರಾಜು ಗೆಲುವು ಸಾಧಿಸಲು ಸಾಧ್ಯವೇ ಆಗಲಿಲ್ಲ. ಬದಲಿಗೆ ಜೆಡಿಎಸ್‍ನ ಭದ್ರಕೋಟೆ ಛಿದ್ರವಾಯಿತು.

Translate »