ಸಕ್ಕರೆ ನಾಡಲ್ಲಿ ಅರಳಿದ ‘ಕಮಲ’
ಮಂಡ್ಯ

ಸಕ್ಕರೆ ನಾಡಲ್ಲಿ ಅರಳಿದ ‘ಕಮಲ’

December 10, 2019

ಮಂಡ್ಯ, ಡಿ.9- ಸಕ್ಕರೆ ನಾಡು ಮಂಡ್ಯದಲ್ಲಿ ಇದೇ ಮೊದಲ ಬಾರಿಗೆ ಕಮಲ ಅರಳಿದ್ದು, ಜಿಲ್ಲಾದ್ಯಂತ ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ.

ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡರು ಗೆಲುವು ಸಾಧಿಸುತ್ತಿದ್ದಂತೆ ಮಂಡ್ಯ, ಮಳವಳ್ಳಿ, ಮದ್ದೂರು, ಪಾಂಡವಪುರ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ, ನಾಗಮಂಗಲ ಸೇರಿದಂತೆ ಜಿಲ್ಲಾದ್ಯಂತ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದ ಬಗ್ಗೆ ವರದಿಯಾಗಿದೆ.

ಮಂಡ್ಯ: ಕೆ.ಆರ್.ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಗೆಲುವು ಸಾಧಿಸುತ್ತಿದ್ದಂತೆಯೇ ಮಂಡ್ಯ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರ ಮಾಚರಣೆ ನಡೆಸಿದರು. ನಗರದ ಜೆಸಿ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಸರ್ಕಾರದ ಪರ ಘೋಷಣೆ ಕೂಗಿ, ವಿಜಯೋತ್ಸವ ಆಚರಿಸಿದರು.

ಬಿಜೆಪಿ ನಗರಾಧ್ಯಕ್ಷ ಎಚ್.ಆರ್.ಅರವಿಂದ್ ಮಾತನಾಡಿ, ಮಂಡ್ಯ ಜಿಲ್ಲೆ ರಾಜಕೀಯ ಇತಿಹಾಸ ದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಕೆ.ಆರ್.ಪೇಟೆ ಜನತೆಗೆ ಬಿಜೆಪಿ ಮುಖಂಡರು ಚಿರಋಣಿಯಾಗಿರು ತ್ತಾರೆ. ಜಿಲ್ಲೆಯಲ್ಲಿ ಬಿಜೆಪಿ ಎಂದೆಂದಿಗೂ ಗೆಲುವು ಸಾಧಿಸಲು ಬಿಡಲ್ಲ ಎನ್ನುವ ಪಟ್ಟಭದ್ರ ಹಿತಾಸಕ್ತಿ ಗಳಿಗೆ ತಕ್ಕ ಉತ್ತರ ಸಿಕ್ಕಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರ ಅಭಿವೃದ್ಧಿ ಕಾರ್ಯ ಕಂಡು ಉಪಚುನಾವಣೆಯಲ್ಲಿ ಮತದಾರರು ಬಿಜೆಪಿ ಬೆಂಬಲಿಸಿ, ವಿರೋಧ ಪಕ್ಷದವರಿಗೆ ಹೀನಾಯ ಸೋಲುಣಿಸಿದ್ದಾರೆ. ಆಡಳಿತ ಯಂತ್ರ ಸುಗಮ ವಾಗಿ ನಡೆಸುವಂತೆ ಅನುವು ಮಾಡಿಕೊಟ್ಟ ಎಲ್ಲಾ ಮತದಾರರಿಗೆ ಜನಪರ ಯೋಜನೆಗಳ ನೀಡುವ ಮೂಲಕ ಅಭಿವೃದ್ಧಿಯತ್ತ ಸಾಗಲಿದೆ ಎಂದರು.

ಮೈತ್ರಿ ಸರ್ಕಾರ ಆಡಳಿತದಿಂದ ಬೇಸರಗೊಂಡು ರಾಜೀನಾಮೆ ನೀಡಿ, ಬಿಜೆಪಿಯಿಂದ ಚುನಾವಣೆ ಎದುರಿಸಿ, ಗೆಲುವು ಸಾಧಿಸಿದ ಎಲ್ಲಾ ನೂತನ ಶಾಸಕರು ಉತ್ತಮ ಆಡಳಿತ ನೀಡಲಿ, ಮಂಡ್ಯ ಜಿಲ್ಲೆಗೆ ಬಿಜೆಪಿ ಪಕ್ಷದ ಜಿಲ್ಲಾ ಉಸ್ತುವಾರಿ ಸಚಿವರಾಗಿ ನಾರಾಯಣ ಗೌಡರು ಬಂದು, ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿ ಎಂದು ಆಶಿಸಿದರು. ಈ ಸಂದರ್ಭ ವರದರಾಜ್, ಹನುಮಂತು, ನರಸಿಂಹಚಾರ್ ಮತ್ತಿತರರಿದ್ದರು.

ಕೆ.ಆರ್.ಪೇಟೆ: ಪಟ್ಟಣದ ಪ್ರಮುಖ ಸರ್ಕಲ್ ನಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರೆ, ನೂತನ ಶಾಸಕ ಕೆ.ಸಿ.ನಾರಾಯಣಗೌಡರು ಪ್ರಮುಖ ಬೀದಿಯಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು. ಸಿಎಂ ಯಡಿಯೂರಪ್ಪ ತವರು ಬೂಕನಕೆರೆಯಲ್ಲಿ ಬಿಜೆಪಿ ಕಾರ್ಯಕರ್ತರು ಗೋಗಾಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಸಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಶ್ರೀರಂಗಪಟ್ಟಣ: ಕೆ.ಆರ್.ಪೇಟೆ ಉಪಚುನಾ ವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣ ಗೌಡ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸೋಮವಾರ ಬಿಜೆಪಿ ಕಾರ್ಯಕರ್ತರು ಪಟ್ಟಣ ದಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ವಿಜಯೋತ್ಸವ ಆಚರಿಸಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಶ್ರೀಧರ್ ಮಾತನಾಡಿ, ಇದೇ ಮೊದಲ ಬಾರಿಗೆ ಬಿಜೆಪಿ ಜಿಲ್ಲೆಯಲ್ಲಿ ಖಾತೆ ತೆರೆದಿದೆ. ಸತತ 3 ಮೂರು ಬಾರಿ ಜಯ ಗಳಿಸುವ ಮೂಲಕ ನಾರಾಯಣಗೌಡರು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆನ್ನಿಗೆ ನಿಂತ ತವರಿನ ಮತದಾರರಿಗೆ ಪಕ್ಷದ ಪರವಾಗಿ ಇದೇ ವೇಳೆ ಧನ್ಯವಾದ ತಿಳಿಸಿದರು. ಈ ವೇಳೆ ಬಿಜೆಪಿ ಮುಖಂಡ ರಾದ ಕೆ.ಎಸ್.ನಂಜುಂಡೇಗೌಡ, ಉಮಾ ಶಂಕರ್, ಉಮೇಶ್, ಹೊಸಹಳ್ಳಿ ಗ್ರಾಪಂ ಸದಸ್ಯ ಜಯರಾಂ ಸೇರಿದಂತೆ ಇನ್ನಿತರರಿದ್ದರು.

ಪಾಂಡವಪುರ: ಕೆ.ಆರ್.ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಜೆಪಿ ಕಾರ್ಯ ಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಜನ್ಮ ಭೂಮಿ ಮಂಡ್ಯದಲ್ಲಿ ಇದುವರೆಗೂ ಬಿಜೆಪಿ ಖಾತೆ ತೆರೆದಿಲ್ಲ ಎಂಬ ಕೊರಗಿತ್ತು. ಆದರೆ, ಈ ಉಪ ಚುನಾವಣೆಯಲ್ಲಿ ಕೆ.ಆರ್.ಪೇಟೆ ಜನತೆ ಸಿಎಂ ಯಡಿಯೂರಪ್ಪನವರ ಕೊರಗು ನೀಗಿಸಿ ದ್ದಾರೆ ಎಂದರು. ಈ ವೇಳೆ ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್, ಶಾಂತಿಪ್ರಸಾದ್, ಧನಂಜಯ್, ಅಶೋಕ್, ಶ್ರೀನಿವಾಸ್ ನಾಯ್ಕೆ, ಚಂದ್ರಶೇಖರ್ ಸೇರಿದಂತೆ ಹಲವರಿದ್ದರು.

ಮಳವಳ್ಳಿ: ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಮತದಾ ರರ ವಿಶ್ವಾಸ ಗಳಿಸುವಲ್ಲಿ ಬಿಜೆಪಿ ಯಶಸ್ವಿಯಾ ಗಿದ್ದು, ಮಂಡ್ಯ ಜಿಲ್ಲೆಗೆ ಅಂಟಿದ್ದ ಕಳಂಕ ತೊಡೆದು ಹಾಕಿದೆ ಎಂದು ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷ ಡಾ.ಶ್ರೀಶರ್ ತಿಳಿಸಿದರು.

ರಾಜ್ಯದ 15 ಕ್ಷೇತ್ರಗಳಿಗೆ ನಡೆದಿದ್ದ ಉಪ ಚುನಾವಣೆಯಲ್ಲಿ ಕೆ.ಆರ್.ಪೇಟೆ ಸೇರಿದಂತೆ 12 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಮುಂಭಾಗ ಪಟಾಕಿ ಸಿಡಿಸಿ ಸಾರ್ವ ಜನಿಕರಿಗೆ ಸಿಹಿ ಹಂಚಿ ವಿಜಯೋತ್ಸವ ಆಚರಿಸಿ ಅವರು ಮಾತನಾಡಿದರು.

ಈ ವೇಳೆ ಬಿಜೆಪಿ ರಾಜ್ಯ ರೈತ ಮೋರ್ಚಾ ಸದಸ್ಯ ಯಮದೂರು ಸಿದ್ದರಾಜು, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಕೆ.ಸಿ.ನಾಗೇಗೌಡ, ಪುರಸಭೆ ಸದಸ್ಯರಾದ ಕೃಷ್ಣ, ತಾಲೂಕು ಮಾಜಿ ಅಧ್ಯಕ್ಷ ಬಸವರಾಜು, ಡಾ.ಕಪನಿಗೌಡ, ಮುಖಂಡರಾದ ಅಪ್ಪಾಜಿಗೌಡ, ಶಿವಲಿಂಗೇಗೌಡ, ಸಿದ್ದರಾಜುಗಾಣಿಗ, ವೇದವತಿ ಸೇರಿದಂತೆ ಇತರರಿದ್ದರು.

ಮದ್ದೂರು: ಕೆ.ಆರ್.ಪೇಟೆ ಉಪ ಚುನಾ ವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಜಯ ಗಳಿಸಿದ ಹಿನ್ನೆಲೆಯಲ್ಲಿ ಸೋಮವಾರ ಪಟ್ಟಣದ ಸಂಜಯ ಚಿತ್ರ ಮಂದಿರ ಎದುರು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಪಣ್ಣೆದೊಡ್ಡಿ ರಘು ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ಖಾತೆ ತೆರೆ ಯುವ ಮೂಲಕ ಐತಿಹಾಸಿಕ ಮುನ್ನುಡಿ ಬರೆಯ ಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕಮಲ ಅರಳಿಸಲು ಇಂದಿನಿಂ ದಲೇ ಪಕ್ಷ ಸಂಘಟನೆ ಮಾಡಲಾಗುವುದು ಹಾಗೂ ಬಿ.ಎಸ್.ಯಡಿಯೂರಪ್ಪ ಅವರು ಮೂರೂವರೆ ವರ್ಷಗಳ ಕಾಲ ಜನಪರ ಕೆಲಸ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಮನ್‍ಮುಲ್ ನಿರ್ದೇಶಕ ಎಸ್.ಪಿ. ಸ್ವಾಮಿ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಗಳಾದ ಎಂ.ಸಿ.ಸಿದ್ದು, ಧನಂಜಯ, ಸಿ.ಕೆ.ಸ್ವಾಮಿ ಗೌಡ, ರಾಮೇಗೌಡ, ರವಿಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Translate »