ಕೆ.ಆರ್.ಪೇಟೆ ತಹಸೀಲ್ದಾರ್  ಅಪಹರಣ: ಸುರಕ್ಷಿತ ಬಿಡುಗಡೆ
ಮಂಡ್ಯ, ಮೈಸೂರು

ಕೆ.ಆರ್.ಪೇಟೆ ತಹಸೀಲ್ದಾರ್  ಅಪಹರಣ: ಸುರಕ್ಷಿತ ಬಿಡುಗಡೆ

August 4, 2018

ಭೇರ್ಯ: ಕೆ.ಆರ್.ಪೇಟೆ ತಾಲೂಕು ತಹಸೀಲ್ದಾರ್ ಕೆ.ಮಹೇಶ್ ಚಂದ್ರ ಅವರನ್ನು ಕಳೆದ ರಾತ್ರಿ ಅಪಹರಿಸಿದ್ದ ದುಷ್ಕರ್ಮಿಗಳು, ಇಂದು ಸಂಜೆ ಸುರಕ್ಷಿತವಾಗಿ ಬಿಡುಗಡೆ ಮಾಡಿದ್ದಾರೆ.

ಕೆ.ಆರ್.ಪೇಟೆಯಿಂದ ಕಳೆದ ರಾತ್ರಿ ಸುಮಾರು 10.30ರಲ್ಲಿ ಹೊರಟು ತಮ್ಮ ಮಾರುತಿ ಒಮ್ನಿ (ಕೆಎ 41 ಹೆಚ್ 1581) ಯಲ್ಲಿ ಕೆ.ಆರ್.ನಗರಕ್ಕೆ ಬರುತ್ತಿದ್ದ ತಹಶೀಲ್ದಾರ್‍ರನ್ನು ಇಲ್ಲಿಗೆ ಸಮೀಪದ ಚಿಕ್ಕವಡ್ಡರ ಗುಡಿ ಬಳಿ ದುಷ್ಕರ್ಮಿಗಳು ಅಪಹರಿಸಿ, ಇಂದು ಸಂಜೆ ಕೆ.ಆರ್. ಪೇಟೆ ಸಮೀಪದ ತೆಂಡೆಕೆರೆ ಗ್ರಾಮದ ಬಳಿ ಸುರಕ್ಷಿತವಾಗಿ ಬಿಡುಗಡೆ ಮಾಡಿದ್ದಾರೆ. ಅಪಹರಣಕಾರರಿಂದ ಬಿಡುಗಡೆ ಹೊಂದಿದ ತಹಸೀಲ್ದಾರ್‌ರರು ನೇರವಾಗಿ ಕೆ.ಆರ್.ಪೇಟೆ ಪೊಲೀಸ್ ಠಾಣೆಗೆ ಸಂಜೆ 5 ಗಂಟೆ ಸುಮಾರಿನಲ್ಲಿ ಆಗಮಿಸಿದರು. ಅದಾಗಲೇ ಅಪಹರಣಕ್ಕೊಳಗಾದ ತಹಸೀಲ್ದಾರ್ ಪತ್ತೆಗಾಗಿ 6 ತಂಡಗಳನ್ನು ರಚಿಸಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.

ದಕ್ಷಿಣ ವಲಯ ಐಜಿಪಿ ಸೌಮೇಂದು ಮುಖರ್ಜಿ, ಮೈಸೂರು ಎಸ್ಪಿ ಅಮಿತ್ ಸಿಂಗ್, ಮಂಡ್ಯ ಎಸ್ಪಿ ಜಿ.ರಾಧಿಕಾ ಅವರುಗಳು ಕೆ.ಆರ್.ನಗರ ದಲ್ಲಿ ಮೊಕ್ಕಾಂ ಹೂಡಿ ತನಿಖೆ ಆರಂಭಿಸಿದ್ದರು. ಅಷ್ಟರಲ್ಲೇ ತಹಸೀಲ್ದಾರ್ ಕೆ.ಆರ್.ಪೇಟೆ ಪೊಲೀಸ್ ಠಾಣೆಗೆ ಬಂದ ವಿಷಯವರಿತು ಹಿರಿಯ ಅಧಿಕಾರಿಗಳೆಲ್ಲರೂ ಕೆ.ಆರ್.ಪೇಟೆಗೆ ಆಗಮಿಸಿ ತಹಸೀಲ್ದಾರ್‌ರನ್ನು ಮೈಸೂರು ಎಸ್ಪಿಯವರು ತಮ್ಮ ಸುಪರ್ದಿಗೆ ತೆಗೆದುಕೊಂಡು ಅವರಿಗೆ ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದಾರೆ.

ಕೆ.ಆರ್.ಪೇಟೆ ಗ್ರಾಮ ಸಹಾಯಕ ಸುಧಾಕರ್ ಅವರು ನೀಡಿದ ದೂರಿನನ್ವಯ ಇಂದು ಬೆಳಿಗ್ಗೆಯೇ ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ.

ಕಳೆದ ರಾತ್ರಿ ತಾವು ಕೆ.ಆರ್.ಪೇಟೆಯಿಂದ ಕೆ.ಆರ್.ನಗರಕ್ಕೆ ಮಾರುತಿ ಒಮ್ನಿಯಲ್ಲಿ ಬರುತ್ತಿದ್ದಾಗ ಎರಡು ಬೈಕ್‍ಗಳಲ್ಲಿ ತಮ್ಮನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಕಣ್ಣಿಗೆ ಬಟ್ಟೆ ಕಟ್ಟಿ ಅಪಹರಿಸಿದ್ದರು. ಅವರು ಒಂದು ಕೊಠಡಿಯಲ್ಲಿ ನನ್ನನ್ನು ಕೂಡಿ ಹಾಕಿದ್ದು, ಯಾವುದೇ ರೀತಿಯ ದೈಹಿಕ ಹಲ್ಲೆ ನಡೆಸಲಿಲ್ಲ. ಯಾವುದೇ ಬೇಡಿಕೆಯನ್ನೂ ಇಡಲಿಲ್ಲ. ಸಂಜೆ ತೆಂಡೆಕೆರೆ ಬಳಿ ನನ್ನನ್ನು ಬಿಡುಗಡೆ ಮಾಡಿ ಹೋಗಿದ್ದಾರೆ. ದುಷ್ಕರ್ಮಿಗಳು ಕನ್ನಡ ಮತ್ತು ತಮಿಳು ಮಾತನಾಡುತ್ತಿದ್ದರು ಎಂದು ತಹಸೀಲ್ದಾರರು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಕಳೆದ ಸುಮಾರು ಒಂದೂವರೆ ವರ್ಷದಿಂದ ಕೆ.ಆರ್.ನಗರದಲ್ಲಿ ಸೇವೆ ಸಲ್ಲಿಸುತ್ತಿದ್ದ ತಹಸೀಲ್ದಾರ್ ಮಹೇಶ್ ಚಂದ್ರ ಅವರು ಜುಲೈ 22ರಂದು ಕೆ.ಆರ್.ಪೇಟೆಗೆ ವರ್ಗಾವಣೆ ಗೊಂಡಿದ್ದರು. ಕೆ.ಆರ್.ಪೇಟೆಯಲ್ಲಿ ತಹಸೀಲ್ದಾರ್‌ರಿಗೆ ಮೀಸಲಿಟ್ಟಿರುವ ವಸತಿ ಗೃಹದಲ್ಲಿ ವಾಸಿಸದೇ ಕೆ.ಆರ್.ನಗರದಲ್ಲಿ ಬಾಡಿಗೆ ಮನೆ ಪಡೆದು ಪ್ರತೀ ದಿನ ಹೋಗಿ ಬರುತ್ತಿದ್ದರು. ತಮ್ಮ ತಾಯಿಗೆ ಉಡುಪಿಯಲ್ಲಿ ಆಯುರ್ವೇದ ಚಿಕಿತ್ಸೆ ಕೊಡಿಸಬೇಕೆಂದು ಇಂದು ಮತ್ತು ನಾಳೆ ರಜೆ ಹಾಕಿದ್ದ ಅವರು, ನಿನ್ನೆ ರಾತ್ರಿ ಸುಮಾರು 10.30ರವರೆವಿಗೂ ಕಚೇರಿಯಲ್ಲಿ ಕೆಲಸ ಮಾಡಿ ಕೆ.ಆರ್.ನಗರಕ್ಕೆ ವಾಪಸ್ಸಾಗುತ್ತಿದ್ದರು.

ಅನಾಥವಾಗಿ ನಿಂತಿದ್ದ ಒಮ್ನಿ: ಇಂದು ಬೆಳಿಗ್ಗೆ ಚಿಕ್ಕವಡ್ಡರ ಗುಡಿ ಗ್ರಾಮದ ಬಳಿ ರಸ್ತೆಯಂಚಿನಲ್ಲಿ ಮಾರುತಿ ಒಮ್ನಿ ಅನಾಥವಾಗಿ ನಿಂತಿತ್ತು. ಅದರ ಬಳಿ ರಸ್ತೆಯಲ್ಲಿ ಒಂದು ಜೊತೆ ಶೂ ಬಿದ್ದಿತ್ತು. ಒಮ್ನಿ ಒಳಗೆ ಶರ್ಟ್‍ನ ಎರಡು ಬಟನ್‍ಗಳು ಬಿದ್ದಿದ್ದವು. ಇದನ್ನು ಕಂಡ ಗ್ರಾಮಸ್ಥರು ಸಾಲಿಗ್ರಾಮ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸಬ್ ಇನ್ಸ್‍ಪೆಕ್ಟರ್ ಮಹೇಶ್ ತೆರಳಿ ಸ್ಥಳ ಪರಿಶೀಲನೆ ನಡೆಸಿದಾಗ ಯಾರನ್ನೋ ಅಪಹರಿಸಿರಬಹುದು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಒಮ್ನಿ ಬಗ್ಗೆ ಪರಿಶೀಲನೆ ನಡೆಸಿದಾಗ ಅದು ಕೆ.ಆರ್.ಪೇಟೆ ತಹಸೀಲ್ದಾರ್‌ಗೆ ಸೇರಿದ ಖಾಸಗಿ ವಾಹನ ಎಂಬುದು ತಿಳಿದು ಬಂದ ಹಿನ್ನೆಲೆಯಲ್ಲಿ ಮಹೇಶ್ ಅವರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ರವಾನೆ ಮಾಡಿದ್ದಾರೆ.

ತಹಸೀಲ್ದಾರರು ಅಪಹರಿಸಲ್ಪಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಪೊಲೀಸರು ಚುರುಕಾದರು. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ತನಿಖೆ ಆರಂಭಿಸಿದರು. ಕೆ.ಆರ್.ಪೇಟೆ ಗ್ರಾಮ ಸಹಾಯಕ ಸುಧಾಕರ್ ಅವರು ತಮ್ಮ ತಹಸೀಲ್ದಾರ್ ಅಪಹರಣವಾಗಿದ್ದಾರೆ ಎಂದು ಲಿಖಿತ ದೂರನ್ನು ಸಲ್ಲಿಸಿದರು.

ಹಲವಾರು ಕೋನಗಳಿಂದ ತನಿಖೆ ಆರಂಭಿಸಿದ ಪೊಲೀಸ್ ಅಧಿಕಾರಿಗಳು ತಹಸೀಲ್ದಾರರ ಚಾಲಕರು, ಮನೆ ಕೆಲಸದವರು ಹಾಗೂ ಸಹೋದ್ಯೋಗಿಗಳನ್ನು ಕರೆಸಿ ಅವರಿಂದ ಮಾಹಿತಿ ಕಲೆ ಹಾಕಲು ಆರಂಭಿಸಿದರು. ಅದೇ ವೇಳೆ ಬೆಂಗಳೂರಿನ ಕೆಂಗೇರಿಯಲ್ಲಿದ್ದ ತಹಸೀಲ್ದಾರ್ ಪತ್ನಿ ಲತಾ ಅವರಿಗೆ ವಿಷಯ ತಿಳಿಸಲಾಗಿ ಅವರು ಕೆ.ಆರ್.ನಗರಕ್ಕೆ ಆಗಮಿಸಿದ್ದರು. ಕುಟುಂಬದವರಿಂದಲೂ ಸಹ ಮಾಹಿತಿ ಕಲೆ ಹಾಕಲಾಗುತ್ತಿತ್ತು. ತನಿಖೆಗೆ ರಚಿಸಿದ್ದ 6 ತಂಡಗಳಲ್ಲಿ ಒಂದು ತಂಡ ತಹಸೀಲ್ದಾರ್‍ರ ಮೊಬೈಲ್ ಲೊಕೇಷನ್ ಟ್ರ್ಯಾಪ್‍ನಲ್ಲೂ ಸಹ ತೊಡಗಿತ್ತು. ಅಷ್ಟರಲ್ಲೇ ಸಂಜೆ 5 ಗಂಟೆ ಸುಮಾರಿನಲ್ಲಿ ತಹಸೀಲ್ದಾರ್‍ರು ಕೆ.ಆರ್.ಪೇಟೆ ಪೊಲೀಸ್ ಠಾಣೆಗೆ ಖುದ್ದು ಹಾಜರಾದರು.

ಕಳೆದ ರಾತ್ರಿ ದುಷ್ಕರ್ಮಿಗಳಿಂದ ಅಪಹರಣಕ್ಕೊಳಗಾಗಿದ್ದ ಕೆ.ಆರ್.ಪೇಟೆ ತಹಸೀಲ್ದಾರ್ ಮಹೇಶ್ ಚಂದ್ರ ಅವರು ಇಂದು ಸಂಜೆ 5 ಗಂಟೆ ಸುಮಾರಿನಲ್ಲಿ ಖುದ್ದು ಅವರಾಗಿಯೇ ಕೆ.ಆರ್.ಪೇಟೆ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ. ತಹಸೀಲ್ದಾರರಿಂದ ಪ್ರಾಥಮಿಕವಾಗಿ ವಿಚಾರಣೆ ನಡೆಸಲಾಗಿದೆ. ಮೊದಲಿಗೆ ಅವರು ಎರಡು ಬೈಕ್‍ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ತಮ್ಮನ್ನು ಅಪಹರಿಸಿದ್ದರು ಎಂದು ಹೇಳಿದರಾದರೂ, ನಂತರ ಅಪಹರಣಕ್ಕೆ ಒಂದು ಕಾರು ಬಳಕೆಯಾಗಿತ್ತು ಎಂದಿದ್ದಾರೆ. ಆದರೆ ಯಾವ ಕಾರು? ಎಂಬುದನ್ನು ಅವರು ಇನ್ನೂ ಹೇಳಿಲ್ಲ. ಅಪಹರಣಕಾರರು ತಮಗೆ ದೈಹಿಕವಾಗಿ ಹಲ್ಲೆ ನಡೆಸಿಲ್ಲ ಎಂದಿದ್ದಾರೆ. ಅವರು ತೀರಾ ಬಳಲಿರುವ ಕಾರಣದಿಂದ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಆಘಾತಕ್ಕೊಳಗಾಗಿರುವ ಅವರು, ಸುಧಾರಿಸಿಕೊಂಡ ನಂತರ ಸಂಪೂರ್ಣ ಮಾಹಿತಿಯನ್ನು ಪಡೆಯಬೇಕಾಗಿದೆ. – ಅಮಿತ್ ಸಿಂಗ್, ಮೈಸೂರು ಎಸ್ಪಿ

Translate »