ಚಾಮರಾಜ ಕ್ಷೇತ್ರ ವ್ಯಾಪ್ತಿ ಅಕ್ರಮ ಗುಡಿಸಲು ತೆರವಿಗೆ ಶಾಸಕ ನಾಗೇಂದ್ರ ಸೂಚನೆ
ಮೈಸೂರು

ಚಾಮರಾಜ ಕ್ಷೇತ್ರ ವ್ಯಾಪ್ತಿ ಅಕ್ರಮ ಗುಡಿಸಲು ತೆರವಿಗೆ ಶಾಸಕ ನಾಗೇಂದ್ರ ಸೂಚನೆ

August 4, 2018

ಮೈಸೂರು:  ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಗುಡಿಸಲುಗಳನ್ನು ಕೂಡಲೇ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಶಾಸಕ ಎಲ್.ನಾಗೇಂದ್ರ, ಅಧಿಕಾರಿಗಳಿಗೆ ಸೂಚಿಸಿದರು.

ಶುಕ್ರವಾರ ಮರುವಿಂಗಡಿತ 4ನೇ ವಾರ್ಡ್ ವ್ಯಾಪ್ತಿಯಲ್ಲಿರುವ ಲೋಕನಾಯಕನಗರ, ಸೂರ್ಯಬೇಕರಿ, ಕುಂಬಾರಕೊಪ್ಪಲು ಇನ್ನಿತರ ಬಡಾವಣೆಗಳಲ್ಲಿ ಪಾದಯಾತ್ರೆ ನಡೆಸಿ, ಸಮಸ್ಯೆ ಆಲಿಸಿದ ಅವರು, ಲಿಂಗಯ್ಯನ ಕೆರೆ ಭಾಗದಲ್ಲಿ ತಲೆಎತ್ತಿರುವ ಗುಡಿಸಲುಗಳನ್ನು ಕಂಡು, ಚಾಮರಾಜ ಕ್ಷೇತ್ರವನ್ನು ಗುಡಿಸಲು ಮುಕ್ತವಾಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸಕ್ರಿಯರಾಗಬೇಕು. ಎಲ್ಲೆಂದರಲ್ಲಿ ನಿರ್ಮಿಸಿಕೊಂಡಿರುವ ಗುಡಿಸಲು, ಜೋಪಡಿಗಳನ್ನು ತೆರವುಗೊಳಿಸಬೇಕೆಂದು ಎಚ್ಚರಿಕೆ ನೀಡಿದರಲ್ಲದೆ, ಗಣಪತಿ ದೇವಸ್ಥಾನದ ಬಳಿ ಮ್ಯಾನ್‍ಹೋಲ್ ದುರಸ್ಥಿಯನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಸೂಚಿಸಿದರು.

ಬಸವನಗುಡಿ ಸಮೀಪ ಫುಟ್‍ಪಾತ್ ಅತಿಕ್ರಮಣದ ಬಗ್ಗೆ ಸಾರ್ವಜನಿಕರು ದೂರಿದ್ದನ್ನು ಗಂಭಿರವಾಗಿ ಪರಿಗಣಿಸಿದ ನಾಗೇಂದ್ರ ಅವರು, ಅಲ್ಲಿದ್ದ ಫುಟ್‍ಪಾತ್ ವ್ಯಾಪಾರಿಗಳನ್ನು ಕರೆಸಿ, ಪಾದಚಾರಿಗಳಿಗೆ ತೊಂದರೆಯಾಗದಂತೆ ವ್ಯಾಪಾರ ಮಾಡಬೇಕು. ಇಲ್ಲವಾದಲ್ಲಿ ಎಲ್ಲರನ್ನೂ ತೆರವುಗೊಳಿಸಲಾಗುತ್ತದೆ ಎಂದು ಎಚ್ಚರಿಸಿದರು. ಇಲ್ಲಿನ ಪ್ರಯಾಣಿಕರ ತಂಗುದಾಣದ ಬಳಿ ರಾಶಿ ಹಾಕಿರುವ ಕಟ್ಟಡ ಸಾಮಗ್ರಿಗಳನ್ನು ಹಾಗೂ ಶೆಲ್ಟರ್ ಒಳಭಾಗದಲ್ಲೇ ಎಳನೀರು ವ್ಯಾಪಾರ ಮಾಡುತ್ತಿದ್ದು, ಪ್ರಯಾಣಿಕರಿಗೆ ತೊಂದರೆಯಾಗಿದೆ. ಇನ್ನು ಮುಂದೆ ಇದಕ್ಕೆ ಅವಕಾಶ ಮಾಡಿಕೊಡಬಾರದೆಂದು ಸೂಚಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎನ್.ನಾಗೇಂದ್ರ ಅವರು, ಹಳೆಯ 27ನೇ (ಮರುವಿಂಗಡಿತ 4ನೇ ವಾರ್ಡ್) ವಾರ್ಡ್‍ನಲ್ಲಿ ಮೂಲ ಸೌಕರ್ಯಗಳ ಕೊರತೆ ಬಹಳಷ್ಟಿದೆ. ರಸ್ತೆ, ಚರಂಡಿ, ಯುಜಿಡಿ, ಬೀದಿ ದೀಪಗಳ ವ್ಯವಸ್ಥೆ ಕೆಲವೆಡೆ ಸಮರ್ಪಕವಾಗಿಲ್ಲ. ಆರೋಗ್ಯಾಧಿಕಾರಿಗಳೊಂದಿಗೆ ಪರಿಶೀಲಿಸಿ, ಕೂಡಲೇ ಎಲ್ಲಾ ಕಡೆ ಪಾರ್ಥೇನಿಯಂ ಕೀಳಿಸಿ, ಸ್ವಚ್ಛತೆ ಹಾಗೂ ದುರಸ್ಥಿ ಕಾರ್ಯಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಕೆಆರ್‍ಎಸ್ ಮುಖ್ಯರಸ್ತೆಯಲ್ಲಿ ಯುಜಿಡಿ ಪೈಪ್‍ಗಳ ದುರಸ್ಥಿಗೆ 17 ಲಕ್ಷ ರೂ. ಕಾಮಗಾರಿಗೆ ಅನುಮೋದನೆ ಸಿಕ್ಕಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಅನುದಾನಕ್ಕೆ ಒತ್ತಾಯಿಸುತ್ತೇನೆ ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ನಗರ ಪಾಲಿಕೆ ಶೇ.14ರ ಅನುದಾನದಲ್ಲಿ ಸೂರ್ಯಬೇಕರಿ ವೃತ್ತದಿಂದ ವಾಟರ್‍ಟ್ಯಾಂಕ್‍ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಬಳಿಕ ವಿಧಾನ ಪರಿಷತ್ ಮಾಜಿ ಸದಸ್ಯರು ಹಾಗೂ ಬಿಜೆಪಿ ಹಿರಿಯ ಮುಖಂಡರಾದ ಡಿ.ಮಾದೇಗೌಡರನ್ನು ಭೇಟಿ ಮಾಡಿ, ಸಂಸದ ಪ್ರತಾಪ್‍ಸಿಂಹ ಅವರ ಸಾಧನೆ ಪುಸ್ತಕವನ್ನು ನೀಡಿದರು.

ಈ ಸಂದರ್ಭದಲ್ಲಿ ವಲಯಾಧಿಕಾರಿ ನಾಗರಾಜ್, ಅಭಿವೃದ್ಧಿ ಅಧಿಕಾರಿ ವೀರೇಶ್, ಒಳಚರಂಡಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಜಾದವ್ ಸೇರಿದಂತೆ ಪಾಲಿಕೆಯ ಅಧಿಕಾರಿಗಳು, ಬಿಜೆಪಿ ವಾರ್ಡ್ ಅಧ್ಯಕ್ಷ ರಮೇಶ್, ಮುಖಂಡರಾದ ಅರುಣ್‍ಗೌಡ, ಚಿಕ್ಕ ವೆಂಕಟು, ಸುಖದಾರೆ ಕಿರಣ್, ರಾಜೇಂದ್ರ, ಶ್ರೀನಾಥ್, ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಅವೈಜ್ಞಾನಿಕ ಮೀಸಲಾತಿ ಪ್ರಕಟ

ಮೈಸೂರು ನಗರ ಪಾಲಿಕೆ ಚುನಾವಣಾ ಮೀಸಲಾತಿ ಸಂಬಂಧ ಪ್ರತಿಕ್ರಿಯಿಸಿದ ಶಾಸಕ ಎಲ್.ನಾಗೇಂದ್ರ ಅವರು, ಯಾವ ಜನಪ್ರತಿನಿಧಿಗಳೊಂದಿಗೆ ಚರ್ಚಿಸದೆ ಸರ್ಕಾರ ಅವೈಜ್ಞಾನಿಕ ಮೀಸಲಾತಿ ಪಟ್ಟಿ ಪ್ರಕಟಿಸಿದೆ. ಇದರಿಂದ ಪರಿಶಿಷ್ಟ ಜಾತಿ, ಪಂಗಡದ, ಹಿಂದುಳಿದ ವರ್ಗ ಹಾಗೂ ಮಹಿಳಾ ಆಕಾಂಕ್ಷಿಗಳಿಗೆ ಅನ್ಯಾಯವಾಗಿದೆ. ಸ್ಥಳೀಯರೂ ಅವಕಾಶ ವಂಚಿತರಾಗಿದ್ದಾರೆ.

ಹೊರಗಿನಿಂದ ಬಂದವರಿಗೆ ವಾರ್ಡ್‍ನ ಸಮಸ್ಯೆ ಬಗ್ಗೆ ಅರಿವಿರುವುದಿಲ್ಲ. ಕನಿಷ್ಟ 32 ವಾರ್ಡ್‍ಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಬೇಕಿತ್ತು. ಮೀಸಲಾತಿಯನ್ವಯ ಪರಿಶಿಷ್ಟ ಜಾತಿಗೆ ಇನ್ನೂ 2 ವಾರ್ಡ್ ಸಿಗಬೇಕಿತ್ತು. ಮೀಸಲಾತಿ ಸರಿಯಿಲ್ಲವೆಂದು ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಎಲ್ಲಾ ನ್ಯೂನತೆಯನ್ನೂ ಸರಿಪಡಿಸಿಕೊಂಡು ಡಿಸೆಂಬರ್ ತಿಂಗಳಲ್ಲಿ ಚುನಾವಣೆ ನಡೆಸಿದರೆ ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Translate »