ಶಾಸಕ ನಾಗೇಂದ್ರರಿಂದ ನಿವಾಸಿಗಳ ಅಹವಾಲು ಸ್ವೀಕಾರ
ಮೈಸೂರು

ಶಾಸಕ ನಾಗೇಂದ್ರರಿಂದ ನಿವಾಸಿಗಳ ಅಹವಾಲು ಸ್ವೀಕಾರ

June 23, 2019

ಮೈಸೂರು: ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರು ಶನಿವಾರ ಬಿ.ಬಿ.ಕೇರಿಯಲ್ಲಿ ಜನಸ್ಪಂಧನಾ ಕಾರ್ಯಕ್ರಮ ನಡೆಸಿ, ನಿವಾಸಿಗಳ ಸಮಸ್ಯೆ ಆಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಖಾಲಿ ಸರ್ಕಾರಿ ಭೂಮಿಯನ್ನು ಗುರುತಿಸಿ ಅಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಮನೆಗಳನ್ನು ನಿರ್ಮಿಸಿಕೊಡು ವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಈಗಾಗಲೇ 200 ಮನೆಗಳನ್ನು ನಿರ್ಮಿಸ ಲಾಗಿದ್ದು, ಕೆಲವೇ ದಿನಗಳಲ್ಲಿ ಫಲಾನುಭವಿಗಳಿಗೆ ವಿತರಿಸಲಾಗುವುದು. ಹೆಂಚಿನ ಅಥವಾ ಶೀಟ್ ಮನೆಗಳ ನಿವಾಸಿಗಳಿಗೆ ಪ್ರಧಾನಮಂತ್ರಿಗಳ ಆವಾಸ್ ಯೋಜನೆಯಡಿ ಸಹಾಯಧನ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ದುರಸ್ತಿಯಾಗಿರುವ ಒಳಚರಂಡಿ ಕೊಳವೆಗಳನ್ನು ಗುರುತಿಸಿ ಶೀಘ್ರ ಬದಲಾಯಿಸುವ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ನೂತನ ಪೈಪ್‍ಲೇನ್‍ಗೆ ಅಗತ್ಯ ಅನುದಾನ ನೀಡಲಾಗುವುದು. ಇಲ್ಲಿನ ಮಾರಮ್ಮ ದೇವಾಲಯದ ಕಾಂಪೌಂಡ್ ನಿರ್ಮಾಣಕ್ಕೆ 5 ಲಕ್ಷ ರೂ., ಪಟ್ಟಲದಮ್ಮ ದೇವಾಲಯದ ಜೀರ್ಣೋದ್ಧಾರಕ್ಕೆ 3 ಲಕ್ಷ ರೂ. ಹಾಗೂ ದೊಡ್ಡಮ್ಮ ತಾಯಿ ದೇವಾಲಯಕ್ಕೆ 2 ಲಕ್ಷ ರೂ. ಅನುದಾನ ಶಾಸಕರ ಅನುದಾನದಲ್ಲಿ ಬಿಡುಗಡೆಗೊಳಿಸಿದ್ದೇನೆಂದು ತಿಳಿಸಿದರು. ನಗರ ಪಾಲಿಕೆ ಸದಸ್ಯರಾದ ನಾಸಿರುದ್ದೀನ್ ಬಾಬು, ರಂಗಸ್ವಾಮಿ, ಮುಖಂಡರಾದ ಸಿ.ವಿ.ನಾಗರಾಜ, ಗಂಗಣ್ಣ, ದುರ್ಗಣ್ಣ, ದಾಸ್‍ಪ್ರಕಾಶ್, ಚಿಕ್ಕವೆಂಕಟು, ಸುರೇಂದ್ರಬಾಬು, ನಾಗ ಮತ್ತಿತರರು ಉಪಸ್ಥಿತರಿದ್ದರು.

Translate »