ಮೈಸೂರು: ಬಂಡಿಪುರ ಅಭಯಾರಣ್ಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ವಾಹನಗಳ ಸಂಚಾರ ನಿಷೇಧವನ್ನು ಹಿಂಪಡೆಯುವ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದೆ ಇಲ್ಲ. ಕೇರಳ ಸರ್ಕಾರ ಮಾಡಿರುವ ಮೇಲ್ಸೇತುವೆ ನಿರ್ಮಾಣ ಹಾಗೂ ರಾತ್ರಿ ಸಂಚಾರ ನಿರ್ಬಂಧ ಸಡಿಲಿಕೆ ಮನವಿಯನ್ನು ತಿರಸ್ಕರಿಸಿ, ವನ್ಯಜೀವಿಗಳ ಕಾಪಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ರಾಜ್ಯ ಅರಣ್ಯ ಸಚಿವ ಆರ್.ಶಂಕರ್ ಸ್ಪಷ್ಟಪಡಿಸಿದ್ದಾರೆ.
ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಶುಕ್ರವಾರ ಮೈಸೂರಿಗೆ ಆಗಮಿಸಿದ್ದ ಅವರು, ಮೈಸೂರಿನ ಸರ್ಕಾರಿ ಅತಿಥಿ ಗೃಹ ಹಾಗೂ ಚಾಮುಂಡಿಬೆಟ್ಟ ದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಬಂಡಿಪುರ ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 212 ಹಾಗೂ 67ರಲ್ಲಿ ವಾಹನಗಳ ರಾತ್ರಿ ಸಂಚಾರ ನಿರ್ಬಂಧಿಸಿರುವ ಕ್ರಮದಿಂದ ಹಿಂದೆ ಸರಿಯುವಂತೆ ಕೇರಳ ಸರ್ಕಾರ ಪದೇ ಪದೆ ಒತ್ತಡ ತರುತ್ತಿದೆ. ಆದರೆ ಕೇರಳದ ಲಾಬಿಗೆ ಮಣಿಯದೆ, ರಾತ್ರಿ ಸಂಚಾರವನ್ನು ನಿರ್ಬಂಧಿಸಿ ದಿಟ್ಟ ನಿಲುವು ತಾಳಲಾಗಿದೆ. ಈ ಹಿಂದೆ ಆನೆ, ಹುಲಿ ಸೇರಿದಂತೆ ಅಪರೂಪದ ಪ್ರಾಣಿಗಳು ವಾಹನಗಳಿಗೆ ಬಲಿಯಾಗಿವೆ. ಇಂತಹ ಘಟನೆಗಳು ಮರುಕಳಿಸುವುದಕ್ಕೆ ಅವಕಾಶ ನೀಡುವುದಿಲ್ಲ. ಯಥಾಸ್ಥಿತಿ ಕಾಪಾಡುವುದಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಕೇರಳ ಸರ್ಕಾರ ಕೇಂದ್ರದ ಮೇಲೆ ಒತ್ತಡ ತಂದು ಆ ಮೂಲಕ ರಾತ್ರಿ ಸಂಚಾರ ಪುನರಾರಂಭಕ್ಕೆ ಯತ್ನಿಸಿದೆ. ಕೇಂದ್ರ ಸರ್ಕಾರ ಫ್ಲೈಓವರ್ ನಿರ್ಮಾಣ, ಜೊತೆಗೆ ವಾಹನ ಸಂಚಾರ ನಿರ್ಬಂಧ ತೆರವು ಸಂಬಂಧ ಅಭಿಪ್ರಾಯ ಕೇಳಿದೆ. ಇದನ್ನು ಮುಖ್ಯಮಂತ್ರಿಗಳು ಪರಿಶೀಲಿಸುವುದಾಗಿ ಹೇಳಿದ್ದಾರೆ. ಈ ಮಧ್ಯೆ ಕೇರಳ ಸರ್ಕಾರ ರಾತ್ರಿ ಸಂಚಾರ ನಿಷೇಧ ಹಿಂಪಡೆಯುವುದಕ್ಕೆ ಕರ್ನಾಟಕ ಸಮ್ಮತಿಸಿದೆ ಎಂದು ಹೇಳುತ್ತಿದೆ. ವಾಸ್ತವವಾಗಿ ಯಥಾಸ್ಥಿತಿ ಕಾಯ್ದುಕೊಳ್ಳುವ ಮೂಲಕ ವನ್ಯಜೀವಿಗಳ ಹಿತ ಕಾಯುವುದು ನಮ್ಮ ಗುರಿಯಾಗಿದೆ. ಕೇರಳ ಸರ್ಕಾರ ಫ್ಲೈಓವರ್ ನಿರ್ಮಾಣ ಮಾಡಬೇಕು ಹಾಗೂ ರಾತ್ರಿ ಸಂಚಾರ ಪುನರಾರಂಭಿಸಬೇಕು ಎಂದು ಹಲವು ವರ್ಷಗಳಿಂದ ಒತ್ತಡ ಹೇರುತ್ತಲೇ ಬಂದಿದೆ ಎಂದರು. ಕೇಂದ್ರ ಬರೆದ ಪತ್ರ ಕುರಿತು ಪ್ರತಿಕ್ರಿಯಿಸಿದ ಅವರು, ರಾತ್ರಿ ಸಂಚಾರವನ್ನು ಮತ್ತೆ ಆರಂಭಿಸದಂತೆ ಪರಿಸರ ವಾದಿಗಳು ಮನವಿ ಮಾಡಿದ್ದಾರೆ.
ಸಾಕಷ್ಟು ಆಕ್ಷೇಪಗಳು ವ್ಯಕ್ತವಾಗಿವೆ. ಇದರ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅಲ್ಲದೆ ಕೇಂದ್ರದ ಪತ್ರಕ್ಕೆ ಸೂಕ್ತ ಉತ್ತರ ನೀಡಿರು ವುದಲ್ಲದೆ, ನಿರ್ಬಂಧದಿಂದ ಹಿಂದೆ ಸರಿಯುವ ಪ್ರಸ್ತಾವನೆಯನ್ನು ತಿರಸ್ಕರಿಸಿರುವುದಾಗಿ ಹೇಳಿದ್ದೇವೆ.
ಕೇರಳ ಸರ್ಕಾರದ ಒತ್ತಾಯಕ್ಕೆ ಮಣಿದು ಫ್ಲೈಓವರ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡರೆ ಸುಮಾರು ಎರಡರಿಂದ ಮೂರು ವರ್ಷಗಳ ಕಾಲ ಕಾಮಗಾರಿ ನಡೆಸಬೇಕಾಗುತ್ತದೆ. ಅರಣ್ಯದಲ್ಲಿನ ಪ್ರಾಣಿ-ಪಕ್ಷಿ ಸಂಕುಲಕ್ಕೆ ತೊಂದರೆಯಾಗುತ್ತದೆ. ಇದನ್ನು ಮನಗಂಡು ಫ್ಲೈಓವರ್ ನಿರ್ಮಾಣ ಅಸಾಧ್ಯ ಎಂಬ ಅಭಿಪ್ರಾಯ ಮಂಡಿಸಲಾಗಿದೆ ಎಂದು ಹೇಳಿದರು.
ಕೇರಳಕ್ಕೆ ಹೋಗುವವರಿಗಾಗಿಯೇ ಈಗಾಗಲೇ 75 ಕೋಟಿ ರೂಗಳ ವೆಚ್ಚದಲ್ಲಿ ತಿತಿಮತಿಯಿಂದ ಕುಟ್ಟವರೆಗೆ ಪರ್ಯಾಯ ಮಾರ್ಗ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಅರ್ಧ ಗಂಟೆ ಹೆಚ್ಚಿನ ಅವಧಿ ಪ್ರಯಾಣಕ್ಕೆ ತೆಗೆದುಕೊಳ್ಳುತ್ತದೆ. ಆದರೆ ಕೇರಳ ಸರ್ಕಾರ ಮಾತ್ರ ಬಂಡಿಪುರ ಮೂಲಕ ಹಾದು ಹೋಗಿರುವ ರಸ್ತೆಯಲ್ಲಿಯೇ ಅವಕಾಶ ನೀಡುವಂತೆ ಕೇಳುತ್ತಿದೆ. ಆದರೆ ನಮ್ಮ ನಿರ್ಧಾರ ಅಚಲವಾಗಿದ್ದು, ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ತಿಳಿಸಿದರು.
ಆನೆಗಳ ಹಾವಳಿ ನಿಯಂತ್ರಣಕ್ಕೆ ಕ್ರಮ: ಕೊಡಗು ಸೇರಿದಂತೆ ವಿವಿಧೆಡೆ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಕಾಡಿನಿಂದ ಆನೆಗಳು ಹೊರ ಬರದಂತೆ ಈ ಹಿಂದೆ ಕಂದಕ ನಿರ್ಮಾಣ, ಸೋಲಾರ್ ಬೇಲಿ ಅಳವಡಿಸಲಾ ಗಿತ್ತು.
ಆದರೆ ಆನೆಗಳು ಕಂದಕವನ್ನೇ ದಾಟುತ್ತಿವೆ. ಸೋಲಾರ್ ತಂತಿ ಬೇಲಿಯನ್ನು ಭೇದಿಸಿ ನಾಡಿಗೆ ಬರುತ್ತಿವೆ. ಇದನ್ನು ಮನಗಂಡು ರೈಲ್ವೆ ಹಳಿಯ ತಡೆಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಹೆಚ್ಚಿನ ಅನುದಾನ ಬೇಕಾಗುತ್ತದೆ. ಅರಣ್ಯ ಇಲಾಖೆಗೆ ಬಜೆಟ್‍ನಲ್ಲಿ 1200 ಕೋಟಿ ರೂ.ಗಳ ಬೇಡಿಕೆ ಇಟ್ಟಿದ್ದೆವು. ಆದರೆ ರೈತರ ಸಾಲ ಮನ್ನಾ ಮಾಡುವ ಹಿನ್ನೆಲೆಯಲ್ಲಿ ಹೆಚ್ಚಿನ ಅನುದಾನ ನೀಡಿಲ್ಲ. ಆದರೂ ಆನೆಗಳ ಚಲನ-ವಲನ ಗಮನಿಸಲು ರೇಡಿಯೋ ಕಾಲರ್ ಅಳವಡಿಸುವ ಚಿಂತನೆ ಮಾಡಲಾಗಿದೆ.
ಹಂತ-ಹಂತವಾಗಿ ಆನೆ ಹಾವಳಿಯನ್ನು ನಿಯಂತ್ರಿಸಲಾ ಗುತ್ತದೆ ಎಂದು ಹೇಳಿದರು. ಕಾಡಂಚಿನ ಗ್ರಾಮಗಳಲ್ಲಿ ಸೋಲಾರ್ ಬೇಲಿಗೆ ವಿದ್ಯುತ್ ಸಂಪರ್ಕ ನೀಡುವ ಮೂಲಕ ಆನೆ, ಹುಲಿ ಸೇರಿದಂತೆ ಇನ್ನಿತರ ಪ್ರಾಣಿಗಳು ಮೃತಪಡುತ್ತಿವೆ. ಇಂತಹ ಘಟನೆ ತಡೆಗೆ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಎಪಿಸಿಸಿಎಫ್ ಪುನಾಟಿ ಶ್ರೀಧರ್, ಸಿಸಿಎಫ್ ಕರುಣಾಕರ್, ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಡಿಸಿಎಫ್ ಹನುಮಂತಪ್ಪ, ಆರ್‍ಎಫ್‍ಓಗಳಾದ ಗೋವಿಂದರಾಜು, ದೇವರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.